ಕಾಸರಗೋಡು: ಜಿಲ್ಲೆಯ ಅಭಿವೃದ್ಧಿಗೆ ಪ್ರಾಶಸ್ತ್ಯ ನೀಡುವುದರ ಜತೆಗೆ ಕಾಸರಗೋಡು ಮತ್ತು ಮಂಜೇಶ್ವರ ಮಂಡಲದಲ್ಲಿ ಬಿಜೆಪಿ ಗೆಲುವಿಗೆ ಅವಿರತ ಶ್ರಮಿಸುವುದಾಗಿ ಬಿಜೆಪಿಯ ನೂತನ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ತಿಳಿಸಿದ್ದಾರೆ.
ಅವರು ಶನಿವಾರ ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದರು.
ಎಲ್ಲ ಸಮುದಾಯದ ಜನರ ಪ್ರಗತಿ ಬಗ್ಗೆ ಬಿಜೆಪಿ ಗಮನಹರಿಸಲಿದೆ. ಜಿಲ್ಲೆ ಹಿಂದುಳಿಯುವಿಕೆಗೆ ಕಾರಣ ಪತ್ತೆಹಚ್ಚಲು ಬಿಜೆಪಿ ಶ್ರಮಿಸಲಿದೆ. ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ ಕೇಂದ್ರ ಸರ್ಕಾರದ ನೆರವನ್ನು ಪಡೆದುಕೊಳ್ಳಲೂ ಅಧ್ಯಕ್ಷನಾಗಿ ಶ್ರಮಿಸುವುದಾಗಿ ತಿಳಿಸಿದ ಅವರು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಶಕ್ತಿ ವೃದ್ಧಿಗೊಳ:ಇಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಜತೆಗೆ ಪಕ್ಷ ಸಂಘಟನೆಗೂ ಶ್ರಮಿಸುವುದಾಗಿ ತಿಳಿಸಿದರು.
ಬಿಜೆಪಿ ರಾಜ್ಯ ಸಮಿತಿ ಉಪಾಧ್ಯಕ್ಷ ಸಿ.ರಘುನಾಥ್ ಸಮಾರಂಭ ಉದ್ಘಾಟಿಸಿದರು. ರಾಜ್ಯ ಸಮಿತಿ ಕಾರ್ಯದರ್ಶಿ ಕೆ.ಶ್ರೀಕಾಂತ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಎಂ. ಸಂಜೀವ ಶೆಟ್ಟಿ, ಪ್ರಮಿಳಾ ಸಿ.ನಾಯ್ಕ್, ವಿ.ಬಾಲಕೃಷ್ಣ ಶೆಟ್ಟಿ, ಪಿ.ಸುರೇಶ್ ಕುಮಾರ್ ಶೆಟ್ಟಿ, ಸತೀಶ್ಚಂದ್ರ ಭಂಡಾರಿ ಕೋಳಾರು, ಸುಧಾಮ ಗೋಸಾಡ, ಪಿ.ರಮೇಶ್, ಎ.ವೇಲಾಯುಧನ್ ಉಪಸ್ಥಿತರಿದ್ದರು.