ನವದೆಹಲಿ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ಸಿಂಘು ಗಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ರೈತ ಪರ ಸಂಘಟನೆ ಸಂಯುಕ್ತ ಕಿಸಾನ್ ಮೋರ್ಚಾ ಪ್ರತಿಕ್ರಿಯಿಸಿದೆ.
ಸಿಂಘುಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯ ಮುಂದಾಳತ್ವ ವಹಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ ಈ ಕೊಲೆಗೂ ತಮ್ಮ ಸಂಘಟನೆಗೂ ಯಾವುದೇ ರೀತಿಯ ಸಂಬಂಧವಿಲ್ಲ. ಕೊಲೆ ಪ್ರಕರಣದಲ್ಲಿ ಕೇಳಿಬರುತ್ತಿರುವ ನಿಹಂಗ್ ಸಿಖ್ ಸಮುದಾಯವಾಗಲೀ ಅಥವಾ ಕೊಲೆಯಾದ ವ್ಯಕ್ತಿಯಾಗಲಿ ತಮ್ಮ ಸಂಘಟನೆಗೆ ಸೇರಿದವರಲ್ಲ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಸ್ಪಷ್ಟನೆ ನೀಡಿದೆ. ಆ ಮೂಲಕ ಕೊಲೆ ಪ್ರಕರಣದಿಂದ ದೂರು ಉಳಿದಿದೆ.
ಇದೇ ವೇಳೆ ನಿಹಂಗ್ ಸಿಖ್ ಗುಂಪು ಯಾವುದೇ ರೀತಿಯ ಧಾರ್ಮಿಕ ಪವಿತ್ರತೆಯನ್ನು ದ್ವೇಷಿಸುತ್ತದೆ ಎಂದು ಹೇಳಿದ ಎಸ್ ಕೆಎಂ, ಆದರೆ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳಲು ಯಾರಿಗೂ ಅವಕಾಶ ನೀಡಲಾಗುವುದಿಲ್ಲ. ತಪ್ಪಿತಸ್ಥರಿಗೆ ಕಾನೂನಿನ ಪ್ರಕಾರ ಶಿಕ್ಷೆಯಾಗಬೇಕು. ಈ ಸಂಬಂಧ ತಮ್ಮ ಸಂಘಟನೆ ಪೊಲೀಸರಿಗೆ ತನ್ನ ಸಂಪೂರ್ಣ ಬೆಂಬಲವನ್ನು ನೀಡಲಿದೆ ಎಂದು ಹೇಳಿದೆ.
ಕೊಲೆ ಹಿಂದೆ ನಿಹಂಗ್ ಸಿಖ್ಖರ ಕೈವಾಡ
ಇದೇ ವೇಳೆ ಮಾತನಾಡಿದ ಎಸ್ ಕೆಎಂ ಮುಖಂಡ ಬಲ್ಬೀರ್ ಸಿಂಗ್ ರಾಜೇವಾಲ್ ಅವರು ಕೊಲೆಯಲ್ಲಿ ನಿಹಂಗ್ ಸಿಖ್ ಸಮುದಾಯದ ಕೈವಾಡವಿದೆ. ಇದನ್ನು ಆ ಸಮುದಾಯ ಒಪ್ಪಿಕೊಳ್ಳಬೇಕ ಎಂದು ಆಗ್ರಹಿಸಿದರು. ಅಲ್ಲದೆ ಇದರಿಂದ ಅಮಾಯಕರನ್ನು ಕೂಡ ಶಂಕೆಯಿಂದ ನೋಡಲಾಗುತ್ತಿದೆ ಎಂದು ಹೇಳಿದರು.
ಈ ಭೀಕರ ಕೊಲೆಯ ಹಿಂದೆ ಪಂಜಾಬ್ ನ ನಿಹಾಂಗ್ ಸಿಖ್ಖರ ಕೈವಾಡವಿದೆ ಎಂದು ಹೇಳಲಾಗುತ್ತಿದೆ. ತಮ್ಮ ಶಸ್ತ್ರಾಸ್ತ್ರ ಸಹಿತ ವೇಷಭೂಷಣಗಳಿಂದಲೇ ಖ್ಯಾತಿಗಳಿಸಿರುವ ನಿಹಂಗ್ ಸಿಖ್ಖ್ ಸಮುದಾಯ ಇದೀಗ ಮತ್ತೊಮ್ಮೆ ತಮ್ಮ ಕ್ರೂರತನದಿಂದ ಕುಖ್ಯಾತಿ ಪಡೆಯುತ್ತಿದೆ. ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿರುವ ವಿಡಿಯೋಗಳ ಅನ್ವಯ ಈ ಕೊಲೆಯಾದಾಗ ಘಟನಾ ಪ್ರದೇಶದಲ್ಲಿದ್ದ ಬಹುತೇಕ ಮಂದಿ ನಿಹಂಗ್ ಸಿಖ್ಖ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎನ್ನಲಾಗಿದೆ. ಹೀಗಾಗಿ ಪೊಲೀಸರು ಕೂಡ ಈ ವಿಡಿಯೋಗಳ ಆಧಾರದ ಮೇಲೆ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.