ಶ್ರೀನಗರ : ಕೊರೊನಾ ವೈರಸ್ ಸೋಂಕು ಸಾಂಕ್ರಾಮಿಕವನ್ನು ಮನದಲ್ಲಿಟ್ಟುಕೊಂಡು ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಮಾತಾ ವೈಷ್ಣೋ ದೇವಿ ದೇಗುಲದಲ್ಲಿ ಯಾತ್ರಾರ್ಥಿಗಳನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಹೊಸ ನಿಯಮಗಳ ಪ್ರಕಾರ, ಯಾತ್ರಿಕರು ಆರ್‌ಟಿ-ಪಿಸಿಆರ್ ಅಥವಾ ರ್‍ಯಾಪಿಡ್ ಆಂಟಿಜನ್ ಟೆಸ್ಟ್ ವರದಿಯನ್ನು ಹೊಂದಿರುವುದು ಕಡ್ಡಾಯವಾಗಿದೆ. ಹಾಗೆಯೇ ಈ ಆರ್‌ಟಿ-ಪಿಸಿಆರ್ ಅಥವಾ ರ್‍ಯಾಪಿಡ್ ಆಂಟಿಜನ್ ಟೆಸ್ಟ್ ವರದಿಯು 72 ಗಂಟೆಗಳಿಗಿಂತ ಹಳೆಯದಾಗಿರಬಾರದು.
ಜಮ್ಮು ಮತ್ತು ಕಾಶ್ಮೀರದಲ್ಲಿನ ಪ್ರಸ್ತುತ ಕೊರೊನಾ ವೈರಸ್ ಸೋಂಕು ಪರಿಸ್ಥಿತಿಯ ಬಗ್ಗೆ ವಿವರವಾದ ಪರಿಶೀಲನೆಯ ಸಮಯದಲ್ಲಿ ಯಾತ್ರಿಕರು ಆರ್‌ಟಿ-ಪಿಸಿಆರ್ ಅಥವಾ ರ್‍ಯಾಪಿಡ್ ಆಂಟಿಜನ್ ಟೆಸ್ಟ್ ವರದಿಯನ್ನು ಹೊಂದಿರುವುದು ಕಡ್ಡಾಯಗೊಳಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಕೋವಿಡ್ ಅಧಿಕವಾಗುವ ಹಿನ್ನೆಲೆಯಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಅಸ್ತಿತ್ವದಲ್ಲಿರುವ ಕೋವಿಡ್ -19 ನಿಯಂತ್ರಣ ಕ್ರಮಗಳನ್ನು ಮುಂದುವರಿಸುವುದು ಮುಖ್ಯ ಎಂದು ಜಮ್ಮು ಮತ್ತು ಕಾಶ್ಮೀರ ಆಡಳಿತವು ತೀರ್ಮಾನಿಸಿದೆ. ಹಾಗಾದರೆ ನೂತನ ಮಾರ್ಗಸೂಚಿ ಏನು ಹೇಳುತ್ತದೆ ಎಂದು ತಿಳಿಯಲು ಮುಂದೆ ಓದಿ.
ಜಮ್ಮು ಮತ್ತು ಕಾಶ್ಮೀರ ಸರ್ಕಾರ ಜಾರಿಗೆ ತಂದಿರುವ ನೂತನ ಮಾರ್ಗಸೂಚಿ
* ಕೋವಿಡ್ ಹಿನ್ನೆಲೆ ಜಾರಿಗೆ ತಂದಿರುವ ಎಲ್ಲಾ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು
* ಮಾನ್ಯ ಆರ್‌ಟಿ-ಪಿಸಿಆರ್ ಅಥವಾ ರ್‍ಯಾಪಿಡ್ ಆಂಟಿಜನ್ ಟೆಸ್ಟ್ ವರದಿ ಕಡ್ಡಾಯ
* ಆರ್‌ಟಿ-ಪಿಸಿಆರ್ ಅಥವಾ ರ್‍ಯಾಪಿಡ್ ಆಂಟಿಜನ್ ಟೆಸ್ಟ್ ವರದಿ 72 ಗಂಟೆಗಳಿಗಿಂತ ಹಳೆಯದಾಗಿರಬಾರದು
* ಕೊರೊನಾ ವೈರಸ್ ಸೋಂಕಿನ ಯಾವುದೇ ಲಕ್ಷಣಗಳು ಇಲ್ಲದ ಯಾತ್ರಾರ್ಥಿಗಳಿಗೆ ಮಾತ್ರ ಪ್ರವೇಶಕ್ಕೆ ಅವಕಾಶ
* ಯಾತ್ರಾರ್ಥಿಗಳು ಸ್ಯಾನಿಟೈಸರ್ ಬಳಸುವುದು ಕಡ್ಡಾಯ
ಜಮ್ಮು ಮತ್ತು ಕಾಶ್ಮೀರ ಆಡಳಿತವು ಇತ್ತೀಚೆಗೆ ಕೊರೊನಾ ವೈರಸ್ ಸೋಂಕು ಹಿನ್ನೆಲೆ ತನ್ನ ಮಾರ್ಗಸೂಚಿಯಲ್ಲಿ ಬದಲಾವಣೆ ಮಾಡಿತ್ತು. ಅಕ್ಟೋಬರ್ 2 ರಿಂದ ಜಾರಿಗೆ ಬರುವಂತೆ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಈ ನೂತನ ಕೋವಿಡ್ ಮಾರ್ಗಸೂಚಿಯ ಆದೇಶ ಹೊರಡಿಸಿತ್ತು. ಅಕ್ಟೋಬರ್ 2 ರಿಂದ ಶಾಪಿಂಗ್ ಮಾಲ್‌ಗಳು, ರೆಸ್ಟೋರೆಂಟ್‌ಗಳು, ಸರ್ಕಾರಿ ಕಚೇರಿಗಳು ಹಾಗೂ ಸಾರ್ವಜನಿಕ ಸಾರಿಗೆಗಳಲ್ಲಿ ಸಂಚಾರ ಮಾಡುವವರು ಒಂದು ಡೋಸ್ ಲಸಿಕೆಯನ್ನು ಕಡ್ಡಾಯವಾಗಿ ಪಡೆದಿರಬೇಕು ಎಂದು ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿತ್ತು.
ಆ ಬಳಿಕ ಜಮ್ಮು ಕಾಶ್ಮೀರದ ಅಧಿಕಾರಿಗಳು ಎಲ್ಲಾ ಹಿರಿಯ ನಾಗರಿಕರು ಕೊರೊನಾ ವೈರಸ್ ಸೋಂಕಿನ ವಿರುದ್ಧವಾಗಿ ಕೋವಿಡ್ ಲಸಿಕೆಯನ್ನು ಪಡೆಯುವಂತೆ ಮನವಿ ಮಾಡಿದ್ದರು. ಸೆಪ್ಟೆಂಬರ್‌ನಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಶಾಲೆಗಳನ್ನು ತೆರೆಯಲು ಸರ್ಕಾರವು ಅನುಮತಿ ನೀಡಿತ್ತು. 10 ಹಾಗೂ 12 ನೇ ತರಗತಿಯನ್ನು ಮತ್ತೆ ತೆರೆಯಲು ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಕೆಲವು ಷರತ್ತುಗಳೊಂದಿಗೆ ಶಾಲೆ, ಕಾಲೇಜನ್ನು ತೆರೆಯಲು ಅವಕಾಶ ನೀಡಿದೆ. ಶಾಲೆಗೆ ಹಾಜರಾಗಲು ಬಯಸುವ ವಿದ್ಯಾರ್ಥಿಗಳಿಗೆ ಪೋಷಕರ ಅನುಮತಿ ಕಡ್ಡಾಯ ಎಂದು ಕೂಡಾ ಆಡಳಿತವು ಹೇಳಿದೆ. ಇನ್ನು ಈ ನಡುವೆ ಜಮ್ಮು ಮತ್ತು ಕಾಶ್ಮೀರದ ಎಲ್ಲಾ ಜಿಲ್ಲೆಗಳಲ್ಲಿ ನೈಟ್ ಕರ್ಫ್ಯೂ ಮುಂದುವರಿಯಲಿದೆ. ರಾತ್ರಿ 8 ಗಂಟೆಯಿಂದ ಬೆಳಿಗ್ಗೆ 7 ಗಂಟೆಯವರೆಗೆ ನೈಟ್ ಕರ್ಫ್ಯೂ ಇರಲಿದೆ.