ನವದೆಹಲಿ :ಪ್ಯಾಕೆಟ್‌ಗಳಲ್ಲಿ ಬರುವ ಖಾದ್ಯ ತೈಲಗಳಲ್ಲಿ ತಾಳೆ ಎಣ್ಣೆ ಮಿಶ್ರ ಮಾಡುವ ದಂಧೆ ವಿರುದ್ಧ ತೀವ್ರ ಆತಂಕ ವ್ಯಕ್ತಪಡಿಸಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ, ಈ ಬಗ್ಗೆ ಜನ ಧ್ವನಿ ಎತ್ತಬೇಕು ಎಂದು ಸಲಹೆ ಮಾಡಿದ್ದಾರೆ.
ಎಣ್ಣೆ ಪ್ಯಾಕೆಟ್‌ಗಳಲ್ಲಿ ಎಷ್ಟು ಪ್ರಮಾಣದಲ್ಲಿ ತಾಳೆ ಎಣ್ಣೆ ಇದೆ ಎಂಬ ಮಾಹಿತಿಯನ್ನು ದಪ್ಪ ಅಕ್ಷರಗಳಲ್ಲಿ ನಮೂದಿಸುವಂತೆ ಜನ ಆಗ್ರಹಿಸಬೇಕು ಎಂದು ಅವರು ಸಲಹೆ ಮಾಡಿದ್ದಾರೆ.
"ಹಲವು ಪ್ರಕರಣಗಳಲ್ಲಿ ಸೋಯಾ ಎಣ್ಣೆಯ ಜತೆ ಶೇಕಡ 40ರಷ್ಟು ತಾಳೆ ಎಣ್ಣೆ ಮಿಶ್ರ ಮಾಡಲಾಗಿರುತ್ತದೆ. ಈ ಬಗ್ಗೆ ಸಮರ್ಪಕ ಮಾಹಿತಿಯನ್ನು ನೀಡುವಂತೆ ಗ್ರಾಹಕರು ಮಾರಾಟಗಾರರನ್ನು ಒತ್ತಾಯಿಸಬೇಕು. ಇಂಥ ಮಾಹಿತಿಯನ್ನು ಸಣ್ಣ ಅಕ್ಷರಗಳಲ್ಲಿ ನೀಡಲಾಗಿರುತ್ತದೆ. ಸಾಮಾನ್ಯವಾಗಿ ಜನ ಇದನ್ನು ನೋಡುವುದಿಲ್ಲ. ಈ ಮಾಹಿತಿಯನ್ನು ದಪ್ಪ ಅಕ್ಷರಗಳಲ್ಲಿ ನಮೂದಿಸುವಂತೆ ಕಡ್ಡಾಯಪಡಿಸುವ ಮೂಲಕ ಜನತೆಗೆ ಸೂಕ್ತ ಮಾಹಿತಿ ನೀಡುವ ಮೂಲಕ ಜನರು ಶೇಕಡ 100ರಷ್ಟು ಪರಿಶುದ್ಧ ಸೋಯಾ ಎಣ್ಣೆ ಖರೀದಿಸಬೇಕೇ ಅಥವಾ ಮಿಶ್ರ ಮಾಡಲಾದ ಎಣ್ಣೆ ಖರೀದಿಸಬೇಕೇ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಲು ಅವಕಾಶ ನೀಡಬೇಕು ಎಂದು ಅಂತರ್ ರಾಷ್ಟ್ರೀಯ ಸೋಯಾ ಸಮ್ಮೇಳನದಲ್ಲಿ ಅಭಿಪ್ರಾಯಪಟ್ಟರು.
ಸೋಯಾ ಬೆಳೆಯ ಸರಾಸರಿ ಉತ್ಪಾದನೆ ಹೆಚ್ಚಳಕ್ಕೆ ಉದ್ಯಮ ಹಾಗೂ ಸಂಶೋಧನಾ ಸಂಸ್ಥೆಗಳು ಜತೆಗೆ ಕಾರ್ಯ ನಿರ್ವಹಿಸಬೇಕು ಎಂದು ಅವರು ಸಲಹೆ ಮಾಡಿದರು. ಈ ಮೂಲಕ ದೇಶದ ಖಾದ್ಯತೈಲ ಆಮದು ಶೂನ್ಯವಾಗುವಂತೆ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಪ್ರಸ್ತುತ ದೇಶ ಶೇಕಡ 65ರಷ್ಟು ಖಾದ್ಯತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಪ್ರತಿ ಎಕರೆಗೆ ಸೋಯಾ ಇಳುವರಿಯನ್ನು 20 ಕ್ವಿಂಟಲ್‌ಗೆ ಏರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಹೀಗೆ ಬೆಳೆ ವೈವಿಧ್ಯಕ್ಕೆ ರೈತರಿಗೆ ಪ್ರೋತ್ಸಾಹ ನೀಡುವ ಮೂಲಕ ಖಾದ್ಯ ತೈಲದ ಬೇಡಿಕೆಯನ್ನು ನಾವೇ ಈಡೇರಿಸಿಕೊಂಡು ಇದರಲ್ಲಿ ಆತ್ಮನಿರ್ಭರತೆ ಪ್ರದರ್ಶಿಸಬೇಕು ಎಂದರು.