ನವದೆಹಲಿ: ತಲುಪಲು ಕಷ್ಟಕರವಾದ ಈಶಾನ್ಯದ ದುರ್ಗಮ ಭೂಪ್ರದೇಶಗಳಿಗೆ ಡ್ರೋನ್ ಮೂಲಕ ಕೋವಿಡ್ -19 ಲಸಿಕೆ ಪೂರೈಸುವ ಸೌಲಭ್ಯಕ್ಕೆ ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವಿಯಾ ಸೋಮವಾರ ಚಾಲನೆ ನೀಡಿದರು.
ಐಸಿಎಂಆರ್‌ನ ಡ್ರೋನ್ ರೆಸ್ಪಾನ್ಸ್ ಅಂಡ್ ಔಟ್ರೀಚ್ ಇನ್ ನಾರ್ತ್ ಈಸ್ಟ್ (ಐ-ಡ್ರೋನ್), ಜೀವರಕ್ಷಕ ಕೋವಿಡ್ ಲಸಿಕೆಗಳು ಎಲ್ಲರಿಗೂ ತಲುಪುವಂತೆ ಮಾಡುವ ಒಂದು ವಿತರಣಾ ಮಾದರಿಯಾಗಿದೆ. ಆರೋಗ್ಯದಲ್ಲಿ 'ಅಂತ್ಯೋದಯ' ಎನ್ನುವ ಸರ್ಕಾರದ ಬದ್ಧತೆಗೆ ಅನುಗುಣವಾಗಿ ದೇಶದ ಕಟ್ಟಕಡೆಯ ನಾಗರಿಕರಿಗೂ ಆರೋಗ್ಯ ತಲುಪುವಂತೆ ಮಾಡಲಿದೆ ಎಂದು ಅಧಿಕಾರಿಗಳು ಹೇಳಿದರು.
ಮೇಕ್ ಇನ್ ಇಂಡಿಯಾ ಅಡಿ ತಯಾರಾದ ಡ್ರೋನ್ ಅನ್ನು ದಕ್ಷಿಣ ಏಷ್ಯಾದಲ್ಲಿ ಇದೇ ಮೊದಲ ಬಾರಿಗೆ ಕೋವಿಡ್ -19 ಲಸಿಕೆ ವಿತರಣೆಗೆ ಬಳಸಲಾಗಿದೆ. ಮಣಿಪುರದಲ್ಲಿ ಬಿಷ್ಣುಪುರ ಜಿಲ್ಲಾ ಆಸ್ಪತ್ರೆಯಿಂದ ಕರಂಗ್ ದ್ವೀಪದ ಲೋಕ್ತಕ್ ಸರೋವರಕ್ಕೆ (15 ಕಿ.ಮೀ. ವೈಮಾನಿಕ ದೂರ) ಡ್ರೋನ್ ಮೂಲಕ 12ರಿಂದ 15 ನಿಮಿಷಗಳಲ್ಲಿ ಲಸಿಕೆ ಪೂರೈಸಲಾಯಿತು.
'ಈ ಸ್ಥಳಗಳ ನಡುವಿನ ನಿಜವಾದ ರಸ್ತೆ ಅಂತರ 26 ಕಿ.ಮೀ. ಇದೆ. ಈ ದಿನ 10 ಫಲಾನುಭವಿಗಳು ಮೊದಲ ಡೋಸ್ ಪಡೆಯಲಿದ್ದಾರೆ. ಎಂಟು ಜನರು ಪಿಎಚ್‌ಸಿಯಲ್ಲಿ ಎರಡನೇ ಡೋಸ್ ಪಡೆಯಲಿದ್ದಾರೆ' ಎಂದು ಮಾಂಡವಿಯಾ ಹೇಳಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳನ್ನು ಅರ್ಪಿಸಿದ ಕೇಂದ್ರ ಆರೋಗ್ಯ ಸಚಿವರು, 'ಅವರ ನಾಯಕತ್ವದಲ್ಲಿ ರಾಷ್ಟ್ರವು ಉತ್ತಮ ವೇಗದಲ್ಲಿ ಮುನ್ನಡೆಯುತ್ತಿದೆ. ಇಂದು ಐತಿಹಾಸಿಕ ದಿನವಾಗಿದೆ, ಇದು ತಂತ್ರಜ್ಞಾನವು ಜೀವನವನ್ನು ಹೇಗೆ ಸುಲಭಗೊಳಿಸುತ್ತದೆ ಮತ್ತು ಸಾಮಾಜಿಕ ಬದಲಾವಣೆಯನ್ನು ತರುತ್ತದೆ ಎಂಬುದನ್ನು ನಮಗೆ ತೋರಿಸಿಕೊಟ್ಟಿದೆ' ಎಂದು ಅವರು ಹೇಳಿದರು.