HEALTH TIPS

ಗ್ರಾಹಕನ ಮೇಲೆ ಹಿಂದಿ ಹೇರಿದ ಜೊಮ್ಯಾಟೊ ಏಜೆಂಟ್‌: ಕಂಪನಿಯಿಂದ ಕ್ಷಮೆ ಯಾಚನೆ

          ಚೆನ್ನೈ: ಹಿಂದಿ ಗೊತ್ತಿಲ್ಲದ ಕಾರಣಕ್ಕೆ ಗ್ರಾಹಕರೊಬ್ಬರಿಗೆ ಹಣ ಹಿಂದಿರುಗಿಸಲು ನಿರಾಕರಿಸಿದ, ಅವರಿಗೆ ಹಿಂದಿ ಕಲಿಯುವಂತೆ ಸೂಚನೆ ನೀಡಿದ, ಸುಳ್ಳುಗಾರ ಎಂದು ಮೂದಲಿಸಿದ ತನ್ನ ಕಂಪನಿಯ ಸಿಬ್ಬಂದಿಯನ್ನು ಆನ್‌ಲೈನ್‌ ಆಹಾರ ವಿತರಣಾ ಸಂಸ್ಥೆ 'ಜೊಮ್ಯಾಟೊ' ಮಂಗಳವಾರ ಕೆಲಸದಿಂದ ವಜಾ ಮಾಡಿದೆ. ಘಟನೆ ಸಂಬಂಧ ಗ್ರಾಹಕನ ಕ್ಷಮೆಯನ್ನೂ ಕೋರಿದೆ.


          'ಜೊಮ್ಯಾಟೊ ಏಜೆಂಟ್‌ನೊಂದಿಗೆ ತಮಗಾದ ಕಹಿ ಅನುಭವವನ್ನು ವಿಕಾಸ್‌ (@Vikash67456607) ಎಂಬುವವರು ತಮ್ಮ ಟ್ವಿಟರ್‌ನಲ್ಲಿ ವಿವರಿಸಿದ್ದರು. ಈ ಟ್ವೀಟ್‌ ಮಂಗಳವಾರ ಸಾಮಾಜಿಕ ತಾಣದಲ್ಲಿ ಸಂಚಲನ ಸೃಷ್ಟಿ ಮಾಡಿತ್ತು. #RejectZomato ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗಲು ವಿಕಾಸ್‌ ಟ್ವೀಟ್‌ ಕಾರಣವಾಯಿತು. ಇದರಿಂದ ಎಚ್ಚೆತ್ತುಕೊಂಡ ಜೊಮ್ಯಾಟೊ, ಗ್ರಾಹಕ ವಿಕಾಸ್‌ ಕ್ಷಮೆಯಾಚಿಸಿದೆ. ಇದಿಷ್ಟೇ ಅಲ್ಲದೆ, ಕಂಪನಿಯು ತನ್ನ ಸ್ಪಷ್ಟನೆಯನ್ನು ತಮಿಳು ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಬಿಡುಗಡೆ ಮಾಡಿ, ಭಾಷಾ ವೈವಿಧ್ಯತೆಯನ್ನು ಗೌರವಿಸುವುದಾಗಿ ತಿಳಿಸಿದೆ.

                              ವಿಕಾಸ್‌ ಟ್ವೀಟ್‌ನಲ್ಲಿ ಏನಿತ್ತು?

           ಜೊಮ್ಯಾಟೊ ಮೂಲಕ ತಿನಿಸನ್ನು ಆರ್ಡರ್‌ ಮಾಡಿದ್ದಾಗಿಯೂ, ಅದು ಕಾಣೆಯಾಗಿರುವುದಾಗಿಯೂ ವಿಕಾಸ್‌ ದೂರಿದ್ದಾರೆ. 'ನನಗೆ ಹಿಂದಿ ಗೊತ್ತಿಲ್ಲದ ಕಾರಣಕ್ಕೆ ಆರ್ಡರ್‌ನ ಹಣವನ್ನು ಹಿಂದಿರುಗಿಸಲಾಗದು ಎಂದು ಜೊಮ್ಯಾಟೊ ಏಜೆಂಟ್‌ ಹೇಳಿದ್ದಾರೆ. ಜೊತೆಗೆ, ಭಾರತೀಯನಾಗಿರುವುದರಿಂದ ನನಗೆ ಹಿಂದಿ ತಿಳಿದಿರಬೇಕು ಎಂದು ಪಾಠ ಮಾಡಿದ್ದಾರೆ. ನನ್ನೊಂದಿಗೆ ಮಾತನಾಡಿದ ಗ್ರಾಹಕ ಸೇವಾ ಪ್ರತಿನಿಧಿಗೆ ತಮಿಳು ಗೊತ್ತಿಲ್ಲದ ಕಾರಣಕ್ಕೆ ನನ್ನನ್ನು ಸುಳ್ಳುಗಾರ ಎಂದು ಕರೆಯಲಾಗಿದೆ. ಒಬ್ಬ ಗ್ರಾಹಕರೊಂದಿಗೆ ಮಾತನಾಡುವ ರೀತಿ ಇದಲ್ಲ' ಎಂದು ಅವರು ಟ್ವೀಟ್‌ ಮಾಡಿ ಜೊಮ್ಯಾಟೊಗೆ ಟ್ಯಾಗ್ ಮಾಡಿದ್ದಾರೆ. ಇದರ ಜೊತೆಗೆ ತಾವು ಏಜೆಂಟ್‌ನೊಂದಿಗೆ ನಡೆಸಿದ ಚಾಟ್‌ನ (ಸಂದೇಶ ವಿನಿಮಯದ) ಸ್ಕ್ರೀನ್‌ ಶಾಟ್‌ ಅನ್ನೂ ಟ್ವೀಟ್‌ನಲ್ಲಿ ಲಗತ್ತಿಸಿದ್ದಾರೆ.

 ‌          ಇಷ್ಟೇ ಅಲ್ಲದೆ, ಹಿಂದಿಯು ಭಾರತದ ರಾಷ್ಟ್ರಭಾಷೆ ಎಂದು ಜೊಮ್ಯಾಟೊ ಏಜೆಂಟ್‌ ಗ್ರಾಹಕ ವಿಕಾಸ್‌ಗೆ ಹೇಳಿದ್ದಾಗಿಯೂ ಆರೋಪಿಸಲಾಗಿದೆ. ಇದೆಲ್ಲದರ ಹಿನ್ನೆಲೆಯಲ್ಲಿ ಜೊಮ್ಯಾಟೊ ಗ್ರಾಹಕನ ಕ್ಷಮೆ ಯಾಚಿಸಿ, ತಮಿಳು ಮತ್ತು ಇಂಗ್ಲಿಷ್‌ನಲ್ಲಿ ಸ್ಪಷ್ಟನೆ ಬಿಡುಗಡೆ ಮಾಡಿದೆ.

         'ದೇಶದ ವೈವಿಧ್ಯಮಯ ಸಂಸ್ಕೃತಿಯ ಬಗೆಗಿನ ನಿರ್ಲಕ್ಷ್ಯಕ್ಕಾಗಿ ನಾವು ಏಜೆಂಟ್‌ನನ್ನು ವಜಾಗೊಳಿಸಿದ್ದೇವೆ. ಕಂಪನಿಯ ಶಿಷ್ಟಾಚಾರಗಳಿಗೆ ಅನುಗುಣವಾಗಿ ವಜಾ ಪ್ರಕ್ರಿಯೆ ನಡೆದಿದೆ. ಏಜೆಂಟ್‌ನ ನಡವಳಿಕೆಯು ಸೂಕ್ಷ್ಮತೆಯ ತತ್ವಗಳಿಗೆ ವಿರುದ್ಧವಾಗಿದೆ. ಈ ವಿಚಾರವಾಗಿ ನಾವು ಕಾಲಕಾಲಕ್ಕೆ ಏಜೆಂಟರಿಗೆ ತರಬೇತಿಯನ್ನೂ ನೀಡುತ್ತಿದ್ದೇವೆ' ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಹೇಳಿಕೆಯ ಪ್ರತಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದೆ.

           'ವಜಾಗೊಳಿಸಿದ ನೌಕರನ ಹೇಳಿಕೆಗಳು ಕಂಪನಿಯ ನಿಲುವನ್ನು ಪ್ರತಿನಿಧಿಸುವುದಿಲ್ಲ. ಜೊಮ್ಯಾಟೊ ತನ್ನ ಮೊಬೈಲ್ ಆಪ್‌ನ ತಮಿಳು ಆವೃತ್ತಿಯನ್ನು ಅಭಿವೃದ್ಧಿಪಡಿಸುತ್ತಿದೆ' ಎಂದೂ ಜೊಮ್ಯಾಟೊ ಹೇಳಿದೆ.

              'ತಮಿಳಿನ ಪ್ರಸಿದ್ಧ ಸಂಗೀತಗಾರ ಅನಿರುದ್ಧ್ ರವಿಚಂದರ್ ಅವರನ್ನು ತನ್ನ ಸ್ಥಳೀಯ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿಕೊಳ್ಳುತ್ತಿರುವುದಾಗಿ ಜೊಮ್ಯಾಟೊ ತಿಳಿಸಿದೆ. ಕಂಪನಿಯು ಕೊಯಮತ್ತೂರಿನಲ್ಲಿ ಸ್ಥಳೀಯ ತಮಿಳು ಗ್ರಾಹಕ ಸೇವಾ ಕೇಂದ್ರವನ್ನು ತೆರೆಯುತ್ತಿರುವುದಾಗಿಯೂ ಹೇಳಿದೆ. "ಆಹಾರ ಮತ್ತು ಭಾಷೆ ಯಾವುದೇ ಸ್ಥಳೀಯ ಸಂಸ್ಕೃತಿಯ ಬಹುಮುಖ್ಯ ಅಂಶ ಎಂಬುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ನಾವು ಅದನ್ನು ಗಂಭೀರವಾಗಿ ಪರಿಗಣಿಸುತ್ತೇವೆ" ಎಂದು ಜೊಮ್ಯಾಟೊ ಸ್ಪಷ್ಟಪಡಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries