ನವದೆಹಲಿ: ಅಕ್ಟೋಬರ್ 2 ದೇಶದ ಪಿತಾಮಹ ಮಹಾತ್ಮಾ ಗಾಂಧಿ ಮತ್ತು ಮಾಜಿ ಪ್ರಧಾನ ಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ. ಇಂದು ಗಾಂಧೀಜಿಯವರ 152ನೇ ಜಯಂತಿಯನ್ನು ಆಚರಿಸಲಾಗುತ್ತಿದೆ.
ಮಹಾತ್ಮಾ ಗಾಂಧಿ ಜಯಂತಿಯನ್ನು ದೇಶಾದ್ಯಂತ ಇಂದು ಆಚರಿಸಲಾಗುತ್ತಿದ್ದು, ಸರ್ಕಾರದ ಮಟ್ಟದಲ್ಲಿಯೂ ಕಾರ್ಯಕ್ರಮಗಳಿರುತ್ತವೆ. ಗಾಂಧಿ ಜಯಂತಿಗೆ ಸ್ವಚ್ಛ ಅಭಿಯಾನವನ್ನೂ ಕೈಗೊಳ್ಳಲಾಗುತ್ತದೆ. ಈ ಸಂದರ್ಭದಲ್ಲಿ ಮಹಾತ್ಮಾ ಗಾಂಧಿಯವರನ್ನು ಸ್ಮರಿಸಿರುವ ಪ್ರಧಾನಿ ನರೇಂದ್ರ ಮೋದಿ, ಮಹಾತ್ಮಾ ಗಾಂಧಿಯವರ ಜನ್ಮಜಯಂತಿ ಸಂದರ್ಭದಲ್ಲಿ ಅವರಿಗೆ ವಿನಮ್ರ ಶ್ರದ್ಧಾಂಜಲಿ. ಬಾಪೂ ಅವರ ಜೀವನ ಮತ್ತು ಆದರ್ಶ ದೇಶದ ಪ್ರತಿಯೊಬ್ಬರೂ ಕರ್ತವ್ಯ ಮಾರ್ಗದಲ್ಲಿ ಸಾಗಲು ಪ್ರೇರಣೆ ನೀಡುತ್ತದೆ. ಗಾಂಧಿಯವರ ಆದರ್ಶ ತತ್ವಗಳು ಜಾಗತಿಕವಾಗಿ ಪ್ರಸ್ತುತವಾಗಿದ್ದು, ಕೋಟ್ಯಂತರ ಜನಕ್ಕೆ ಪ್ರೇರಣೆಯಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಸಂದರ್ಭದಲ್ಲಿ ಅವರನ್ನು ಸ್ಮರಿಸಿರುವ ಪ್ರಧಾನಿ, ಶಾಸ್ತ್ರಿಯವರು ದೇಶವಾಸಿಗಳಿಗೆ ಸ್ಫೂರ್ತಿ ಎಂದಿದ್ದಾರೆ.
ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರ್ರಸ್ ಶಾಂತಿಮಂತ್ರವನ್ನು ಪುನರುಚ್ಛರಿಸಿದ್ದಾರೆ. ದ್ವೇಷ, ಅಸೂಯೆ, ವಿಭಜನೆ, ಸಂಘರ್ಷವನ್ನು ಬದಿಗಿಟ್ಟು ಶಾಂತಿ, ನಂಬಿಕೆ ಮತ್ತು ಸಹನೆಯ ಹೊಸ ಶಕೆಯನ್ನು ಉಚ್ಛರಿಸುವ ಸಮಯವಿದು ಎಂದಿದ್ದಾರೆ.
ಗಾಂಧಿಯವರ ಜಯಂತಿಯ ಅಂತರಾಷ್ಟ್ರೀಯ ಅಹಿಂಸಾ ದಿನವಾದ ಇಂದು ಅವ ಶಾಂತಿಮಂತ್ರವನ್ನು ಜಪಿಸಿ ಅದರಂತೆ ನಮ್ಮ ಜೀವನದಲ್ಲಿ ನಡೆಯೋಣ, ಉತ್ತಮ ಭವಿಷ್ಯವನ್ನು ಕಟ್ಟಲು ಬದ್ಧರಾಗೋಣ ಎಂದು ಸಂದೇಶ ನೀಡಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಬೆಳಗ್ಗೆ ದೆಹಲಿಯ ರಾಜ್ ಘಾಟ್ ನಲ್ಲಿರುವ ಗಾಂಧಿ ಪ್ರತಿಮೆ ಬಳಿ ತೆರಳಿ ಪುಷ್ಪಗುಚ್ಛವಿರಿಸಿ ಗೌರವ ನಮನ ಸಲ್ಲಿಸಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸಹ ರಾಜ್ ಘಾಟ್ ಗೆ ತೆರಳಿ ಗೌರವ ನಮನ ಸಲ್ಲಿಸಿದ್ದಾರೆ.
ಗಾಂಧೀಜಿ ಹುಟ್ಟು: ಅಕ್ಟೋಬರ್ 2, 1869 ರಂದು ಗುಜರಾತ್‌ನ ಪೋರಬಂದರ್ ನಲ್ಲಿ ಜನಿಸಿದ ಮಹಾತ್ಮ ಗಾಂಧಿ ಅವರ ಮೂಲ ಹೆಸರು ಮೋಹನ್ ದಾಸ್ ಕರಮ್‌ಚಂದ್ ಗಾಂಧಿ. ಜೀವನದುದ್ದಕ್ಕೂ ಅಹಿಂಸಾತ್ಮಕ ಪ್ರತಿರೋಧವನ್ನು ಅಳವಡಿಸಿಕೊಂಡು ಅದರಿಂದಲೇ ಜನಪ್ರಿಯರಾದರು. ಅತ್ಯಂತ ತಾಳ್ಮೆಯಿಂದ ಬ್ರಿಟಿಷ್ ಆಡಳಿತದ ವಿರುದ್ಧ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಇದರಿಂದ ಕೊನೆಗೂ ಭಾರತವು 1947 ರಲ್ಲಿ ತನ್ನ ಸ್ವಾತಂತ್ರ್ಯವನ್ನು ಸಾಧಿಸಲು ಕಾರಣವಾಯಿತು.
ಮೋಹನ್ ದಾಸ್ ಕರಮಚಂದ ಗಾಂಧಿ ತಮ್ಮ ತತ್ವ, ನಂಬಿಕೆ, ಸರಳ ಜೀವನ, ಸ್ವದೇಶಿ, ತಾಳ್ಮೆ, ಅಹಿಂಸೆ, ಶಾಂತಿ ಮಂತ್ರಗಳಿಂದ ದೇಶಕ್ಕೆ ಸ್ವಾತಂತ್ರ್ಯ ತರುವಲ್ಲಿ ಯಶಸ್ವಿಯಾಗಿ ಮಹಾತ್ಮಾ ಗಾಂಧಿಯಾದರು, ಜನರು ಪ್ರೀತಿಯಿಂದ ಬಾಪು ಎಂದು ಸಹ ಕರೆಯುತ್ತಾರೆ. 'ಸ್ವರಾಜ್' (ಸ್ವಯಂ ಆಡಳಿತ) ಮತ್ತು 'ಅಹಿಂಸಾ' (ಅಹಿಂಸೆ) ಅವರ ಅಚಲ ನಂಬಿಕೆಗೆ ವಿಶ್ವದಾದ್ಯಂತ ಮೆಚ್ಚುಗೆ ಗಳಿಸಿತು. ಜಾಗತಿಕವಾಗಿ ಗಾಂಧಿಯವರ ಜನ್ಮದಿನವನ್ನು ಅಂತರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಸಂದರ್ಭವನ್ನು ಗುರುತಿಸಲು ಭಾರತ ಮತ್ತು ಪ್ರಪಂಚದಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ.