ನವದೆಹಲಿ: ಕೇಂದ್ರ ಸರ್ಕಾರವು ಹಣಕಾಸು ವಲಯಕ್ಕೆ ಸಂಬಂಧಿಸಿದ ಎರಡು ಪ್ರಮುಖ ಮಸೂದೆಗಳನ್ನು ಚಳಿಗಾಲದ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. ಬಜೆಟ್‌ನಲ್ಲಿ ಘೋಷಿಸಿರುವಂತೆ, ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಖಾಸಗೀಕರಣಕ್ಕೆ ಅವಕಾಶ ಕಲ್ಪಿಸುವ ಮಸೂದೆ ಸಹ ಇದರಲ್ಲಿ ಸೇರಿದೆ.
ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದಿಂದ (ಪಿಎಫ್‌ಆರ್‌ಡಿಎ) ರಾಷ್ಟ್ರೀಯ ಪಿಂಚಣಿ ನಿಧಿಯನ್ನು (ಎನ್‌ಪಿಎಸ್) ಪ್ರತ್ಯೇಕಗೊಳಿಸುವ ಸಲುವಾಗಿ 2013ರ ಪಿಎಫ್‌ಆರ್‌ಡಿಎ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಯನ್ನು ಸಹ ಮಂಡಿಸುವ ಸಾಧ್ಯತೆ ಇದೆ.
ಕೇಂದ್ರ ಸರ್ಕಾರವು ಸಂಸತ್‌ನ ಚಳಿಗಾಲದ ಅಧಿಕವೇಶನದಲ್ಲಿ 1949ರ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಯನ್ನು ಮಂಡಿಸಲಿದೆ ಎಂದು ಮೂಲಗಳು ತಿಳಿಸಿವೆ. ಇದಲ್ಲದೆ, ಬ್ಯಾಂಕಿಂಗ್ ಕಂಪನಿಗಳ (ಸ್ವಾಧೀನ ಮತ್ತು ವರ್ಗಾವಣೆ) ಕಾಯ್ದೆ 1970 ಹಾಗೂ 1980ಕ್ಕೆ ತಿದ್ದುಪಡಿ ತರುವ ಅಗತ್ಯ ಇದೆ ಎಂದು ಮೂಲಗಳು ತಿಳಿಸಿವೆ.
ಸರ್ಕಾರಿ ಸ್ವಾಮ್ಯದ ಎರಡು ಬ್ಯಾಂಕ್‌ಗಳು ಮತ್ತು ಒಂದು ವಿಮಾ ಕಂಪನಿಯನ್ನು ಖಾಸಗೀಕರಣಗೊಳಿಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021-22ನೇ ಸಾಲಿನ ಬಜೆಟ್ ಭಾಷಣದಲ್ಲಿ ಘೋಷಿಸಿದ್ದರು.