ಚಂಡೀಗಢ: ನಾನು ಹೊಸ ಪಕ್ಷ ಸ್ಥಾಪನೆ ಮಾಡುತ್ತಿದ್ದು ಚುನಾವಣಾ ಆಯೋಗ ಅನುಮತಿ ನೀಡಿದ ನಂತರ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಘೋಷಣೆ ಮಾಡುತ್ತೇನೆ, ನನ್ನ ವಕೀಲರು ಈ ಕುರಿತಂತೆ ಕೆಲಸದಲ್ಲಿ ತೊಡಗಿದ್ದಾರೆ ಎಂದು ಪಂಜಾಬ್ ನ ಮಾಜಿ ಮುಖ್ಯಮಂತ್ರಿ ಕ್ಯಾ.ಅಮರಿಂದರ ಸಿಂಗ್ ಹೇಳಿದ್ದಾರೆ.
ಚಂಡೀಗಢದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಯ ಬಂದಾಗ 117 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತೇವೆ. ಸೀಟು ಹಂಚಿಕೆ ಅಥವಾ ನಾವೇ ಸ್ವಂತವಾಗಿ ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಸ್ಪರ್ಧಿಸುವುದೇ ಎಂದು ನೋಡಬೇಕು ಎಂದರು.
ಕೇಂದ್ರ ಸರ್ಕಾರದ ತಿದ್ದುಪಡಿ ಕೃಷಿ ಕಾಯ್ದೆ ಬಗ್ಗೆ ನಿಮ್ಮ ನಿಲುವೇನು, ರೈತರ ಪರ ಹೇಗೆ ನಿಲ್ಲುತ್ತೀರಿ ಎಂದು ಕೇಳಿದಾಗ ನಮ್ಮ ಜೊತೆ 25ರಿಂದ 30 ಮಂದಿಯನ್ನು ಕರೆದುಕೊಂಡು ನಾಳೆ ದೆಹಲಿಗೆ ಹೋಗಿ ಗೃಹ ಸಚಿವರನ್ನು ಭೇಟಿ ಮಾಡುತ್ತೇವೆ, ಈ ಬಗ್ಗೆ ಗೃಹ ಸಚಿವ ಅಮಿತ್ ಶಾ ಅವರ ಬಳಿ ಚರ್ಚಿಸುತ್ತೇವೆ ಎಂದರು.
ನವಜೋತ್ ಸಿಂಗ್ ಸಿಧು ಅವರಿಗೆ ಸಂಬಂಧಪಟ್ಟಂತೆ ಕೇಳಿದಾಗ ಅವರು ಹೋರಾಟ ಮಾಡಿದಲ್ಲೆಲ್ಲ ನಾವು ಕೂಡ ಮಾಡುತ್ತೇವೆ ಎಂದರು.
ಈ ನಾಲ್ಕೂವರೆ ವರ್ಷಗಳಲ್ಲಿ ನಾನು ಪಂಜಾಬ್ ಮುಖ್ಯಮಂತ್ರಿಯಾಗಿದ್ದಾಗ ನಾವು ಮಾಡಿದ ಸಾಧನೆಗಳು ಈ ಪುಸ್ತಕದಲ್ಲಿವೆ ಎಂದು ತೋರಿಸಿದರು. ನಾನು ಮುಖ್ಯಮಂತ್ರಿಯಾಗಿದ್ದಾಗ ನಮ್ಮ ಚುನಾವಣಾ ಪ್ರಣಾಳಿಕೆಯಿದು. ಇದು ನಂತರ ಮುಖ್ಯಮಂತ್ರಿಯಾದ ನಂತರ ಮಾಡಿದ ಸಾಧನೆಗಳು ಎಂದರು.
ಪಂಜಾಬ್ ನ ಗೃಹ ಸಚಿವನಾಗಿ ನಾನು ಒಂಭತ್ತೂವರೆ ವರ್ಷಗಳ ಕಾಲವಿದ್ದೆ. ಒಂದು ತಿಂಗಳು ಗೃಹ ಸಚಿವರಾದವರು ನನಗಿಂತ ಹೆಚ್ಚು ತಿಳಿದಿದ್ದಾರೆ ಎಂದು ಹೇಳಿದರು. ಯಾರೂ ಕೂಡ ಪಂಜಾಬ್ ಗೆ ತೊಂದರೆ ನೀಡಲು ಬಯಸಲಿಲ್ಲ. ಪಂಜಾಬ್ ಅತ್ಯಂತ ಕಷ್ಟದ ಸಮಯವನ್ನು ಎದುರಿಸಿದೆ ಎಂದರು.
ಭದ್ರತಾ ಕ್ರಮಗಳ ಬಗ್ಗೆ ಅವರು ನನ್ನನ್ನು ಅಣಕಿಸುತ್ತಾರೆ, ನಾನು ಸೇನೆಯಲ್ಲಿ ಮೂಲ ತರಬೇತಿಯನ್ನು ಸೈನಿಕನಾಗಿ ಪಡೆದಿದ್ದು 10 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ್ದೇನೆ. ನನ್ನ ತರಬೇತಿ ದಿನಗಳಿಂದ ಸೇನೆಯನ್ನು ತ್ಯಜಿಸುವವರೆಗೆ ನಾನು ಮೂಲ ಅವಶ್ಯಕತೆಗಳ, ಮೂಲ ಸ್ಥಿತಿಗಳ ಬಗ್ಗೆ ತಿಳಿದಿದ್ದೇನೆ ಎಂದು ಹೆಸರು ಹೇಳದೆ ಕಾಂಗ್ರೆಸ್ ನಾಯಕರಿಗೆ ಕ್ಯಾ.ಅಮರಿಂದರ್ ಸಿಂಗ್ ತಿರುಗೇಟು ನೀಡಿದರು.