ಗ್ರೇಟರ್ ನೋಯ್ಡಾ: ಭಾರತ ಮತ್ತು ಚೀನಾ ನಡುವಿನ ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ಗಡಿ ರಕ್ಷಣೆಗೆ ನಿಯೋಜಿಸಲಾಗಿರುವ ಐಟಿಬಿಪಿಗೆ ಹೊಸ ಬೆಟಾಲಿಯನ್‌ಗಳನ್ನು ಒದಗಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರಾಯ್ ಭಾನುವಾರ ಹೇಳಿದರು.
ಇಂಡೊ-ಟಿಬೆಟನ್ ಗಡಿ ಪೊಲೀಸ್‌ನ (ಐಟಿಬಿಪಿ) 60ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
'ಕೇಂದ್ರ ಸರ್ಕಾರ ಕಳೆದ ವರ್ಷ 47 ಹೊಸ ಗಡಿ ಠಾಣೆಗಳು ಹಾಗೂ ಗಸ್ತು ಕಾರ್ಯ ನಿರ್ವಹಿಸುವ 12 ಶಿಬಿರಗಳಿಗೆ ಮಂಜೂರಾತಿ ನೀಡಿದೆ' ಎಂದು ಹೇಳಿದರು.
'ಕಳೆದ ವರ್ಷ ಲಡಾಖ್ ಗಡಿಯಲ್ಲಿ ಚೀನಾ ಯೋಧರನ್ನು ಹಿಮ್ಮೆಟ್ಟಿಸುವಲ್ಲಿ ಐಟಿಬಿಪಿ ಯೋಧರು ಅಪ್ರತಿಮ ಶೌರ್ಯ ಮೆರೆದರು' ಎಂದು ಐಟಿಬಿಪಿ ಪ್ರಧಾನ ನಿರ್ದೇಶಕ ಸಂಜಯ್ ಅರೋರಾ ಹೇಳಿದರು.
8,000 ಸಿಬ್ಬಂದಿಯನ್ನು ಒಳಗೊಂಡ 7 ಹೊಸ ಬೆಟಾಲಿಯನ್‌ಗಳನ್ನು ಒದಗಿಸುವ ನಿರೀಕ್ಷೆ ಇದೆ. ಈ ಬೆಟಾಲಿಯನ್‌ಗಳನ್ನು ಅರುಣಾಚಲ ಪ್ರದೇಶದ ಗಡಿಯಲ್ಲಿನ ಠಾಣೆಗಳಲ್ಲಿ ನಿಯೋಜಿಸಲಾಗುವುದು ಎಂದು ಐಟಿಬಿಪಿ ಅಧಿಕಾರಿಗಳು ಹೇಳಿದ್ದಾರೆ.
ಒಂದು ಬೆಟಾಲಿಯನ್‌ನಲ್ಲಿ ಸಾವಿರ ಸಿಬ್ಬಂದಿಯಂತೆ ಪ್ರಸ್ತುತ ಐಟಿಬಿಪಿಯಲ್ಲಿ 90 ಸಾವಿರ ಯೋಧರಿದ್ದಾರೆ.