ತಿರುವನಂತಪುರ : ಭಾರತೀಯ ಹವಾಮಾನ ಇಲಾಖೆ ಅಕ್ಟೋಬರ್ 20ರಂದು ತಿರುವನಂತಪುರ, ಪತ್ತನಂತಿಟ್ಟ, ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ, ತ್ರಿಶೂರು, ಪಾಲಕ್ಕಾಡ್, ಮಲಪ್ಪುರಂ, ಕೋಝಿಕ್ಕೋಡ್, ವಯನಾಡ್, ಕಣ್ಣೂರು ಜಿಲ್ಲೆ ಸೇರಿದಂತೆ 11 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಹಾಗೂ ಕಾಸರಗೋಡು, ಆಲಪ್ಪುಳ, ಕೊಲ್ಲಂನಲ್ಲಿ ಯೆಲ್ಲೋ ಅಲರ್ಟ್ ಜಾರಿಗೊಳಿಸಿದೆ. ಕಣ್ಣೂರು, ಕಾಸರಗೋಡು ಹೊರತುಪಡಿಸಿ ಉಳಿದೆಲ್ಲಾ ಜಿಲ್ಲೆಗಳಲ್ಲಿ ಅಕ್ಟೋಬರ್ 21ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಕೇರಳದ ವಿವಿಧ ಭಾಗಗಳಲ್ಲಿ ಅಕ್ಟೋಬರ್ 21ರಿಂದ ಮೂರು ದಿನಗಳ ಕಾಲ ಭಾರೀ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೊಚ್ಚಿಯ ಸುಂದರಬನ ಪ್ರದೇಶ ಸೇರಿದಂತೆ ಇಡುಕ್ಕಿ ಅಣೆಕಟ್ಟಿನ ತಗ್ಗು ಪ್ರದೇಶದ ಬಗ್ಗೆ ರಾಜ್ಯ ಸರಕಾರ ಮುನ್ನೆಚ್ಚರಿಕೆ ವಹಿಸಿದೆ. ಅಲ್ಲದೆ, ಪ್ರವಾಹ ಸಂಭವಿಸಲು ಸಾಧ್ಯತೆ ಇರುವ ಪ್ರದೇಶಗಳಿಂದ ಜನರನ್ನು ಸುರಕಿತ ಸ್ಥಳಕ್ಕೆ ಸ್ಥಳಾಂತರಿಸಲು ಆರಂಭಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಇಡುಕ್ಕಿ ಜಲಾಶಯದ ನೀರನ್ನು ಮಂಗಳವಾರ ಬಿಡುಗಡೆ ಮಾಡಲಾಗಿದೆ.
ಈ ನಡುವೆ ಭೂಕುಸಿತ ಸಂಭವಿಸಿದ ಕೋಟ್ಟಯಂ ಜಿಲ್ಲೆಯ ಕೂಟ್ಟಿಕಲ್, ಹಾಗೂ ಇಡುಕ್ಕಿ ಜಿಲ್ಲೆಯ ಕೊಕ್ಕಯಾರ್ನಲ್ಲಿ ನೌಕಾ ಪಡೆ ಹಾಗೂ ಎನ್ಡಿಆರ್‌ಎಫ್ನ ಸಿಬ್ಬಂದಿ ಅವಶೇಷಗಳ ಅಡಿ ಸಿಲುಕಿದ ಇನ್ನೂ ಅನೇಕ ಮೃತದೇಹಗಳನ್ನು ಹೊರ ತೆಗೆದಿದ್ದಾರೆ. ಇದರೊಂದಿಗೆ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 27ಕ್ಕೆ ಏರಿಕೆಯಾಗಿದೆ. ಅಕ್ಟೋಬರ್ 12ರಿಂದ ಮಳೆ ಸಂಬಂಧಿ ದುರಂತಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 38ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹೇಳಿದೆ.
ಭೂಕುಸಿತ ಸಂಭವಿಸಿದ ಕೂಟ್ಟಿಕಲ್ ಪಂಚಾಯತ್ನ ಪ್ಲಾಪಲ್ಲಿಯಲ್ಲಿ 13 ಮೃತದೇಹಗಳು ಹಾಗೂ ಕೊಕ್ಕಯಾರ್ನಲ್ಲಿ 9 ಮೃತದೇಹಗಳು ಪತ್ತೆಯಾಗಿವೆ ಎಂದು ರಾಜ್ಯ ಸರಕಾರದ ಅಂಕಿ-ಅಂಶಗಳು ತಿಳಿಸಿವೆ. ಸೋಮವಾರ ಬೆಳಗ್ಗೆ ಮತ್ತೆ ಮಳೆ ಕಡಿಮೆಯಾಗಿದ್ದು, ಕೊಕ್ಕಯಾರ್ನಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ. ಇಲ್ಲಿ ಕೊನೆಯದಾಗಿ 7 ವರ್ಷದ ಸಚ್ಚು ಸಾಹುಲ್ ನ ಮೃತದೇಹ ಪತ್ತೆಯಾಗಿದೆ. ಇಲ್ಲಿ ಭೂಕುಸಿತ ಸಂಭವಿಸಿದ ಪ್ರದೇಶದಲ್ಲಿದ್ದ ಪಂಚಾಯತ್ ಕಚೇರಿಯ ಸಮೀಪದಿಂದ ನಾಪತ್ತೆಯಾಗಿರುವ ಆಯನ್ಸಿಯ ಮೃತದೇಹ ಇದುವರೆಗೆ ಪತ್ತೆಯಾಗಿಲ್ಲ.