ತಿರುವನಂತಪುರ: ಕೇರಳದ ಚಿತ್ರ ನಿರ್ದೇಶಕ ಹಾಗೂ ಬಿಜೆಪಿಯ ಪ್ರಮುಖ ಮುಸ್ಲಿಂ ನಾಯಕ ಅಲಿ ಅಕ್ಬರ್ ಅವರು ಪಕ್ಷದ ರಾಜ್ಯ ಸಮಿತಿ ಸದಸ್ಯತ್ವ ಸೇರಿದಂತೆ ಎಲ್ಲಾ ಸ್ಥಾನಗಳಿಗೆ ಮಂಗಳವಾರ ರಾಜೀನಾಮೆ ನೀಡಿದ್ದಾರೆ.
ಪಕ್ಷದ ಸದಸ್ಯತ್ವದಲ್ಲಿ ಮುಂದುವರಿಯುವುದಾಗಿ ತಿಳಿಸಿರುವ ಅವರು, 'ಬಿಜೆಪಿ ರಾಜ್ಯ ಕಾರ್ಯದರ್ಶಿ ಎ.ಕೆ.ನಜೀರ್ ಅವರ ವಿರುದ್ಧ ಪಕ್ಷದ ರಾಜ್ಯ ಘಟಕವು ಈಚೆಗೆ ತೆಗೆದುಕೊಂಡಿರುವ ಕ್ರಮವು ನೋವು ತರಿಸಿದೆ. ಇದು ಪಕ್ಷದ ಎಲ್ಲಾ ಜವಾಬ್ದಾರಿಗಳನ್ನು ತೊರೆಯಲು ಪ್ರೇರೇಪಿಸಿದೆ' ಎಂದಿದ್ದಾರೆ.
ತಮ್ಮ ನಿರ್ಧಾರವನ್ನು ಫೇಸ್‌ಬುಕ್ ಪೋಸ್ಟ್ ಮೂಲಕ ಪ್ರಕಟಿಸಿರುವ ಅಲಿ ಅಕ್ಬರ್, 'ಒಬ್ಬ ಮುಸ್ಲಿಂ ವ್ಯಕ್ತಿಯಾಗಿ ಬಿಜೆಪಿಯಲ್ಲಿ ಕಾರ್ಯ ನಿರ್ವಹಿಸುವಾಗ ತಮ್ಮದೇ ಕುಟುಂಬ ಹಾಗೂ ಸಮುದಾಯದಿಂದ ಎದುರಿಸಿರುವ ಅವಮಾನ ಮತ್ತು ನಿಂದನೆಗಳನ್ನು ಅರಗಿಸಿಕೊಳ್ಳುವುದು ಕಷ್ಟ' ಎಂದು ಹೇಳಿದ್ದಾರೆ.
ಇಂತಹ ನೋವಿನ ನಿರ್ಧಾರ ಕೈಗೊಂಡಿರುವುದನ್ನು ಪಕ್ಷದ ನಾಯಕತ್ವ ಅರ್ಥಮಾಡಿಕೊಳ್ಳಬೇಕು ಎಂದಿದ್ದಾರೆ.
1921ರಲ್ಲಿ ಉತ್ತರ ಕೇರಳದಲ್ಲಿ ನಡೆದ ಮೋಪ್ಲಾ ಕ್ರಾಂತಿಯನ್ನು ಆಧರಿಸಿರುವ ಚಿತ್ರದಲ್ಲಿ ಅಲಿ ಅಕ್ಬರ್ ಅವರು ಈಚೆಗೆ ತೊಡಗಿಸಿಕೊಂಡಿದ್ದರು.