ಮಂಗಳೂರು; ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ಹಲವಾರು ಕ್ಷೇತ್ರಗಳಿಗೆ ಷರತ್ತುಬದ್ಧ ಸಡಿಲಿಕೆ ಸಿಗುತ್ತಿದೆ. ಜೊತೆಗೆ ರಾಜ್ಯ ಸರ್ಕಾರ ಹೊರಡಿಸಿದ ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆಯಾ ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತಿವೆ. ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲಾಡಳಿತವು ಮಾಲ್‌ಗಳು, ಚಿತ್ರಮಂದಿರ ಪ್ರವೇಶಿಸಲು ಕೋವಿಡ್ -19 ಲಸಿಕೆ ಪಡೆದಿರುವ ಪ್ರಮಾಣ ಪತ್ರಗಳನ್ನು ಕಡ್ಡಾಯಗೊಳಿಸಿದೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕೆ. ವಿ. ರಾಜೇಂದ್ರ ಈ ಕುರಿತು ಮಾತನಾಡಿದ್ದಾರೆ, "ಸಾಂಕ್ರಾಮಿಕ ಪರಿಸ್ಥಿತಿ ಹದಗೆಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಭಾನುವಾರದಿಂದ ಹೆಚ್ಚುವರಿ ಕಣ್ಗಾವಲು ಕ್ರಮ ಕೈಗೊಳ್ಳಲಾಗುವುದು. ಮಲ್ಟಿಪ್ಲೆಕ್ಸ್‌ಗಳು, ಚಿತ್ರಮಂದಿರಗಳು ಮತ್ತು ಥಿಯೇಟರ್‌ಗಳು ಶೇ 100 ಪ್ರತಿಶತ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲು ಅವಕಾಶವಿದ್ದರೂ, ಲಸಿಕೆಯ ಎರಡು ಡೋಸ್‌ಗಳನ್ನು ಪಡೆದವರನ್ನು ಮಾತ್ರ ಒಳಗೆ ಬಿಡಲಾಗುತ್ತದೆ. ಎರಡು ಡೋಸ್‌ಗಳನ್ನು ಪಡೆದಿರುವ ಪ್ರಮಾಣ ಪತ್ರವನ್ನು ಒದಗಿಸಿದವರಿಗೆ ಮಾತ್ರ ಪ್ರವೇಶಕ್ಕೆ ಅನುಮತಿಸಲಾಗುವುದು" ಎಂದು ಹೇಳಿದರು.
ಮಂಗಳೂರು ಮಹಾನಗರ ಪಾಲಿಕೆ ಲಸಿಕೆ ಪಡೆಯದೇ ಇರುವವರನ್ನು ಗುರುತಿಸಲು ವಿಶೇಷ ತಂಡಗಳನ್ನು ರಚನೆ ಮಾಡಿದೆ. ನಗರದಲ್ಲಿ ವಿಶೇಷ ಲಸಿಕಾ ಅಭಿಯಾನಗಳನ್ನು ನಡೆಸಲಾಗುತ್ತಿದೆ. ಈ ವೇಳೆಯೂ ಲಸಿಕೆ ಹಾಕಿಸಿಕೊಳ್ಳದ ಜನರ ಪಟ್ಟಿಯನ್ನು ಮಾಡಲಾಗುವುದು. ಇದರೊಂದಿಗೆ ನಗರದಲ್ಲಿ ಅರ್ಹ ಜನಸಂಖ್ಯೆಗೆ ಆದಷ್ಟು ಬೇಗ ಲಸಿಕೆ ಹಾಕಲು ಸಹಾಯಕವಾಗುತ್ತದೆ ಎಂದು ಅಧಿಕಾರಿಗಳು ಹೇಳಿದರು.
ಮಾಲ್‌ಗಳ ಪ್ರವೇಶಕ್ಕಾಗಿ ಲಸಿಕೆ ಪಡೆದ ಪ್ರಮಾಣ ಪತ್ರಗಳನ್ನು ಕಡ್ಡಾಯಗೊಳಿಸಲಾಗಿದೆ. ಲಸಿಕೆ ಪಡೆಯುವುದು ಸ್ವಯಂ ಮತ್ತು ಇತರರ ಆರೋಗ್ಯದ ದೃಷ್ಟಿಯಿಂದಲೂ ಸಹಾಯಕವಾಗಿದೆ. ಎಲ್ಲರೂ ಲಸಿಕೆ ಪಡೆಯುವುದರಿಂದ ಸೋಂಕು ಹರಡುವಿಕೆ ಅಥವಾ ಹರಡುವ ಭಯವನ್ನು ನಿವಾರಿಸಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದಲ್ಲಿ ಕೊರೊನಾ ಸ್ಥಿತಿಗತಿ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನೀಡಲಾದ ಅಂಕಿ ಅಂಶಗಳ ಪ್ರಕಾರ, ಅಕ್ಟೋಬರ್ 16 ರ ಹೊತ್ತಿಗೆ, ದಕ್ಷಿಣ ಕನ್ನಡದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 340 ಆಗಿದೆ. ಇಲ್ಲಿಯವರೆಗೆ, ಕರಾವಳಿ ಜಿಲ್ಲೆಯಲ್ಲಿ 1.15 ಲಕ್ಷಕ್ಕೂ ಹೆಚ್ಚು ಜನರು ಸೋಂಕಿಗೆ ತುತ್ತಾಗಿದ್ದಾರೆ ಮತ್ತು ಅವರಲ್ಲಿ 1,668 ಜನರು ಸಾವನ್ನಪ್ಪಿದ್ದಾರೆ. ರಾಜ್ಯದ ಕೋವಿಡ್ -19 ವಾರ್ ರೂಂ ಮಾಹಿತಿಯಂತೆ ಕಳೆದ ವಾರ ಜಿಲ್ಲೆಯಲ್ಲಿ ಸರಾಸರಿ ಪರೀಕ್ಷಾ ಧನಾತ್ಮಕ ದರ (ಟಿಪಿಆರ್) 0.44 ಆಗಿದ್ದು, ಇದು ರಾಜ್ಯದ ಸರಾಸರಿ ಶೇಕಡಾ 0.38 ಕ್ಕಿಂತ ಸ್ವಲ್ಪ ಹೆಚ್ಚಾಗಿದೆ.
ಕೊರೊನಾ ನಿರ್ಬಂಧಗಳ ಸಡಿಲಿಕೆ
ಈ ಮಧ್ಯೆ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ಕೋವಿಡ್ -19 ನಿರ್ಬಂಧಗಳಿಗೆ ಹೆಚ್ಚಿನ ಸಡಿಲಿಕೆಗಳನ್ನು ಘೋಷಿಸುವ ಸುಳಿವು ನೀಡಿದ್ದಾರೆ. "ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಟಿಪಿಆರ್ ಶೇ 1 ಕ್ಕಿಂತ ಕಡಿಮೆ ಇದೆ. ಈ ಸಮಯದಲ್ಲಿ ಜಾರಿಯಲ್ಲಿರುವ ನಿರ್ಬಂಧಗಳಲ್ಲಿ ಯಾವ ಸಡಿಲಿಕೆಗಳನ್ನು ಘೋಷಿಸಬಹುದು ಎಂಬುದನ್ನು ನಿರ್ಧರಿಸಲು ನಾವು ಕೋವಿಡ್ -19 ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಚರ್ಚಿಸುತ್ತೇವೆ. ಪ್ರಾಥಮಿಕ ಶಾಲೆಗಳನ್ನು ಪುನಃ ತೆರೆಯುವ (1 ರಿಂದ 5 ನೇ ತರಗತಿ) ವಿಷಯದ ಬಗ್ಗೆಯೂ ಚರ್ಚಿಸಲಾಗುವುದು" ಎಂದು ಅವರು ಹೇಳಿದರು.
ಗಡಿಯಲ್ಲಿಯೂ ನಿಯಮ ಸಡಿಲಿಕೆ?
"ಇನ್ನೂ ದಸರಾ ಹಬ್ಬದ ಬಳಿಕ ಕೇರಳ ಹಾಗೂ ಮಹಾರಾಷ್ಟ್ರದ ಗಡಿಯಲ್ಲಿ ಹೇರಿರುವ ಕೋವಿಡ್ ನಿಯಮವನ್ನು ಸಡಿಲಿಕೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗುವುದು. ಈ ಬಗ್ಗೆ ರಾಜ್ಯದ ಕೋವಿಡ್ ತಜ್ಞರ ಸಮಿತಿಯೊಂದಿಗೆ ಚರ್ಚೆ ನಡೆಸಿ ನಿರ್ಧರಿಸಲಾಗುವುದು. ಗಡಿ ರಾಜ್ಯಗಳಲ್ಲಿ ಕೊರೊನಾ ಕೇಸುಗಳ ಪ್ರಮಾಣ ಹೇಗಿದೆ? ಎಂಬ ಬಗ್ಗೆ ಗಮನ ಹರಿಸಿದ್ದೇವೆ. ಅದನ್ನು ಪರಿಗಣಿಸಿ ಸದ್ಯದಲ್ಲೇ ಕೋವಿಡ್ ನಿಯಮಗಳ ಸಡಿಲಿಕೆಗೆ ತೀರ್ಮಾನ ತೆಗೆದುಕೊಳ್ಳಲಾಗುವುದು" ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.
ದೇಶದಲ್ಲೂ ಗಣನೀಯ ಇಳಿಕೆ
ಭಾರತ ದೇಶದಲ್ಲೂ ಕೊರೊನಾ ಸೋಕಿತರ ಸಂಖ್ಯೆ ಗಣನೀಯ ಇಳಿಕೆಯಾಗುತ್ತಿದ್ದು ಇದುವರೆಗೂ ರಾಜ್ಯದಲ್ಲಿ ಒಟ್ಟು 3,40,67,719 ಪ್ರಕರಣಗಳು ದಾಖಲಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,95,846 ಆಗಿದೆ. ಭಾರತದಲ್ಲಿ 14,146 ಹೊಸ ಕೋವಿಡ್ ಪ್ರಕರಣಗಳು 24 ಗಂಟೆಯಲ್ಲಿ ದಾಖಲಾಗಿವೆ. 19,788 ಜನರು ಗುಣಮುಖಗೊಂಡಿದ್ದು, 144 ಜನರು ಸಾವನ್ನಪ್ಪಿದ್ದಾರೆ.