ನವದೆಹಲಿ: ಹಿಂದೂ ಮತ್ತು ಮುಸಲ್ಮಾನರು ಒಂದೇ ಪೂರ್ವಜನರನ್ನು ಹೊಂದಿದ್ದು ಈ ಆಲೋಚನೆ ಭಾರತದ ಸ್ವಾತಂತ್ರ್ಯ ಸಂಗ್ರಾಮ ವೇಳೆ ಇರುತ್ತಿದ್ದರೆ ಭಾರತ ಇಬ್ಭಾಗವಾಗುವುದನ್ನು ತಡೆಯಬಹುದಾಗಿತ್ತು ಎಂದು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಪಾಕಿಸ್ತಾನಕ್ಕೆ ಇಲ್ಲಿಂದ ವಲಸೆ ಹೋದ ಮುಸಲ್ಮಾನರಿಗೆ ಅಲ್ಲಿ ಹೆಚ್ಚು ಗೌರವ, ಸ್ಥಾನಮಾನ ಸಿಗುತ್ತಿಲ್ಲ. ಇಲ್ಲಿ ಆದರೆ ಇಲ್ಲಿ ಉಳಿದುಕೊಂಡವರು ತಮ್ಮ ಧಾರ್ಮಿಕ ಆಚರಣೆ-ವಿಧಿ ವಿಧಾನಗಳನ್ನು ಲೆಕ್ಕಿಸದೆ ಭಾರತಕ್ಕೆ ಸೇರಿದವರಾಗಿದ್ದಾರೆ, ಅಷ್ಟಕ್ಕೂ ನಮಗೆಲ್ಲಾ ಬೇಕಿರುವುದು ಸಾಮರಸ್ಯದ ಸಮಾಜ ಎಂದು ಮೋಹನ್ ಭಾಗವತ್ ಹೇಳಿದ್ದಾರೆ.
ಭಾರತದ ಹಿಂದುತ್ವ ಮತ್ತು ಸನಾತನ ಧರ್ಮದ ಸಂಸ್ಕೃತಿಯು ಉದಾರವಾಗಿದೆ, "ನಾವು ಈ ಸಂಸ್ಕೃತಿಯನ್ನು ಆನುವಂಶಿಕವಾಗಿ ಪಡೆದುಕೊಂಡಿದ್ದೇವೆ. ಆರಾಧನಾ ವಿಧಾನದಿಂದ ಯಾರನ್ನೂ ಪ್ರತ್ಯೇಕಿಸಲು ಸಾಧ್ಯವಿಲ್ಲ. ನಮ್ಮ (ಹಿಂದೂಗಳು ಮತ್ತು ಮುಸ್ಲಿಮರು) ಪೂರ್ವಜರು ಒಬ್ಬರೇ. ಸ್ವಾತಂತ್ರ್ಯ ಚಳುವಳಿಯ ಸಮಯದಲ್ಲಿ ಈ ಪ್ರಕ್ರಿಯೆ ಮುಂದುವರಿದಿದ್ದರೆ, ವಿಭಜನೆಯನ್ನು ನಿಲ್ಲಿಸಲು ಒಂದು ಮಾರ್ಗವಿತ್ತು'' ಎಂದು ಹೇಳಿದ್ದಾರೆ.
ಹಿಂದುತ್ವ ಪ್ರತಿಪಾದಕ ವಿ ಡಿ ಸಾವರ್ಕರ್ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮೋಹನ್ ಭಾಗವತ್ ಹೀಗೆ ಹೇಳಿದ್ದಾರೆ. ಸಾವರ್ಕರ್ ಅವರು ರಾಷ್ಟ್ರೀಯವಾದಿ ಮತ್ತು ಒಬ್ಬ ದೂರಗಾಮಿ ವ್ಯಕ್ತಿತ್ವದ ವ್ಯಕ್ತಿಯಾಗಿದ್ದರು. ಸಾವರ್ಕರ್ ಅವರ ಹಿಂದುತ್ವ ಒಟ್ಟಾರೆಯಾಗಿ ಅಖಂಡ ಭಾರತದ ಬಗ್ಗೆಯಾಗಿತ್ತು. ಅಲ್ಲಿ ಜಾತಿ, ಧರ್ಮ, ಸ್ಥಾನಮಾನಗಳ ಆಧಾರದ ಮೇಲೆ ಯಾರನ್ನೂ ಪ್ರತ್ಯೇಕಿಸುತ್ತಿರಲಿಲ್ಲ. ಅಲ್ಲಿ ಮೊದಲು ಬರುತ್ತಿದ್ದುದು ದೇಶ ಎಂದಿದ್ದಾರೆ.
ಭಾರತೀಯ ಸಮಾಜದಲ್ಲಿ ಹಿಂದುತ್ವ ಮತ್ತು ಏಕತೆಯ ಬಗ್ಗೆ ಹಲವರು ಮಾತನಾಡಿದ್ದರು, ಸಾವರ್ಕರ್ ಅದರ ಬಗ್ಗೆ ಗಟ್ಟಿಯಾಗಿ ಮಾತನಾಡಿದ್ದರು, ಇನ್ನೂ ಹಲವರು ಮಾತನಾಡುತ್ತಿದ್ದರೆ ಆಗ ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲಿ ವಿಭಜನೆ ಆಗುತ್ತಿರಲಿಲ್ಲ ಎಂದರು.
"ವಿಭಜನೆಯ ನಂತರ ಪಾಕಿಸ್ತಾನಕ್ಕೆ ವಲಸೆ ಬಂದ ಮುಸ್ಲಿಮರು ಆ ದೇಶದಲ್ಲಿ ಯಾವುದೇ ಗೌರವ-ಪ್ರತಿಷ್ಠೆಯನ್ನು ಹೊಂದಿಲ್ಲ, ಏಕೆಂದರೆ ಅವರು ಭಾರತಕ್ಕೆ ಸೇರಿದವರು ಮತ್ತು ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಹಿಂದೂ-ಮುಸಲ್ಮಾನರಿಗಿಬ್ಬರಿಗೂ ಒಬ್ಬರೇ ಪೂರ್ವಜರು. ನಮ್ಮ ಪೂಜಾ ವಿಧಾನ ಮಾತ್ರ ವಿಭಿನ್ನವಾಗಿದೆ. ನಮ್ಮ ಉದಾರವಾದಿ ಸಂಸ್ಕೃತಿ, ಸನಾತನ ಧರ್ಮದ ಬಗ್ಗೆ ನಾವೆಲ್ಲರೂ ಹೆಮ್ಮೆ ಪಡಬೇಕು. ಆ ಪರಂಪರೆ ನಮ್ಮನ್ನು ಮುನ್ನಡೆಸುತ್ತದೆ, ಅದಕ್ಕಾಗಿಯೇ ನಾವೆಲ್ಲರೂ ಇಲ್ಲಿ ಒಟ್ಟಿಗೆ ವಾಸಿಸುತ್ತಿದ್ದೇವೆ ಎಂದು ಭಾಗವತ್ ಹೇಳಿದ್ದಾರೆ.
ಸಾವರ್ಕರ್ ಅವರ ಹಿಂದುತ್ವವೇ ಆಗಿರಲಿ ಅಥವಾ ವಿವೇಕಾನಂದರ ಹಿಂದುತ್ವವೇ ಆಗಿರಲಿ, ಎಲ್ಲರೂ ಒಂದೇ ಸಿದ್ಧಾಂತದ ಆಧಾರದ ಮೇಲೆ ಜನರು ಭಿನ್ನವಾಗಿರದ ಒಂದೇ ಸಾಂಸ್ಕೃತಿಕ ರಾಷ್ಟ್ರೀಯತೆಯ ಬಗ್ಗೆ ಮಾತನಾಡಿದ್ದಾರೆ. ನಾವೇಕೆ ಇಲ್ಲಿ ವ್ಯತ್ಯಾಸ ಕಾಣಬೇಕು. ನಾವು ಒಂದೇ ದೇಶದಲ್ಲಿ ಜನಿಸಿದ್ದೇವೆ, ಅದಕ್ಕಾಗಿ ಹೋರಾಡಿದ್ದೇವೆ. ದೇವರನ್ನು ಪೂಜಿಸುವುದು ನಮ್ಮ ನಮ್ಮ ವಿಧಾನವಾಗಿದೆ, ದೇವರನ್ನು ಆರಾಧಿಸುವ ವಿಭಿನ್ನ ವಿಧಾನಗಳು ನಮ್ಮ ಸಂಪ್ರದಾಯವಾಗಿದೆ ಎಂದು ಹೇಳಿದ್ದಾರೆ.
ಪ್ರಸ್ತುತ ಯುಗ ರಾಷ್ಟ್ರೀಯವಾದಿಗಳ ಯುಗವಾಗಿರುವುದರಿಂದ ಅದನ್ನು ಸಾವರ್ಕರ್ ಯುಗ ಎಂದು ಕರೆಯುವುದರಲ್ಲಿ ಯಾವುದೇ ತಪ್ಪು ಅಥವಾ ಅರ್ಥಹೀನವಾಗಿಲ್ಲ ಎಂದು ಸಹ ಮೋಹನ್ ಭಾಗವತ್ ಸ್ಪಷ್ಟಪಡಿಸಿದ್ದಾರೆ.