ನವದೆಹಲಿ: ಕಳೆದ ವರ್ಷ ಈಶಾನ್ಯ ಲಡಾಖ್ ನಲ್ಲಿ ಭಾರತೀಯ ವಾಯುಪಡೆಯ ತ್ವರಿತ ಕ್ರಮಗಳು ನಮ್ಮ ಯುದ್ಧ ಸನ್ನದ್ಧತೆಯನ್ನು ತೋರುತ್ತದೆ ಎಂದು ಐಎಎಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಹೇಳಿದ್ದಾರೆ.
89 ನೇ ವಾಯುಪಡೆ ಸ್ಥಾಪನಾ ದಿನಾಚರಣೆಯ ಅಂಗವಾಗಿ ಈ ವಿಭಾಗದ ಯೋಧರನ್ನುದ್ದೇಶಿಸಿ ಮಾತನಾಡಿರುವ ಅವರು ದೇಶದ ಸೀಮೆಯನ್ನು ದಾಟುವುದಕ್ಕೆ ಬಾಹ್ಯ ಶಕ್ತಿಗಳಿಗೆ ಅವಕಾಶ ನೀಡುವುದಿಲ್ಲ ಎಂಬುದನ್ನು ಐಎಎಫ್ ತೋರಿಸಬೇಕಿದೆ ಎಂದು ಕರೆ ನೀಡಿದ್ದಾರೆ.
ನಮ್ಮ ಮುಂದಿರುವ ಸವಾಲುಗಳು ಹೆಚ್ಚುತ್ತಿವೆ, ಅಂತೆಯೇ ನಮ್ಮ ಶಕ್ತಿಯೂ ಹೆಚ್ಚಳವಾಗಬೇಕು ಎಂದು ಐಎಎಫ್ ಮುಖ್ಯಸ್ಥರು ಹೇಳಿದ್ದಾರೆ. ಇಂದಿನ ಭದ್ರತಾ ಪರಿಸ್ಥಿತಿಯನ್ನು ಗಮನಿಸಿದರೆ, ನಿರ್ಣಾಯಕ, ಮಹತ್ವದ ಸಮಯದಲ್ಲಿ ನಾನು ಅಧಿಕಾರ ಸ್ವೀಕರಿಸಿದ್ದೇನೆ ಎಂಬ ಅರಿವಿದೆ ಎಂದು ವಿಆರ್ ಚೌಧರಿ ಹೇಳಿದ್ದಾರೆ.
ಕಳೆದ ವರ್ಷ ನಾವು ಎದುರಿಸಿದ ಪರಿಸ್ಥಿತಿ ಅತ್ಯಂತ ಸವಾಲಿನದ್ದಾಗಿದ್ದರೂ, ಸವಾಲು ಎದುರಿಸಿದ್ದಕ್ಕೆ ತಕ್ಕ ಪ್ರತಿಫಲ ಲಭ್ಯವಾಯಿತು. ಲಡಾಖ್ ನಲ್ಲಿ ನಮ್ಮ ತ್ವರಿತ ಕ್ರಮ ವಾಯುಪಡೆಯ ಯುದ್ಧ ಸನ್ನದ್ಧತೆಗೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.