ಮಂಗಳೂರು: ಕರಾವಳಿಯ ಸಾಂಸ್ಕೃತಿಕ ಲೋಕದ ಕೋಲ್ಮಿಂಚು ಹುಲಿ ಕುಣಿತ. ಹುಲಿ ಕುಣಿತ ಲಕ್ಷಾಂತರ ಮಂದಿ ಅಭಿಮಾನಿಗಳೂ ಇದ್ದಾರೆ. ವಿಶೇಷವಾದ ಹುಲಿ ಕುಣಿತಕ್ಕೆ ಫಿದಾ ಆಗದವರೇ ಇಲ್ಲ. ನವರಾತ್ರಿಯ ಸಂದರ್ಭದಲ್ಲಿ ತುಳುನಾಡಿನಲ್ಲಿ ಕಾಣಸಿಗುವ ಹುಲಿಕುಣಿತಕ್ಕೆ ಈಗ ವಿಶ್ವ ಮಾನ್ಯತೆ ಬಂದಿದೆ.
ವಿಶ್ವದ ಅತ್ಯಂತ ಪ್ರತಿಷ್ಠಿತ ದುಬೈ ಎಕ್ಸ್‌ಪೋದಲ್ಲಿ ಕುಡ್ಲದ ಪಿಲಿನಲಿಕೆಗೆ ವೇದಿಕೆ ನೀಡಲಾಗಿದೆ. ಈ ಮೂಲಕ ತುಳುನಾಡಿನ ಪ್ರಸಿದ್ಧ ಜಾನಪದ ಕಲೆಗೆ ಐಸಿಹಾಸಿಕ ಮನ್ನಣೆ ದೊರೆತಿದೆ.
192 ರಾಷ್ಟ್ರಗಳು ಭಾಗವಹಿಸುವ ಈ ಎಕ್ಸ್‌ಪೋದಲ್ಲಿ ಪ್ರದರ್ಶನ ನೀಡಲು ಹುಲಿಕುಣಿತ ತಂಡಕ್ಕೆ ಆಹ್ವಾನ ನೀಡಲಾಗಿದೆ. ಭಾರತದ ಕೇವಲ 8 ಕಲಾತಂಡಗಳಿಗೆ ಈ ಮನ್ನಣೆ ದೊರೆತಿದ್ದು, ವಿಶ್ವ ವೇದಿಕೆಯಲ್ಲಿ ತಾಸೆಯ ಬಡಿತಕ್ಕೆ ಕರಾವಳಿಯ ಹುಲಿ ವೇಷಧಾರಿಗಳು ಘರ್ಜಿಸಲಿದ್ದಾರೆ.
ಹುಲಿ ವೇಷ ಅಥವಾ ಪಿಲಿ ವೇಷ ತುಳುನಾಡಿನ ಬಹಳ ಶ್ರೇಷ್ಠವಾದ ಮತ್ತು ಜನಪ್ರಿಯ ಜನಪದ ಕಲೆ. ಕರಾವಳಿ ಮಣ್ಣಿನ ಸಂಸ್ಕೃತಿಯನ್ನು ಬಿಂಬಿಸುವ, ವೇಷಕಟ್ಟಿ ದೇವಿಯೆದುರು ಶರಣಾಗುವ ಈ ಜನಪದೀಯ ಆಚರಣೆಗೆ ಅನಾದಿ ಕಾಲದ ಇತಿಹಾಸವಿದೆ. ಈ ಕಲೆಯ ಬಗ್ಗೆ ಹಲವಾರು ಧಾರ್ಮಿಕ ನಂಬಿಕೆಗಳಿವೆ. ಊರಲ್ಲಿ ತಾಸೆಯ ಬಡಿತದ ಶಬ್ದ ಕೇಳಿದರೆ ಸಾಕು ಪಿಲಿವೇಷಧಾರಿಗಳು ಬಂದರು ಎಂದೇ ಲೆಕ್ಕ.
ತುಳುನಾಡಿನ ಈ ಜನಪದ ಕಲೆಗೆ ಈಗ ವಿಶ್ವ ಮನ್ನಣೆ ಸಿಕ್ಕಿದೆ. ವಿಶ್ವದ ಅತ್ಯಂತ ಪ್ರತಿಷ್ಠಿತ ವೇದಿಕೆಯಲ್ಲಿ ತಾಸೆಯ ಶಬ್ದಕ್ಕೆ ತುಳುನಾಡಿನ ಹುಲಿಗಳು ಸ್ಟೆಪ್ಸ್ ಹಾಕಲಿವೆ.
ಅರಬ್ ರಾಷ್ಟ್ರಗಳ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆಯುತ್ತಿರುವ ದುಬೈ ಎಕ್ಸ್‌ಪೋ ಆರಂಭಗೊಂಡಿದೆ. ಈ ಜಗತ್ತಿನ ಅತಿ ವೈಭವ ಆಧುನಿಕ ಎಕ್ಸ್‌ಪೋ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ದುಬೈ ಎಕ್ಸ್‌ಪೋಗೆ ಸುಮಾರು 10 ವರ್ಷಗಳಿಂದ ಪ್ರಚಾರ, ಸಿದ್ಧತೆ ನಡೆಯುತ್ತಿತ್ತು. ಭವಿಷ್ಯವನ್ನು ಸೃಷ್ಟಿಸುವ ಮನಸ್ಸುಗಳು ಎಂಬ ಪರಿಕಲ್ಪನೆಯಲ್ಲಿ ನಡೆಯುತ್ತಿರುವ ಈ ಎಕ್ಸ್‌ಪೋ 2022ರ ಮಾರ್ಚ್ 31ರವರೆಗೂ ನಡೆಯಲಿದೆ.
192 ರಾಷ್ಟ್ರಗಳು ಭಾಗವಹಿಸಿರುವ ಈ ಎಕ್ಸ್‌ಪೋ ವೀಕ್ಷಿಸಲು ವಿಶ್ವದ ನಾನಾ ದೇಶಗಳಿಂದ ಕೋಟ್ಯಂತರ ಜನರು ಆಗಮಿಸಲಿದ್ದಾರೆ. ವಿಶ್ವಮಟ್ಟದ ಈ ಕಾರ್ಯಕ್ರಮದ ಸಾಂಸ್ಕೃತಿಕ ವೇದಿಕೆಯಲ್ಲಿ ಪ್ರದರ್ಶನ ನೀಡಲು ತುಳುನಾಡಿನ ಪಿಲಿನಲಿಕೆ ಕಲೆಗೆ ಆಹ್ವಾನ ಬಂದಿದೆ.
ದುಬೈ ಎಕ್ಸ್ ಪೋದ ಪ್ರಮುಖ ಬೃಹತ್ ವೇದಿಕೆಯಾದ ಗ್ಲೋಬಲ್ ಸ್ಟೇಜ್ ನಲ್ಲಿ ಪ್ರದರ್ಶನ ನೀಡಲು ಭಾರತದ ಕೇವಲ 8 ತಂಡಗಳಿಗೆ ಆಹ್ವಾನ ನೀಡಲಾಗಿದೆ. ಈ 8 ತಂಡಗಳ ಪೈಕಿ ತುಳುನಾಡಿನ ಪಿಲಿನಲಿಕೆಗೆ ಅವಕಾಶ ನೀಡಿರುವುದು ಐತಿಹಾಸಿಕ ಮನ್ನಣೆಯಾಗಿದೆ.
ಮಂಗಳೂರಿನ ಪಿಲಿನಲಿಕೆ ಪ್ರತಿಷ್ಠಾನದ ಅಧ್ಯಕ್ಷ ಮಿಥುನ್ ರೈ ನೇತೃತ್ವದಲ್ಲಿ ಸುಮಾರು 40 ಹುಲಿವೇಷ ಕಲಾವಿದರ ತಂಡ ದುಬೈ ಎಕ್ಸ್‌ಪೋಗೆ ತೆರಳಲಿದೆ. ಈ ತಂಡದೊಂದಿಗೆ ತಾಸೆ ಹಾಗೂ ಬ್ಯಾಂಡ್ ಸೆಟ್ ತಂಡ ಕೂಡ ತೆರಳಲಿದೆ. ಕಲಾವಿದರ ಆಯ್ಕೆ, ಪಾಸ್‌ಪೋರ್ಟ್, ವೀಸಾ, ವಿಮಾನ ಟಿಕೆಟ್ ವ್ಯವಸ್ಥೆ ಸೇರಿದಂತೆ ಎಲ್ಲ ಪ್ರಕ್ರಿಯೆಗಳು ಈಗಾಗಲೇ ಆರಂಭಗೊಂಡಿದೆ.
ಜಾಗತಿಕ ವೇದಿಕೆಯಲ್ಲಿ ಹುಲಿವೇಷದ ತಂಡವೊಂದು ಆಯ್ಕೆಯಾಗಿರುವುದು ಇದೇ ಮೊದಲು. ಈ ಹಿನ್ನೆಲೆಯಲ್ಲಿ ದುಬೈ ಎಕ್ಸ್‌ಪೋದ ಗ್ಲೋಬಲ್ ಸ್ಟೇಜ್ ಮೇಲೆ ತಾಸೆ ಹಾಗೂ ಬ್ಯಾಂಡ್‌ನ ಬಡಿತಕ್ಕೆ ತುಳುನಾಡಿನ ಪಿಲಿಗಳು ನರ್ತಿಸಿ ಘರ್ಜಿಸುವ ಮೂಲಕ ರಂಜಿಸಲಿವೆ.