HEALTH TIPS

ಉಳಿಯುವುದೇ ಅಡಿಕೆ ರೈತರ ಮಾನ?

                 ಅಡಿಕೆ ಬೆಲೆಯು ಕ್ವಿಂಟಲ್‌ಗೆ ಐವತ್ತು ಸಾವಿರ ರೂಪಾಯಿಗೂ ಮೀರಿ ಮುನ್ನುಗ್ಗುತ್ತಿದೆ. ಕಳೆದ ಮೂರು ದಶಕಗಳಿಂದಂತೂ ತೀವ್ರ ಏರಿಳಿತ ಕಾಣುತ್ತಿರುವ ಅಡಿಕೆ ಧಾರಣೆಯು ಇದೀಗ ಮತ್ತೊಂದು ದಾಖಲೆಯ ಏರಿಕೆಯತ್ತ ಸಾಗುತ್ತಿರುವಂತಿದೆ. ದೇಶೀಯ ಉತ್ಪಾದನಾ ಕೊರತೆ ಹಾಗೂ ಆಮದಿನ ನಿರ್ಬಂಧ- ಇವೆರಡರ ಪರಿಣಾಮವಾಗಿ ಸೃಷ್ಟಿಯಾಗಿರಬಹುದಾದ ಈ ವಿದ್ಯಮಾನವು ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸುತ್ತಿದೆ.

            ಜನಜೀವನ ಹಾಗೂ ಆರ್ಥಿಕತೆಯ ಬಹುಪಾಲು ಆಯಾಮಗಳು ಕೋವಿಡ್ ಸಂಕಷ್ಟಕ್ಕೆ ತುತ್ತಾಗಿರುವಾಗ, ಕೃಷಿ ಉತ್ಪನ್ನವೊಂದಕ್ಕೆ ಈ ಪರಿಯ ಬೆಲೆ ಬಂದಿರುವುದು ಕುತೂಹಲದ ಸಂಗತಿಯೇ ಸರಿ. ಮಾರುಕಟ್ಟೆ ಆರ್ಥಿಕತೆಯನ್ನೇ ನೆಚ್ಚುವ ಉದಾರವಾದಿ ಅರ್ಥಶಾಸ್ತ್ರಜ್ಞರು, ಇದನ್ನೊಂದು 'ಹೊಸ ಹಸಿರುಕ್ರಾಂತಿ' ಎಂಬಂತೆ ವರ್ಣಿಸಿದರೂ ಆಶ್ಚರ್ಯವಿಲ್ಲ!

          ಆದರೆ, ಒಂದೆರಡು ಎಕರೆಗಳಷ್ಟೇ ಜಮೀನಿರುವ ಅಡಿಕೆಕೃಷಿಯ ಬಹುಸಂಖ್ಯಾತ ಸಣ್ಣ ರೈತರು, ಈ ಬೆಲೆ ಹೆಚ್ಚಳವನ್ನು ಸಂಭ್ರಮಿಸುತ್ತಿಲ್ಲ. ಏಪ್ರಿಲ್- ಮೇ ತಿಂಗಳ ಬೇಸಿಗೆಯಲ್ಲೇ ಅಡಿಕೆ ಹಂಗಾಮು ಮುಗಿದು, ಬಹುಪಾಲು ರೈತರು ಕೈಯಲ್ಲಿದ್ದ ಫಸಲು ಮಾರಿಯಾಗಿದೆ. ಶ್ರಾವಣ- ಭಾದ್ರಪದದ ಈಗಿನ ಬೆಲೆಯೇರಿಕೆಯ ಲಾಭವಾಗುವುದು ಕೇವಲ ಮಧ್ಯವರ್ತಿಗಳು ಮತ್ತು ದೊಡ್ಡ ರೈತರಿಗೆ ಎಂಬುದು ಅವರ ಅನುಭವ. ಆದರೆ, ಅವರನ್ನು ತೀವ್ರ ಚಿಂತೆಗೀಡುಮಾಡಿರುವುದು ಈ ಕ್ಷಣದ ನಷ್ಟವನ್ನೂ ಮೀರಿದ ಕೆಲವು ಗಂಭೀರ ಸವಾಲುಗಳು. ಅವು ಕೇವಲ ಅಡಿಕೆ ಬೆಳೆಗಾರರನ್ನಷ್ಟೇ ಅಲ್ಲ, ಸಮಗ್ರ ಕೃಷಿ ಕ್ಷೇತ್ರದ ಸುಸ್ಥಿರತೆ ಹಾಗೂ ನಾಡಿನ ಸಾಮಾಜಿಕ- ಆರ್ಥಿಕ ಪರಿಸ್ಥಿತಿಯನ್ನೇ ಪ್ರಭಾವಿಸುತ್ತಿರುವುದರಿಂದ, ಈ ಕುರಿತು ಗಂಭೀರ ಚಿಂತನೆಯಾಗಬೇಕಿದೆ.

                ಉಷ್ಣವಲಯದ ಈ ಏಕದಳ ಪ್ರಭೇದವು ಕರಾವಳಿ ಹಾಗೂ ಸಹ್ಯಾದ್ರಿಯ ಕೃಷಿಬೆಳೆಯಾಗಿ ವಿಕಾಸವಾಗಿ ಸಹಸ್ರಮಾನವೇ ಕಳೆದಿದೆ. ಕಣಿವೆಗಳ ಜೌಗಿನಲ್ಲಿ ಭತ್ತದ ಗದ್ದೆಯ ಜೊತೆ ಅಡಿಕೆಯನ್ನೂ ಅಲ್ಲಿನ ರೈತರು ಬೆಳೆದರು. ಹೊಳೆ- ಕೆರೆಗಳ ನೀರು ಹಾಗೂ ಸಗಣಿ- ತರಗೆಲೆಗಳ ಗೊಬ್ಬರವಷ್ಟನ್ನೇ ಬಳಸಿ ಬಾಳೆ, ಕಾಳುಮೆಣಸು, ತೆಂಗು, ವೀಳ್ಯದೆಲೆ, ಏಲಕ್ಕಿ, ಜಾಯಿಕಾಯಿ ಇತ್ಯಾದಿ ವೈವಿಧ್ಯಮಯ ಬೆಳೆಗಳೊಂದಿಗೆ ಅಡಿಕೆ ಬೆಳೆಯುವ ಅವರ ಸಹಜಕೃಷಿ ಸಂಸ್ಕೃತಿಯೇ ಅನನ್ಯವಾದದ್ದು.

ಇತ್ತೀಚಿನವರೆಗೂ ಅವರು ಬಳಸುತ್ತಿದ್ದ ಆಧುನಿಕ ಮದ್ದೆಂದರೆ, ಕೊಳೆಯಂಥ ಶಿಲೀಂಧ್ರಜನ್ಯ ರೋಗ ನಿಯಂತ್ರಿಸಲು ಸಿಂಪಡಿಸುವ ಮೈಲುತುತ್ತ ದ್ರಾವಣ ಮಾತ್ರ. ಕಾಡುಹಂದಿ, ಕಾಡುಕೋಣದಂಥ ವನ್ಯಪ್ರಾಣಿ ಗಳ ಹಾವಳಿ ನಿಭಾಯಿಸುತ್ತ, ಮಳೆಗಾಲದ ನಿರಂತರ ಮಳೆಯಿಂದ ಫಸಲು ರಕ್ಷಿಸಿಕೊಳ್ಳಲು ಮರವನ್ನೇರಿ ಅವಕ್ಕೆ ಹುಲ್ಲು ಅಥವಾ ಅಡಿಕೆಹಾಳೆ ಹೊದಿಸುತ್ತ, ಪರಿಶ್ರಮದಿಂದ ಸಾಧಿಸಿದ ಸಂಕೀರ್ಣ ಬೇಸಾಯ ಕ್ರಮವಿದು.

            ಮಧ್ಯಯುಗದಿಂದ ಇತ್ತೀಚಿನ ದಶಕಗಳವರೆಗಿನ ದೀರ್ಘ ಇತಿಹಾಸವನ್ನೊಮ್ಮೆ ಅವಲೋಕಿಸಿದರೆ, ಜೀವನೋಪಾಯಕ್ಕಾಗಿ ಹಲವು ತಲೆಮಾರುಗಳು ಕಟ್ಟಿಕೊಟ್ಟ ಈ ಅದ್ಭುತ ಕೃಷಿಪರಂಪರೆಯ ಪರಿಚಯವಾಗುತ್ತದೆ.

           ಈ ಅನನ್ಯ ಅಡಿಕೆಕೃಷಿಗೆ ಇಂದು ಎದುರಾಗಿರುವ ಎರಡು ಪ್ರಮುಖ ಬಿಕ್ಕಟ್ಟುಗಳಲ್ಲಿ ಮೊದಲಿನದು, ಬದಲಾಗುತ್ತಿರುವ ಅಡಿಕೆಕೃಷಿಯ ಚಹರೆ. ಇತ್ತೀಚಿನ ದಶಕಗಳಲ್ಲಿ ಅಡಿಕೆಯು ಅಪ್ಪಟ ವಾಣಿಜ್ಯ ಬೆಳೆಯಾಗಿ ಪರಿವರ್ತಿತವಾಯಿತಷ್ಟೇ? ಅಡಿಕೆ ಕೃಷಿಯು ಆಗ ಹಣವುಳ್ಳವರ ಹೂಡಿಕೆ ಕ್ಷೇತ್ರವಾಗತೊಡಗಿತು! ಕರಾವಳಿ ಹಾಗೂ ಮಲೆನಾಡಿನ ಭತ್ತದಗದ್ದೆ, ಗುಡ್ಡಕಣಿವೆಗಳೆಲ್ಲ ಅಡಿಕೆ ತೋಟಗಳಾಗತೊಡಗಿವೆ. ಇದರಿಂದ ಪ್ರಭಾವಿತರಾದ ಅರೆಮಲೆನಾಡು ಹಾಗೂ ಬಯಲುನಾಡಿನ ರೈತರು, ಹತ್ತಿಪ್ಪತ್ತು ಎಕರೆ ದಿಢೀರ್ ಅಡಿಕೆ ನೆಡುತೋಪು ನಿರ್ಮಿಸುವ ಕಾರ್ಯಕ್ಕಿಳಿದಿದ್ದಾರೆ.

ದೇಶದ ಸುಮಾರು ನಾಲ್ಕೂವರೆ ಲಕ್ಷ ಹೆಕ್ಟೇರ್ ಭೂಮಿಯಲ್ಲಿ ವಾರ್ಷಿಕ ಒಂಬತ್ತು ಲಕ್ಷ ಟನ್ ಅಡಿಕೆ ಉತ್ಪಾದನೆಯಾಗುತ್ತಿದ್ದು, ಜಗತ್ತಿನಲ್ಲೇ ಮೊದಲ ಸ್ಥಾನದಲ್ಲಿದೆ. ಇದರಲ್ಲಿ ಮುಕ್ಕಾಲು ಭಾಗ ಕರ್ನಾಟಕದ್ದೇ. ಕಳೆದ ಐದು ವರ್ಷಗಳಲ್ಲಿ ಇದರ ಬೆಳವಣಿಗೆ ದರ ಶೇ 55ಕ್ಕೂ ಮಿಕ್ಕಿದೆಯೆಂದು, ರಾಜ್ಯಸಭೆಗೆ ಇತ್ತೀಚೆಗೆ ನೀಡಿದ ಮಾಹಿತಿಯಲ್ಲಿ ಕೇಂದ್ರ ಸರ್ಕಾರವೇ ಹೇಳಿದೆ.

              ರಾಜ್ಯವು ಜಾಗತಿಕ ಅಡಿಕೆ ಸಾಮ್ರಾಟನಾಗುತ್ತಿದೆಯೆಂದು ಸಂಭ್ರಮಿಸಬೇಕೆ? ಅದಕ್ಕೆ ಬೇರೆ ಮುಖವೂ ಇದೆಯಲ್ಲ! ಕರಾವಳಿಯ ಸಮೃದ್ಧ ಜೌಗು, ಮಲೆನಾಡಿನ ವೈವಿಧ್ಯಮಯ ಕಾಡು, ಬಯಲುನಾಡಿನ ಫಲವತ್ತಾದ ಭೂಮಿ- ಎಲ್ಲವೂ ಅಡಿಕೆ ಪಾಲಾಗುತ್ತಿವೆ. ಇತ್ತೀಚೆಗಂತೂ ಬೃಹತ್‌ ಯಂತ್ರ ಬಳಸಿ ಕಾಡು- ಗೋಮಾಳಗಳನ್ನೆಲ್ಲ ಸವರಿ ಒಮ್ಮೆಲೇ ಅಡಿಕೆತೋಟ ನಿರ್ಮಿಸುವ ಉನ್ಮಾದವೇ ಹಬ್ಬುತ್ತಿದೆ. ತೋಟಗಾರಿಕೆಯ ಮೂಲಸೂತ್ರ ವಾಗಬೇಕಾದ ಮಿಶ್ರಬೆಳೆ ಹಾಗೂ ಕೃಷಿಅರಣ್ಯ ತತ್ವಗಳು ಮಾಯವಾಗುತ್ತಿವೆ. ಹೊಳೆ- ಕೆರೆಗಳೆಲ್ಲ ಬತ್ತಿ ಬೇಸಿಗೆಯಲ್ಲಿ ನೀರಿಲ್ಲದಾಗಿ, ಎಲ್ಲೆಂದರಲ್ಲಿ ಕೊಳವೆಬಾವಿ ನಿರ್ಮಿಸಿ ಅಂತರ್ಜಲವನ್ನೆತ್ತಿ ನೀರುಣಿಸಲಾಗುತ್ತಿದೆ. ಹವಾಮಾನ ಬದಲಾವಣೆಯೋ ಅಥವಾ ಪರಿಸರಸ್ನೇಹಿಯಲ್ಲದ ಬೇಸಾಯ ಕ್ರಮಗಳಿಂದಾಗಿಯೋ ಹೊಸದಾಗಿ ತಲೆದೋರುತ್ತಿರುವ ಕೀಟ ಹಾಗೂ ಸೂಕ್ಷ್ಮಾಣುಜನ್ಯ ರೋಗಗಳನ್ನು ನಿಯಂತ್ರಿಸಲು ಮೋನೊಕ್ರೊಟೊಫಾಸ್ ಸೇರಿದಂತೆ ಆರ್ಗೆನೋಫಾಸ್ಫೇಟ್, ಕಾರ್ಬಾಮೇಟ್ಸ್ ತೆರನ ಕೃತಕ ಕ್ರಿಮಿನಾಶಕಗಳನ್ನು ಮಿತಿಮೀರಿ ಬಳಸಲಾಗುತ್ತಿದೆ.

           ಹಣ ಗಳಿಸಲಿಕ್ಕೆಂದೇ ಉಳ್ಳವರು ಅಡಿಕೆ ಬೆಳೆಯಲು ನುಗ್ಗುತ್ತಿರುವುದರ ಪರಿಣಾಮವಿದು. ರಿಯಲ್ ಎಸ್ಟೇಟ್ ತೆರನಲ್ಲಿ ಅಂಕೆಗೆ ಸಿಗದೆ ಬೆಳೆಯುತ್ತಿದೆ ಅಡಿಕೆ ನೆಡುತೋಪು ಉದ್ಯಮ! ಲಾಭವೇ ಮುಖ್ಯವಾಗುವ ವಾಣಿಜ್ಯೋದ್ಯಮದ ಹಿಡಿತಕ್ಕೆ ಸಿಲುಕಿ, ಜೀವನೋಪಾಯಕ್ಕಾಗಿನ ಪಾರಂಪರಿಕ ಕೃಷಿಸಂಸ್ಕೃತಿಯೊಂದು ವಿಕೃತಿಯಾಗುತ್ತಿರುವ ಬಗೆಯಿದು.

             ಅಡಿಕೆಯೇನೂ ಆಹಾರ ಬೆಳೆಯಲ್ಲ. ದಕ್ಷಿಣ ಏಷ್ಯಾ ಮತ್ತು ಅರಬ್ ರಾಷ್ಟ್ರಗಳಿಗೆ ರಫ್ತಾಗುವುದಾದರೂ ಅದೇನೂ ಗಮನಾರ್ಹ ಪ್ರಮಾಣದ್ದಲ್ಲ. ದೇಶದೊಳಗೆ ಬಳಕೆಯಾಗಬೇಕಾದ ಸರಕಿದು. ಮೂಲತಃ ಬಳಸುವುದು ಪಾರಂಪರಿಕ ಧಾರ್ಮಿಕ ವಿಧಿವಿಧಾನಗಳ ಪೂಜಾವಸ್ತುವಾಗಿ, ತಾಂಬೂಲಕ್ಕಾಗಿ, ಮನೆಮದ್ದು ಹಾಗೂ ಆಯುರ್ವೇದದ ಔಷಧಗಳ ಧಾತುವಾಗಿ. ಈಗ ನಿಷೇಧವಾಗಿರುವ ಗುಟ್ಕಾದಂಥ ತಂಬಾಕು ಉತ್ಪನ್ನಗಳ ಭಾಗವಾಗಿಯೂ ಅಡಿಕೆ ಬಳಕೆಯಾಗುತ್ತಿದೆ. ಇನ್ನುಳಿದ ಬದಲಿ ಉಪಯೋಗಗಳೆಲ್ಲ ಸೀಮಿತವಾಗಿದ್ದು, ಅಡಿಕೆ ಬಳಕೆಗೊಂದು ಮಿತಿಯಿದೆ. ಇದಾವುದನ್ನೂ ಗಮನಿಸದೆ ಅಡಿಕೆ ನೆಡುತೋಪು ಮಾತ್ರ ಹೆಚ್ಚುತ್ತಲೇ ಇದೆ!

                ಕಳವಳಕಾರಿಯಾದ ಎರಡನೆಯ ಸಂಗತಿಯು ಅದರ ಸುರಕ್ಷತೆಯ ಕುರಿತಾದದ್ದು. ಅಡಿಕೆಯಲ್ಲಿರುವ 'ಅರೆಕೋಲಿನ್' ಅಂಶ ಅಪಾಯಕಾರಿಯೆಂದು ಗುರುತಿಸಿರುವ ವಿಶ್ವ ಆರೋಗ್ಯ ಸಂಸ್ಥೆಯು, ತಂಬಾಕಿನಂಥ 'ಕ್ಯಾನ್ಸರ್‌ಕಾರಕ' ಉತ್ಪನ್ನಗಳ ಪಟ್ಟಿಯಲ್ಲಿ ಅದನ್ನಿರಿಸಿದೆ. ದೇಶದ ಆಹಾರ ಸುರಕ್ಷತೆ ಮತ್ತು ಮಾನದಂಡ ನಿರ್ವಹಣಾ ಪ್ರಾಧಿಕಾರವೂ (FSSAI) ಅಡಿಕೆಯನ್ನು ಅಪಾಯಕಾರಿ ಆಹಾರವೆಂದೇ ಗುರುತಿಸಿದೆ. ತಂಬಾಕು ಬಳಸದೆ ಅಡಿಕೆ ಸೇವಿಸಿದರೆ ಆರೋಗ್ಯಕ್ಕೆ ಅಪಾಯವಿಲ್ಲವೆಂಬುದನ್ನು ಹಲವು ಸಂಶೋಧಕರು ದಾಖಲೆಗಳೊಂದಿಗೆ ಮಂಡಿಸುತ್ತಿರುವರಾದರೂ, ಅದನ್ನು ಜಾಗತಿಕ ಆರೋಗ್ಯ ವಿಜ್ಞಾನ ಲೋಕ ಒಪ್ಪುತ್ತಿಲ್ಲ. ಹೀಗಾಗಿ ಸುರಕ್ಷತೆಯ ಮುದ್ರೆ ಬೀಳುವವರೆಗೆ, ಮಾರುಕಟ್ಟೆಯಲ್ಲಿ ಅಡಿಕೆಯ ಸ್ಥಾನವು ಎಂದಿಗೂ ಡೋಲಾಯಮಾನವೇ.

ಬೇಡಿಕೆಯ ಕೊರತೆ, ಆರೋಗ್ಯವಿಜ್ಞಾನದ ವಿಧಿ- ನಿಷೇಧಗಳು ಅಥವಾ ನ್ಯಾಯಾಲಯಗಳ ತೀರ್ಪುಗಳಿಂದಾಗಿ ಭವಿಷ್ಯದಲ್ಲಿ ಅಡಿಕೆಯ ಬಳಕೆ ಯಾವಾಗಲಾದರೂ ಕುಸಿಯಬಹುದು. ಆಗ ಬೆಲೆ ಇಳಿದರೆ ನೆಡುತೋಪುಗಳ ನವಕೃಷಿಕರೆಲ್ಲ ಕೃಷಿಭೂಮಿಯನ್ನು ಬೇರೆ ಉದ್ಯಮಕ್ಕೆ ಹೊರಳಿಸಿಯಾರು. ಆದರೆ, ಜೀವನೋಪಾಯಕ್ಕಾಗಿ ಅಡಿಕೆ ಬೆಳೆಯುತ್ತಿರುವ ಮಲೆನಾಡು ಹಾಗೂ ಕರಾವಳಿಯ ಲಕ್ಷಾಂತರ ಸಣ್ಣರೈತರು ಮಾತ್ರ ತೋಟದ ನಿರ್ವಹಣಾ ವೆಚ್ಚವನ್ನೂ ನಿರ್ವಹಿಸಲಾಗದೆ ಬೀದಿಪಾಲಾದಾರು!

ಗಗನಕ್ಕೇರಿದ ಅಡಿಕೆ ಆರ್ಥಿಕತೆಯಲ್ಲಿ ಪಾಲು ಗಳಿಸಲೇ ಎಲ್ಲರೂ ನಿರತರಾಗಿರುವಾಗ, ಅಡಿಕೆಯ ಅಡಿಪಾಯವೇ ಕುಸಿಯುತ್ತಿರುವುದನ್ನು ಕೃಷಿನೀತಿ ನಿರೂಪಕರಾದರೂ ಗುರುತಿಸಬೇಕಿದೆ. ಸಹಕಾರಿ ಕ್ಷೇತ್ರವೂ ಸೇರಿದಂತೆ ರೈತ ಸಂಘಟನೆಗಳು ಹಾಗೂ ಸರ್ಕಾರವು ಅಡಿಕೆ ಸಣ್ಣರೈತರ ಭವಿಷ್ಯದ ಮಾನ ಕರಗದಂತೆ ನೋಡಿಕೊಳ್ಳಬೇಕಿದೆ.


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries