ವಾಷಿಂಗ್ಟನ್: ಶಸ್ತ್ರ ಚಿಕಿತ್ಸೆ ವೇಳೆ ಅತ್ತಿದ್ದಕ್ಕೆ ದಂಡ ವಿಧಿಸಿರುವ ಘಟನೆ ಅಮೆರಿಕದಲ್ಲಿ ವರದಿಯಾಗಿದೆ.
ಸಾಮಾನ್ಯವಾಗಿ ಶಸ್ತ್ರ ಚಿಕಿತ್ಸೆ ಅಂದರೆ ಭಯ, ಮುಂದೆ ಏನಾಗುತ್ತದೆ, ಮೊದಲಿನ ರೀತಿ ಆಗಲು ಸಾಧ್ಯವೆ ಹೀಗೆ ಹತ್ತು ಹಲವಾರು ಪ್ರಶ್ನೆಗಳು ರೋಗಿಗಳನ್ನು ಕಾಡುತ್ತಿರುತ್ತದೆ. ತಮ್ಮ ಪ್ರಶ್ನೆಗಳನ್ನು ವೈದ್ಯರ ಬಳಿ ಕೇಳಿ ಅವರಿಂದ ಬರುವ ಉತ್ತರವೇ ತುಂಬಾ ಸಮಾಧಾನವನ್ನು ನೀಡುತ್ತದೆ.
ಶಸ್ತ್ರಚಿಕಿತ್ಸೆ ವೇಳೆ ಇಂಜೆಕ್ಷನ್ ನೀಡಿದ್ದರೂ ಕೂಡ ಕೆಲವರಿಗೆ ನರ ಊತದ ಅನುಭವವಾಗಬಹುದು ಹಲವು ರೀತಿಯ ಆತಂಕಗಳು ಎದುರಾಗಬಹುದು.
ರೋಗಿಗಳು ತಾಳ್ಮೆಯನ್ನು ಕಳೆದುಕೊಳ್ಳಬಹುದು, ನೋವನ್ನು ತಾಳಲಾರದೆ ಮನಸ್ಸಿಗೆ ಬಂದಂತೆ ಮಾತುಗಳನ್ನು ಆಡಬಹುದು, ಆದರೆ ವೈದ್ಯರು ಮಾತ್ರ ರೋಗಿಗಳನ್ನು ಸುಧಾರಿಸಿ, ಅವರ ಮನಸ್ಸಿಗೆ ನೆಮ್ಮದಿ ನೀಡುವ ಮಾತುಗಳನ್ನು ಆಡಿ ಅವರನ್ನು ಸಮಾಧಾನಪಡಿಸುತ್ತಾರೆ. ಶಸ್ತ್ರ ಚಿಕಿತ್ಸೆ ಬಗ್ಗೆ ಯಾವುದೇ ಭಯ ಬೇಡ ಎಂದು ಧೈರ್ಯ ತುಂಬುತ್ತಾರೆ.
ಆದರೆ ಕೆಲವೊಮ್ಮೆ ಆತಂಕ ಅಥವಾ ಭಯವನ್ನು ನಿಗ್ರಹಿಸಲು ಸಾಧ್ಯವೇ ಇಲ್ಲ. ಆದರೆ ಇಂತಹ ಭಾವನೆಗಳಿಗೆ ಬೆಲೆಯನ್ನು ತೆರುವ ಪ್ರಸಂಗ ಎದುರಾದರೆ ಏನು ಗತಿ ಎಂಬುದನ್ನು ಯೋಚನೆ ಮಾಡಲೇಬೇಕು.
ಹೌದು, ಅಮೆರಿಕದ ಆಸ್ಪತ್ರೆಯೊಂದರಲ್ಲಿ ಶಸ್ತ್ರ ಚಿಕಿತ್ಸೆ ಮಾಡುವಾಗ ಅತ್ತಿದ್ದಕ್ಕೆ ರೋಗಿಗೆ ದಂಡ ವಿಧಿಸಿರುವ ಘಟನೆ ವರದಿಯಾಗಿದೆ.ಮಹಿಳೆಯೊಬ್ಬರು ಶಸ್ತ್ರಚಿಕಿತ್ಸೆ ಸಮಯದಲ್ಲಿ ಅತ್ತಿದ್ದಕ್ಕೆ ಆಸ್ಪತ್ರೆಯು ದಂಡ ವಿಧಿಸಿದೆ ಎಂದು ಅವರು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಇದು ಅಮೆರಿಕದಲ್ಲಿನ ಆರೋಗ್ಯ ರಕ್ಷಣಾ ವ್ಯವಸ್ಥೆ ಬಗ್ಗೆ ಪ್ರಶ್ನೆ ಮೂಡುವಂತೆ ಮಾಡಿದೆ. ಆಸ್ಪತ್ರೆಯಿಂದ ಪಡೆದ ಇನ್‌ವಾಯ್ಸ್‌ನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಆ ರಶೀತಿಯಲ್ಲಿ ಆಸ್ಪತ್ರೆ ವೆಚ್ಚದ ಎಲ್ಲಾ ವಿವರಗಳು ಇತ್ತು.
ಮಹಿಳೆ ಶಸ್ತ್ರ ಚಿಕಿತ್ಸೆ ವೇಳೆ ಅತ್ತಿದ್ದಕ್ಕೆ 11 ಡಾಲರ್ ದಂಡ ವಿಧಿಸಲಾಗಿದೆ. ಈ ಅನಿರೀಕ್ಷಿತ ಹೆಚ್ಚುವರಿ ದಂಡ ಕಟ್ಟಿದ ಮಹಿಳೆ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅವರ ಟ್ವೀಟ್ 107 ಲಕ್ಷಕ್ಕೂ ಹೆಚ್ಚು ಲೈಕ್‌ಗಳು, 8 ಸಾವಿರ ರೀ ಟ್ವೀಟ್ ಹಾಗೂ ಹಲವು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಒಟ್ಟು ಬಿಲ್ ಮೊತ್ತ 223ಡಾಲರ್ ಆಗಿದ್ದು, ಆಸ್ಪತ್ರೆಯು ಹೆಚ್ಚುವರಿಯಾಗಿ 11 ಡಾಲರ್ ಪಡೆದಿದೆ. ಭಾವನೆಗಳು ಉಚಿತ ಎಂದುಕೊಂಡಿದ್ದೆ ಆದರೆ ಭಾವನೆಗಳಿಗೂ ಬೆಲೆ ಕಟ್ಟಬೇಕು ಎಂದು ತಿಳಿದಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.