ರೂಪಾ: ವಾಸ್ತವ ನಿಯಂತ್ರಣ ರೇಖೆಯಲ್ಲಿ ಚೀನಾ ಸೇನಾ ಪಡೆಯ ಚಟುವಟಿಕೆ ಹೆಚ್ಚಾಗಿದ್ದು, ಅಲ್ಲಿ ಭಾರತೀಯ ಸೇನೆ ತೀವ್ರ ನಿಗಾವಹಿಸಿದೆ ಎಂದು ಪೂರ್ವ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ಮಂಗಳವಾರ ಹೇಳಿದ್ದಾರೆ.
"ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ನಡೆಸುವ ವಾರ್ಷಿಕ ತರಬೇತಿ ಸಮರಾಭ್ಯಾಸ, ಚಟುವಟಿಕೆಗಳ ಮಟ್ಟದಲ್ಲಿ ಸ್ವಲ್ಪ ಏರಿಕೆ ಕಂಡುಬಂದಿದೆ. ಆದರೆ ಅದು ಕೇವಲ ಆಳವಾದ ಪ್ರದೇಶಗಳಲ್ಲಿ ಮಾತ್ರ ನಡೆಯುತ್ತಿದೆ. ಪಿಎಲ್‌ಎಯ ಕೆಲವು ಮೀಸಲು ಪಡೆಗಳು ಉಳಿದುಕೊಂಡಿದ್ದು, ಅವರು ಅಲ್ಲಿ ಗಸ್ತು ತಿರುಗುತ್ತಿದ್ದಾರೆ. ಹಾಗಾಗಿ ನಾವು ಎಲ್ಎಸಿ ಮತ್ತು ಆಳದ ಪ್ರದೇಶಗಳಲ್ಲಿ ನಮ್ಮ ಕಣ್ಗಾವಲನ್ನು ಹೆಚ್ಚಿಸಿದ್ದೇವೆ "ಎಂದು ಲೆಫ್ಟಿನೆಂಟ್ ಜನರಲ್ ಪಾಂಡೆ ಹೇಳಿದ್ದಾರೆ.
ಪೂರ್ವ ಸೈನ್ಯದ ಕಮಾಂಡರ್ ಪ್ರಕಾರ, ಎಲ್ಎಸಿ ಬಳಿ ಎರಡೂ ಕಡೆಯವರು ಮೂಲಸೌಕರ್ಯಗಳನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ಇದು ಕೆಲವು ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಈಗಾಗಲೇ ನಿಯೋಜನೆಗೊಂಡಿರುವ ಗಡಿ ರಕ್ಷಣಾ ಪಡೆಗಳಲ್ಲಿ ಅಲ್ಪ ಹೆಚ್ಚಳ ಕಂಡುಬಂದಿದೆ. ನಾವು ಹಲವಾರು ಕ್ರಮಗಳನ್ನು ಕೈಗೊಂಡಿದ್ದೇವೆ. ವಾಸ್ತವ ನಿಯಂತ್ರಣ ರೇಖೆಯಲ್ಲಿ ಸೇನೆಯನ್ನು ಹೆಚ್ಚಿಸುವುದು ಮುಖ್ಯ ಗುರಿಯಾಗಿದೆ ಎಂದಿದ್ದಾರೆ.