ತಿರುವನಂತಪುರ: ಪಶ್ಚಿಮ ಘಟ್ಟಗಳಲ್ಲಿ ಪರಿಸ್ಥಿತಿ ತೀರ ಹದಗೆಡುತ್ತಿದ್ದು, ಮುಂದಾಗಬಹುದಾದ ವಿಪತ್ತುಗಳನ್ನು ತಡೆಯುವುದಕ್ಕಾಗಿ ತಳಮಟ್ಟದಿಂದಲೇ ಸಮರ್ಪಕವಾದ ತುರ್ತು ಕ್ರಮಗಳನ್ನು ತೆಗೆದುಕೊಳ್ಳಲು ಸಾರ್ವಜನಿಕರು ಜನಪ್ರತಿನಿಧಿಗಳ ಮೇಲೆ ಒತ್ತಡ ಹೇರಬೇಕು ಎಂದು ಖ್ಯಾತ ಪರಿಸರವಾದಿ ಮಾಧವ್ ಗಾಡ್ಗೀಳ್ ಸಲಹೆ ನೀಡಿದ್ದಾರೆ.
ಕೇರಳದ ಪಶ್ಚಿಮ ಘಟ್ಟದಾದ್ಯಂತ ಸುರಿಯುತ್ತಿರುವ ಭಾರಿ ಮಳೆ ಮತ್ತು ಅದರಿಂದ ಉಂಟಾಗುತ್ತಿರುವ ಪ್ರವಾಹ, ಭೂಕುಸಿತದಂತಹ ಘಟನೆಗಳಿಗೆ ಕಾರಣ ಮತ್ತು ಪರಿಹಾರ ಕುರಿತು 'ಪಿಟಿಐ'ಗೆ ನೀಡಿದ ಸಂದರ್ಶನದಲ್ಲಿ ಈ ಸಲಹೆ ನೀಡಿದ್ದಾರೆ.
ಕಳೆದ ಎರಡು ದಿನಗಳಿಂದ ಕೇರಳದ ಮಧ್ಯಭಾಗ, ಪಶ್ಚಿಮ ಘಟ್ಟದ ಗುಡ್ಡಗಾಡು ಪ್ರದೇಶ ವ್ಯಾಪ್ತಿಯಲ್ಲಿರುವ ಕೋಟಯಂ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಸುರಿದ ಭಾರಿ ಮಳೆ, ಪ್ರವಾಹ, ಭೂ ಕುಸಿತದಿಂದಾಗಿ ಹತ್ತಾರು ಮಂದಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಮಾತನಾಡಿದ ಗಾಡ್ಗೀಳ್, 'ಈ ಪ್ರದೇಶಗಳು ಇಂಥ ವಿಷಮ ಪರಿಸ್ಥಿತಿಗೆ ತಲುಪುತ್ತಿರುವುದು ಅತ್ಯಂತ ದುರದೃಷ್ಟಕರ' ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಪಶ್ಚಿಮ ಘಟ್ಟಗಳ ಸಂರಕ್ಷಣೆ ಕುರಿತು 2011ರಲ್ಲಿ ತಮ್ಮ ನೇತೃತ್ವದ 'ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿ (ಡಬ್ಲುಜಿಇಇಪಿ) ಸಲ್ಲಿಸಿದ್ದ 'ಗಾಡ್ಗೀಳ್ ವರದಿ' ಎಂದೇ ಪರಿಚಿತವಾಗಿರುವ ಆ ವರದಿಯನ್ನು ಅನುಷ್ಠಾನಗೊಳಿಸಬೇಕಿದೆ. ಪಶ್ಚಿಮ ಘಟ್ಟಗಳಲ್ಲಿ ವಾಸಿಸುವ ಸ್ಥಳೀಯ ಸಮುದಾಯಗಳು ತಮಗೆ ಸಂವಿಧಾನ ನೀಡಿರುವ ಪ್ರಜಾಪ್ರಭುತ್ವ ಹಕ್ಕುಗಳನ್ನು ಪ್ರತಿಪಾದಿಸಬೇಕು' ಎಂದು ಅವರು ಹೇಳಿದರು.
ಪಶ್ಚಿಮ ಘಟ್ಟಗಳಲ್ಲಿ ಸಂಭವಿಸುತ್ತಿರುವ ಅನಾಹುತಗಳಿಗೆ ಕಲ್ಲು ಗಣಿಗಾರಿಕೆಯಂತಹ ಪರಿಸರ ವಿರೋಧಿ ಚಟುವಟಿಕೆಗಳೇ ಕಾರಣ ಎಂದು ಆರೋಪಿಸಿದ ಅವರು, 'ಘಟ್ಟಗಳ ರಕ್ಷಣೆ ಹಿನ್ನೆಲೆಯಲ್ಲಿ ತಮ್ಮ ನೇತೃತ್ವದ ಸಮಿತಿ ನೀಡಿರುವ ವರದಿ ಅನುಷ್ಠಾನಗೊಳಿಸುವ ಸಮಯ ಮುಗಿದಿದೆ ಎಂಬ ಅಭಿಪ್ರಾಯಗಳನ್ನು ಅವರು ಇದೇ ಸಂದರ್ಭದಲ್ಲಿ ತಳ್ಳಿಹಾಕಿದರು.
'ಪಶ್ಚಿಮ ಘಟ್ಟಗಳಲ್ಲಿ ಈಗಲೂ ಪರಿಸ್ಥಿತಿ ಹದಗೆಡುತ್ತಿದೆ. ಪ್ರಸ್ತುತ ಇಂಥ ಹೇಳಿಕೆಗಳು ಸಂಪೂರ್ಣ ಅಸಂಬದ್ಧ ಎನ್ನಿಸುತ್ತದೆ. ಪರಿಸ್ಥಿತಿ ಹೀಗೆ ಮುಂದುವರಿದಿರುವಾಗ, ವರದಿ ಅನುಷ್ಠಾನಕ್ಕೆ ಯಾವುದೇ ಸಮಯದ ಪ್ರಶ್ನೆಯೇ ಬರುವುದಿಲ್ಲ' ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕೇರಳ ಭಾಗದಲ್ಲಿರುವ ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಇಂಥ ಅನಾಹುತಗಳು ಏಕೆ ಸಂಭವಿಸುತ್ತವೆ? ಎಂಬ ಪ್ರಶ್ನೆಗೆ, 'ಇದೊಂದು ತಪ್ಪು ತಿಳುವಳಿಕೆ. ಇಂಥ ಘಟನೆಗಳು ಗೋವಾ, ಮಹಾರಾಷ್ಟ್ರದ ಪಶ್ಚಿಮಘಟ್ಟಗಳಲ್ಲೂ ಪ್ರತಿ ವರ್ಷ ನಡೆಯುತ್ತಿರುತ್ತದೆ'ಎಂದರು.
ಕೇರಳದ 'ಪ್ಲಾಚಿಮಡ'ದಲ್ಲಿ ಸ್ಥಳೀಯ ಗ್ರಾಮ ಪಂಚಾಯ್ತಿಯವರು ಕೊಕೊ ಕೋಲಾ ಕಂಪನಿ ವಿರುದ್ಧ ಕೇರಳ ಹೈಕೋರ್ಟ್‌ನಲ್ಲಿ ನಡೆಸಿದ ಹೋರಾಟವನ್ನು ನೆನಪಿಸಿದ ಅವರು, ಈ ಪ್ರಕರಣದಲ್ಲಿ ಕೇರಳ ಹೈಕೋರ್ಟ್ ಗ್ರಾಮ ಪಂಚಾಯ್ತಿಗಿರುವ ಹಕ್ಕುಗಳು ಮತ್ತು ಜನರ ಆರೋಗ್ಯ ಮತ್ತು ಜೀವನೋಪಾಯವನ್ನು ರಕ್ಷಿಸುವಂತಹ ತೀರ್ಪು ನೀಡಿದ್ದನ್ನು ಉಲ್ಲೇಖಿಸಿದರು. 'ಈ ಹಿನ್ನೆಲೆಯಲ್ಲಿ ನಾಗರಿಕರು ತಮಗೆ ದೊರೆತಿರುವ ಸಂವಿಧಾನಾತ್ಮಕ ಹಕ್ಕುಗಳನ್ನು ಬಳಸಿಕೊಂಡು, ಪಶ್ಚಿಮ ಘಟ್ಟಗಳ ರಕ್ಷಣೆಗೆ ಒತ್ತಾಯಿಸಬೇಕು' ಎಂದು ಹೇಳಿದರು.
'ದೇಶದಲ್ಲಿನ ದುರಾಡಳಿತವನ್ನು ಸರಿಪಡಿಸಲು ನ್ಯಾಯಾಲಯಗಳನ್ನು ಅವಲಂಬಿಸಬಾರದು ಎಂದು ನಾನು ಭಾವಿಸುತ್ತೇನೆ. 'ಪಶ್ಚಿಮ ಘಟ್ಟಗಳ ಸಂರಕ್ಷಣೆಯಂತಹ ವಿಷಯಗಳು ಕೇವಲ ನ್ಯಾಯಾಲಯದ ಮೂಲಕ ಇತ್ಯರ್ಥಪಡಿಸುವಂಥದ್ದಲ್ಲ. ಜನರು ಸಂಘಟಿತರಾಗಿ, ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ಚಲಾಯಿಸಬೇಕಾಗಿದೆ' ಎಂದು ಹೇಳಿದರು.