ಕಾಸರಗೋಡು: ಕೋವಿಡ್ ಹಿನ್ನೆಲೆಯಲ್ಲಿ ಮುಚ್ಚುಗಡೆಗೊಂಡಿದ್ದ ಶಾಲೆ ದೀರ್ಘ ಕಾಲದ ನಂತರ ಪುನರಾರಂಭಿಸಲು ಸರ್ಕಾರ ತೀರ್ಮಾನಿಸಿದ್ದು, ಕೆಲವೊಂದು ಮಾನದಂಡಗಳನ್ನೂ ಜಾರಿಗೆ ತರಲು ಮುಂದಾಗಿದೆ. ನ. 1ರಂದು ಶಾಲೆಗಳು ಮತ್ತೆ ತೆರೆದು ಕಾರ್ಯಾಚರಿಸುವ ಆರಂಭದಲ್ಲಿ ಮಕ್ಕಳಿಗೆ ಒತ್ತಡ ದೂರ ಮಾಡುವ ತರಗತಿ ಆರಂಭಿಸಲಾಗುವುದು.ಮಕ್ಕಳಿಗೆ ಹ್ಯಾಪಿನೆಸ್ ಕರಿಕ್ಯುಲಂ ಕಲಿಸುವುದರ ಜತೆಗೆ ಪ್ರಾಥಮಿಕ ತರಗತಿಗಳಿಗಾಗಿ ಬ್ರಿಡ್ಜ್ ಸಿಲೆಬಸ್ ತಯಾರಿಸಲಾಗುವುದು. ಆರಂಭದ ತಿಂಗಳಲ್ಲಿ ಕಡ್ಡಾಯ ಹಾಜರಾತಿ, ಸಮವಸ್ತ್ರವನ್ನೂ ಕೈಬಿಡಲಾಗಿದೆ. ಜತೆಗೆ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಮಕ್ಕಳು ಶಾಲೆಗೆ ತೆರಳದಂತೆಯೂ ಸೂಚಿಸಲಾಗಿದೆ.
ಹೈಯರ್ ಸೆಕೆಂಡರಿ ತರಗತಿಗಳು ಎರಡು ದಿವಸಗಳಿಗೊಮ್ಮೆ, ಒಂದರಿಂದ ಏಳನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ವಾರದಲ್ಲಿ ಮೂರು ದಿನ ತರಗತಿ ನಡೆಯುವುದು. ತರಗತಿಯಲ್ಲಿ 20ರಿಂದ 30ಮಕ್ಕಳು ಮಾತ್ರ ಹಾಜರಿರುವಂತೆ ನೋಡಿಕೊಳ್ಳಬೇಕಾಗಿದೆ. ಶಾಲೆ ಆರಂಭಿಸುವ ಬಗ್ಗೆ ಆಯಾ ಜಿಲ್ಲಾಧಿಕಾರಿಗಳು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಶಾಲೆಗಳನ್ನು ಶುಚಿಗೊಳಿಸುವಂತೆಯೂ ಕ್ವಾಲಿಟಿ ಇಂಪ್ರೂಮೆಂಟ್ ಪ್ರೋಗ್ರಾಂ ಯೋಜನೆ ಸಭೆಯಲ್ಲಿ ನಿರ್ದೇಶಿಸಲಾಗಿದೆ.