ನವದೆಹಲಿ :ಟೋಕಿಯೊ ಒಲಿಂಪಿಕ್ಸ್‌ನ ಭರ್ಚಿ ಎಸೆತದಲ್ಲಿ (ಜಾವೆಲಿನ್ ಥ್ರೊ) ಬಂಗಾರದ ಪದಕ ಪಡೆದು ಇಡೀ ಭಾರತವೇ ಹೆಮ್ಮೆ ಪಡುವಂತೆ ಮಾಡಿರುವ ನೀರಜ್ ಚೋಪ್ರಾ ಇದೀಗ ವಿಶ್ರಾಂತಿಯಲ್ಲಿ ಇದ್ದಾರೆ.
ಸದ್ಯ ಮಾಲ್ಡೀವ್ಸ್ ಪ್ರವಾಸ ಕೈಗೊಂಡಿರುವ ಅವರು ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಿದ್ದಾರೆ. ಈ ವೇಳೆಯೂ ಅವರು ಜಾವೆಲಿನ್ ಬಗ್ಗೆಯೇ ಯೋಚಿಸುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿ ಸಿಕ್ಕಿದೆ.
ನೀರಿನಾಳದಲ್ಲಿ ಡೈವಿಂಗ್ ಮಾಡುತ್ತಿರುವ (ಸ್ಕೂಬಾ ಡೈವಿಂಗ್) ವಿಡಿಯೊ ಒಂದನ್ನು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಹಂಚಿಕೊಂಡಿರುವ ನೀರಜ್, ನೀರಿನಾಳದಲ್ಲಿ ಜಾವೆಲಿನ್ ಎಸೆದು ವಿಜಯದ ಸಂಕೇತ ತೋರಿಸಿದ್ದಾರೆ. ಅಸಲಿಗೆ ಅಲ್ಲಿ ಜಾವೆಲಿನ್ ಇರಲಿಲ್ಲ. ಜಾವೆಲಿನ್ ಎಸೆಯುವ ಹಾಗೇ ಅಭಿನಯಿಸಿ ಎಲ್ಲರ ಮನಗೆದ್ದಿದ್ದಾರೆ. ಈ ವೇಳೆ ಹಿನ್ನೆಲೆಯಲ್ಲಿ ಎ.ಆರ್ ರೆಹಮಾನ್ ಅವರ 'ವಂದೇ ಮಾತರಂ' ಗೀತೆ ಕೇಳಿ ಬಂದಿದೆ.
'ನಾನು ಯಾವಾಗಲೂ ಜಾವೆಲಿನ್ ಬಗ್ಗೆಯೇ ವಿಚಾರ ಮಾಡುವುದು' ಎಂದು ತಮ್ಮ ನೀರಿನಾಳದ ವಿಡಿಯೊಕ್ಕೆ ನೀರಜ್ ಚೋಪ್ರಾ ಒಕ್ಕಣಿಕೆ ಬರೆದುಕೊಂಡಿದ್ದಾರೆ. ಅನೇಕರು, 'ಸಹೋದರ ನಿನ್ನ ದೇಹ ಹಾಗೂ ಮನಸ್ಸಿಗೆ ಸ್ವಲ್ಪ ವಿಶ್ರಾಂತಿ ನೀಡು' ಎಂದು ಸಲಹೆ ನೀಡಿದ್ದಾರೆ.
ಕಳೆದ ಆಗಸ್ಟ್‌ನಲ್ಲಿ ನಡೆದಿದ್ದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕೇವಲ 23 ನೇ ವಯಸ್ಸಿನಲ್ಲಿ ನೀರಜ್ ಚೋಪ್ರಾ 87.58 ಮೀಟರ್ ದೂರ ಜಾವೆಲಿನ್ ಎಸೆದು ಬಂಗಾರದ ಪದಕ ಪಡೆದಿದ್ದರು. ನೀರಜ್ ಚೋಪ್ರಾ ವೈಯುಕ್ತಿಕ ವಿಭಾಗದಲ್ಲಿ ಬಂಗಾರದ ಪದಕ ಪಡೆದ ಭಾರತದ ಎರಡನೇ ಕ್ರೀಡಾಪಟು ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.