ಪತ್ತನಂತಿಟ್ಟ: ತುಲಾಮಾಸದ ಪೂಜೆಗೆ ತೆರೆದಿರುವ ಶಬರಿಮಲೆಗೆ ಭಾರೀ ಮಳೆಯಿಂದಾಗಿ ಯಾತ್ರಾರ್ಥಿಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಸರ್ಕಾರ ಹೇಳಿದೆ. ಪತ್ತನಂತಿಟ್ಟದಲ್ಲಿ ಪರಿಶೀಲನಾ ಸಭೆಯ ನಂತರ, ಕಂದಾಯ ಸಚಿವ ಕೆ. ರಾಜನ್ ಇದನ್ನು ಸ್ಪಷ್ಟಪಡಿಸಿದ್ದಾರೆ. ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ಈ ಬಾರಿ ತುಲಾಮಾಸ ಪೂಜೆಯ ಸಮಯದಲ್ಲಿ ಯಾತ್ರೆಯನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.
ಯಾತ್ರಿಕರನ್ನು ಸುರಕ್ಷಿತವಾಗಿ ವಾಪಸ್ ಕಳುಹಿಸುವಂತೆ ಸಚಿವರು ಜಿಲ್ಲಾಡಳಿತಕ್ಕೆ ಸೂಚಿಸಿದರು. ಸುಮಾರು 300 ಯಾತ್ರಿಕರು ಇಲ್ಲಿ ಸಿಲುಕಿಕೊಂಡಿದ್ದಾರೆ. ಯಾತ್ರಿಕರಿಗೆ ಬೇಕಾದ ಮೂಲ ಸೌಕರ್ಯಗಳು ಕೂಡ ಸ್ಥಳದಲ್ಲಿಲ್ಲ. ಪ್ರತಿಭಟನೆಯಲ್ಲಿ ಇಂದು ಬೆಳಿಗ್ಗೆ ಸ್ಥಳಕ್ಕೆ ಆಗಮಿಸಿದ ಪೋಲೀಸ್ ವಾಹನವನ್ನು ತಡೆಹಿಡಿಯಲಾಯಿತು.
ನಿಲಕ್ಕಲ್ ಮತ್ತು ಪೆರುಂತೇನರುವಿ ಪ್ರದೇಶಗಳಲ್ಲಿ ಭಾನುವಾರವಷ್ಟೇ 20 ಸೆಂ.ಮೀ.ಗಿಂತ ಹೆಚ್ಚು ಮಳೆಯಾಗಿದೆ. ಕಾಕಿ ಅಣೆಕಟ್ಟಿನ ಶಟರ್‍ಗಳನ್ನು ತೆರೆಯಲಾಗಿದೆ. ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಳಗೊಂಡಿದೆ. ಕಾಡಿನಲ್ಲಿ ಭಾರೀ ಮಳೆಯಿಂದಾಗಿ ಭೂಕುಸಿತ ಮತ್ತು ಮಣ್ಣು ಕುಸಿತದ ಅಪಾಯವೂ ಹೆಚ್ಚಾಗುತ್ತಿದೆ. ಬುಧವಾರದಿಂದ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಈ ಸಂದರ್ಭಗಳಲ್ಲಿ ಈ ದಿನಗಳಲ್ಲಿ ತೀರ್ಥಯಾತ್ರೆಗೆ ಅವಕಾಶ ನೀಡಲಾಗುವುದಿಲ್ಲ ಎಂದು ಸಭೆ ತಿಳಿಸಿದೆ.
ಶಬರಿಮಲೆ ಕಾರ್ಯನಿರ್ವಾಹಕ ಅಧಿಕಾರಿ ನಿನ್ನೆ ಬೇರೆ ರಾಜ್ಯಗಳಿಂದ ಆಗಮಿಸಿದ ಭಕ್ತರಿಗೆ ದೇಗುಲಕ್ಕೆ ಅವಕಾಶ ನೀಡುವುದಾಗಿ ಹೇಳಿದ್ದರು. ಇದರಿಂದ ಇತರ ರಾಜ್ಯಗಳಿಂದ ಯಾತ್ರಿಕರು ನೀಲಕ್ಕಲ್ ಗೆ ಆಗಮಿಸಿದ್ದರು. ಆದರೆ ದೇವಸ್ವಂ ಬೋರ್ಡ್ ನಿರಾಕರಿಸಿದ ಕಾರಣ ಜನದಟ್ಟ|ಣೆ ಹೆಚ್ಚಳಗೊಂಡು ಗೊಂದಲ ಸೃಷ್ಟಿಯಾಯಿತೆಂದು ಹೇಳಲಾಗಿದೆ. ಸಿಲುಕಿಕೊಂಡ ಭಕ್ತರಿಗೆ ಸೇವಾ ಭಾರತಿ ಕೈಲಾದ ಸಹಾಯ ನೀಡುತ್ತಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.