ಬೆಂಗಳೂರು: ನಟ ಪುನೀತ್ ರಾಜ್ಕುಮಾರ್ ಅವರ ಅಂತ್ಯಕ್ರಿಯೆ ನೆರವೇರಿದೆ. ಕಂಠೀರವ ಸ್ಟುಡಿಯೋ ಆವರಣದಲ್ಲಿ ಭಾನುವಾರ ಮುಂಜಾನೆ 7.30ಕ್ಕೆ ಅಂತ್ಯ ಸಂಸ್ಕಾರ ಮಾಡಲಾಗಿದೆ. ಈ ನಡುವೆ ಅಂತ್ಯಸಂಸ್ಕಾರದವರಗೂ ಸಹಕಾರ ನೀಡಿದ ಎಲ್ಲಾ ಅಭಿಮಾನಿಗಳು ಹಾಗೂ ಸರ್ಕಾರಕ್ಕೆ ಪುನೀತ್ ರಾಜ್ ಕುಮಾರ್ ಅವರ ಸಹೋದರ ರಾಘವೇಂದ್ರ ರಾಜಕುಮಾರ್ ಅವರು ಧನ್ಯವಾದಗಳನ್ನು ಹೇಳಿದ್ದಾರೆ.
ಅಂತ್ಯಸಂಸ್ಕಾರದ ಕಾರ್ಯ ಪೂರ್ಣಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರ ಸಹಕಾರದಿಂದ ಅಂತ್ಯಕ್ರಿಯೆ ಶಾಂತಿಯುತವಾಗಿ ನೆರವೇರಿದೆ. ಸರ್ಕಾರ, ಅಭಿಮಾನಿಗಳು ಸೇರಿ ಎಲ್ಲರಿಗೂ ಧನ್ಯವಾದಗಳು. ಪುನೀತ್ ಇಲ್ಲದ ಕೊರಗು ಕೊನೆಯವರೆಗೂ ಇರುತ್ತದೆ ಎಂದು ಹೇಳಿದ್ದಾರೆ.
ಇಂದು ಕೇವಲ ಪೂಜೆ ಮಾತ್ರ ಮಾಡಲಾಗುತ್ತಿದ್ದು, 5ನೇ ದಿನವಾದ ಮಂಗಳವಾರ ಹಾಲು-ತುಪ್ಪ ಕಾರ್ಯ ನೆರವೇರಿಸುತ್ತೇವೆ. ಇದಾದ ಬಳಿಕ ಸಾರ್ವಜನಿಕರಿಗೆ ಕಂಠೀರವ ಸ್ಟುಡಿಯೊ ಒಳಗಡೆ ಪುನೀತ್ ಸಮಾಧಿ ನೋಡಲು ಅವಕಾಶ ನೀಡಲಾಗುವುದು. ಈ ಭಾರ ನಮ್ಮ ಕೊನೆಯವರೆಗೂ ಇರಲಿದೆ. ತಂದೆ ತಾಯಿಯನ್ನು ಇಷ್ಟಪಟ್ಟು ಅಪ್ಪು ಬೇಗ ಹೋಗಿದ್ದಾನೆ ಎನಿಸುತ್ತಿದೆ. ಅಭಿಮಾನಿಗಳ ಪ್ರೀತಿಗೆ ಏನೂ ಹೇಳಲು ಸಾಧ್ಯವಿಲ್ಲ. ಇದಕ್ಕಾಗಿಯೇ ಅಪ್ಪಾಜಿ ಅಭಿಮಾನಿ ದೇವರುಗಳು ಎಂದಿದ್ದರು.
ಅಪ್ಪಾಜಿ ನಿಧನರಾದ ಸಂದರ್ಭದಲ್ಲಿ ಜನರೇ ಕಂಠೀರವ ಸ್ಟುಡಿಯೊ ಒಳಗೆ ಹೋಗಿ ಕುಟುಂಬಸ್ಥರಿಗಿಂತ ಮೊದಲೇ ಹಾಲು–ತುಪ್ಪ ಬಿಟ್ಟಿದ್ದರು. ಮಣ್ಣನ್ನೂ ತೋಡಿದ್ದರು. ಹೀಗಾಗಿ ಈ ಬಾರಿ ಹಾಗೆ ಆಗಬಾರದು ಎಂದು ಕುಟುಂಬಸ್ಥರು ಹಾಲು–ತುಪ್ಪ ಬಿಟ್ಟ ಬಳಿಕ ಸಾರ್ವಜನಿಕರಿಗೆ ಪ್ರವೇಶಕ್ಕೆ ಅವಕಾಶ ನೀಡಲಾಗುವುದು' ಎಂದು ತಿಳಿಸಿದ್ದಾರೆ.