ಮಂಜೇಶ್ವರ: ಗಡಿನಾಡು ಕಾಸರಗೋಡು ಜಿಲ್ಲೆಯ ನಿವಾಸಿಗಳಿಗೆ ತಲಪ್ಪಾಡಿ ಸಹಿತ ವಿವಿಧ ಗಡಿ ಪ್ರದೇಶಗಳ ಮೂಲಕ ಕರ್ನಾಟಕಕ್ಕೆ ತೆರಳಲು ಕೋವಿಡ್ ಆರ್‍ಟಿಪಿಸಿಆರ್ ಟೆಸ್ಟ್‍ನಿಂದ ವಿನಾಯಿತಿ ನೀಡಬೇಕೆಂದು ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಅಂಗಾರ ಅವರಿಗೆ ವಿಶ್ವ ಹಿಂದು ಪರಿಷತ್‍ನ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಸುಳ್ಯದ ಅವರ ನಿವಾಸದಲ್ಲಿ ಮನವಿ ಸಲ್ಲಿಸಲಾಯಿತು. ಇದೇ ವೇಳೆ ಒಂದು ವಾರದೊಳಗೆ ಸಮಸ್ಯೆಯನ್ನು ಪರಿಹರಿಸದಿದ್ದಲ್ಲಿ ಈಗಾಗಲೇ ಬೇಸತ್ತು ಹೋಗಿರುವ ವಿದ್ಯಾರ್ಥಿಗಳು, ಅವರ ಪೆÇೀಷಕರು, ಉದ್ಯೋಗಿಗಳು, ವ್ಯಾಪಾರಸ್ಥರು ಮುಂತಾದವರನ್ನು ಸೇರಿಸಿಕೊಂಡು ಬೃಹತ್ ಪ್ರತಿಭಟನೆಯೊಂದನ್ನು ಹಮ್ಮಿಕೊಳ್ಳುವುದಾಗಿ ವಿಶ್ವ ಹಿಂದು ಪರಿಷತ್ ಮನವಿಯಲ್ಲಿ ತಿಳಿಸಿದೆ.
ಕಾಸರಗೋಡು ಜಿಲ್ಲೆಯ ನಿವಾಸಿಗಳು ಅಪಾರ ಸಂಖ್ಯೆಯಲ್ಲಿ ಉದ್ಯೋಗ, ಶಿಕ್ಷಣ, ಆರೋಗ್ಯ, ವ್ಯಾಪಾರ ಸೇರಿದಂತೆ ವಿವಿಧ ವಿಷಯಗಳಿಗೆ ಮಂಗಳೂರನ್ನೇ ಹೆಚ್ಚು ಅವಲಂಬಿಸಿ ಜೀವನ ನಡೆಸುತ್ತಿದ್ದಾರೆ. ಆದರೆ ಗಡಿ ಪ್ರದೇಶದಲ್ಲಿ ಕೊರೋನಾ ನೆಗೆಟಿವ್ ಸರ್ಟಿಫಿಕೇಟ್‍ನ್ನು ಈಗಲೂ ಕಡ್ಡಾಯಗೊಳಿಸಿರುವುದರಿಂದ ಮಂಜೇಶ್ವರ ಮತ್ತು ಕಾಸರಗೋಡು ತಾಲೂಕುಗಳ ಜನರಿಗೆ ಬಹಳಷ್ಟು ಸಮಸ್ಯೆಯಾಗಿದೆ. ವಿದ್ಯಾರ್ಥಿಗಳಂತೂ ಭಾರೀ ತೊಂದರೆ ಅನುಭವಿಸುತ್ತಿದ್ದಾರೆ. ಅಲ್ಲದೆ ಮಂಗಳೂರು ಸಹಿತ ದಕ್ಷಿಣ ಕನ್ನಡ ಜಿಲ್ಲಾ ಅವಲಂಬಿತ ಕಾಸರಗೋಡು ಜಿಲ್ಲೆಯವರು ಸಂಕಷ್ಟಮಯ ಬದುಕು ಸಾಗಿಸುವಂತಾಗಿದೆ. ಆದ್ದರಿಂದ ತಲಪ್ಪಾಡಿ ಸೇರಿದಂತೆ ಅಂತಾರಾಜ್ಯ ಗಡಿಗಳಲ್ಲಿ ಮುಕ್ತ ಸಂಚಾರಕ್ಕೆ ಅನುವು ಮಾಡಿ ಕೊಡಬೇಕೆಂದು ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿದೆ.
ವಿಹಿಂಪ ಜಿಲ್ಲಾಧ್ಯಕ್ಷ ಜಯದೇವ ಖಂಡಿಗೆ, ಪ್ರಮುಖರಾದ ಉಳುವಾನ ಶಂಕರ ಭಟ್, ಮೀರಾ ಆಳ್ವ ಬೇಕೂರು, ಎ.ಟಿ.ನಾಯ್ಕ್ ಕಾಸರಗೋಡು, ಸಂಕಪ್ಪ ಭಂಡಾರಿ ಬಳ್ಳಂಬೆಟ್ಟು , ಎಂ.ಪಿ.ಬಾಲಕೃಷ್ಣ ಶೆಟ್ಟಿ , ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಸುರೇಶ್ ಶೆಟ್ಟಿ ಪರಂಕಿಲ, ಕಮಲಾ ಟೀಚರ್ ಉಳುವಾನ, ಸೌಮ್ಯ ಪ್ರಕಾಶ್ ಭಟ್ ಮೊದಲಾದವರು ಮನವಿ ಸಲ್ಲಿಸುವ ವೇಳೆ ಉಪಸ್ಥಿತರಿದ್ದರು.