ನವದೆಹಲಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಪಿಎಚ್‌ಡಿ ಕಡ್ಡಾಯವಾಗಿದೆ. ಆದರೆ ಈ ಬಾರಿ ನಿಯಮದಿಂದ ವಿಶ್ವವಿದ್ಯಾಲಯಗಳ ಅನುದಾನ ಆಯೋಗ (ಯುಜಿಸಿ) ಸಡಿಲಿಕೆ ನೀಡಿದೆ.
ಕಡ್ಡಾಯವಾಗಿ ಪಿಎಚ್‌ಡಿ ಹೊಂದಿರಲೇಬೇಕು ಎಂದಿರುವ ತನ್ನ ಆದೇಶವನ್ನು ತಾತ್ಕಾಲಿಕವಾಗಿ ತಡೆ ಹಿಡಿದಿರುವ ಆಯೋಗ, ಕಡ್ಡಾಯವಾಗಿ ಪಿಎಚ್‌ಡಿ ಹೊಂದುವ ಅಗತ್ಯವಿಲ್ಲ ಎಂದು ಹೇಳಿದೆ.
ಕಳೆದ ಎರಡು ವರ್ಷಗಳಿಂದ ಕೊರೊನಾ ಸೋಂಕು ಹಿನ್ನೆಲೆಯಲ್ಲಿ, ಈ ವರ್ಷ ಸಹಾಯಕ ಪ್ರಾಧ್ಯಾಪಕರನ್ನು ನೇಮಿಸಿಕೊಳ್ಳಲು ಪಿಎಚ್‌ಡಿಯನ್ನು ಕನಿಷ್ಠ ಅರ್ಹತೆಯನ್ನಾಗಿ ಮಾಡುವ ಯೋಜನೆಯನ್ನು ಮುಂದುವರಿಸದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಆದ್ದರಿಂದ, ಈ ಆದೇಶ ಹೊರಡಸಲಾಗಿದೆ ಎಂದಿರುವ ವಿಶ್ವವಿದ್ಯಾಲಯಗಳ ಅನುದಾನ ಆಯೋಗ, ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪಿಎಚ್‌ಡಿ ಕಡ್ಡಾಯ ಎಂಬ ಆದೇಶವನ್ನು ಜುಲೈ 2023ರ ಜುಲೈ 1ರವರೆಗೆ ಮುಂದೂಡಿದೆ. ಇದರ ಅರ್ಥ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಪಿಎಚ್‌ಡಿ ಕಡ್ಡಾಯವಲ್ಲ ಎಂದ ಈ ಆದೇಶವು 2023ರ ಜುಲೈ1ರವರೆಗೆ ಚಾಲ್ತಿಯಲ್ಲಿ ಇರುತ್ತದೆ.
2018 ರಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗವು, ವಿಶ್ವವಿದ್ಯಾಲಯಗಳು ಮತ್ತು ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪ್ರವೇಶ ಮಟ್ಟದ ಹುದ್ದೆಗಳ ನೇಮಕಾತಿಗಳ ಮಾನದಂಡಗಳನ್ನು ನಿಗದಿ ಮಾಡಿತ್ತು. ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಮೂರು ವರ್ಷಗಳ ಗಡುವು ನೀಡಲಾಗಿತ್ತು.
2021-22ರ ಅವಧಿಗೆ ಇವರಿಗೆ ಬಡ್ತಿ ನೀಡುವ ಸಮಯದಲ್ಲಿ ಪಿಎಚ್‌ಡಿ ಕಡ್ಡಾಯವನ್ನು ಪರಿಗಣಿಸಬೇಕು ಎಂದು ಸೂಚಿಸಲಾಗಿತ್ತು. ಈ ಅವಧಿಯಲ್ಲಿ ಅವರು ಪಿಎಚ್‌ಡಿ ಮುಗಿಸಬೇಕು ಎಂದು ಹೇಳಲಾಗಿತ್ತು. ಅದನ್ನೀಗ ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್‌ಇಟಿ) ಪಾಸಾದ ಸ್ನಾತಕೋತ್ತರ ಪದವೀಧರರು ಈ ಹುದ್ದೆಯಲ್ಲಿ ಸದ್ಯ ಮುಂದುವರಿಯಲು ಅವಕಾಶ ಕಲ್ಪಿಸಲಾಗಿದೆ.