ತಿರುವನಂತಪುರಂ: ಕುಟ್ಟನಾಡಿನಲ್ಲಿ ಡಚ್ ಮಾದರಿಯಲ್ಲಿ ಸರ್ಕಾರ ಮನೆಗಳನ್ನು ನಿರ್ಮಿಸಿದೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿದ್ದು ಸುಳ್ಳು. ಕೇರಳದಲ್ಲಿ ಪ್ರವಾಹ ಮತ್ತು ಭೂಕುಸಿತದ ನಂತರ, ಮುಖ್ಯಮಂತ್ರಿಯವರ 2018 ರ ಯುರೋಪಿಯನ್ ಭೇಟಿಯನ್ನು ಮತ್ತೊಮ್ಮೆ ಚರ್ಚಿಸಲಾಗುತ್ತಿದೆ.
ಆ ಸಮಯದಲ್ಲಿ ತನ್ನ ಕುಟುಂಬದೊಂದಿಗೆ ನೆದರ್‌ಲ್ಯಾಂಡ್‌ಗೆ ತೆರಳಿದ್ದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಡಚ್ ಮಾದರಿಯಲ್ಲಿ ಕೇರಳದ ಪ್ರವಾಹವನ್ನು ನಿಯಂತ್ರಿಸಲು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದ್ದರು. ಆದರೆ ಮೂರು ವರ್ಷಗಳ ನಂತರವೂ ಪ್ರಾಕೃತಿಕ ವಿಕೋಪವನ್ನು ಎದುರಿಸಲು ಸ್ಪಷ್ಟ ಕ್ರಮ ಕೈಗೊಳ್ಳಲು ಸಾಧ್ಯವಾಗದೆ ಸರ್ಕಾರ ಇನ್ನೂ ಕತ್ತಲೆಯಲ್ಲಿದೆ. 2018 ರ ಪ್ರವಾಹ ಸಂತ್ರಸ್ತರಿಗೆ ಸಂಪೂರ್ಣವಾದ ಪರಿಹಾರ ನೀಡಲು ಈವರೆಗೂ ಸಾಧ್ಯವಾಗಿಲ್ಲ.
ಇದೀಗ ಮತ್ತೊಮ್ಮೆ ಸಾಮಾಜಿಕ ಮಾಧ್ಯಮದಲ್ಲಿ ಡಚ್ ಮಾದರಿಯ ಮನೆಗಳ ವಿಷಯವಾಗಿ ಅನೇಕರು ಟೀಕೆಗಳನ್ನು ವ್ಯಕ್ತಪಡಿಸಿ ಸರ್ಕಾರದ ನ್ಯೂನತೆಗಳನ್ನು ಬಯಲಿಗೆಳೆದಿದ್ದಾರೆ. ದುರಂತ ತಡೆಗಟ್ಟಲು, ಸರ್ಕಾರವು ಕುಟ್ಟನಾಡಿನಲ್ಲಿ ಪ್ರವಾಹದ ನಿರಾಶ್ರಿತರಿಗೆ ನಿರ್ಮಿಸಿದ ಡಚ್ ಮಾದರಿಯ ಮನೆಗಳ ಬಗ್ಗೆ ಪ್ರಚಾರ ಮಾಡುತ್ತಿದೆ. ಇದರ ಹಿಂದೆ ಎಡರಂಗದ ಸೈಬರ್ ಕಾರ್ಯಕರ್ತರು ಇದ್ದಾರೆ.
ಮನೆಗಳನ್ನು ಅಮೆರಿಕದ ಮಲಯಾಳಿ ಸಂಘಗಳ ಒಕ್ಕೂಟ (FOMA)ಎಂಬ ಒಂದು ವಲಸಿಗ ಸಂಸ್ಥೆ ನಿರ್ಮಿಸಿದೆ. 2018 ರ ಪ್ರವಾಹದ ನಂತರ ಮನೆಗಳನ್ನು ನಿರ್ಮಿಸಲಾಯಿತು ಮತ್ತು ಹಸ್ತಾಂತರಿಸಲಾಯಿತು. ಇದನ್ನು ಆ ಸಮಯದಲ್ಲಿ ಮಾಧ್ಯಮಗಳು ವರದಿ ಮಾಡಿದ್ದವು. ಈ ಮನೆಗಳನ್ನು ಕುಟ್ಟನಾಡಿನ ಕಡಪ್ರ ಕಾಲೋನಿಯಲ್ಲಿ ನಿರ್ಮಿಸಲಾಗಿದೆ. ಕಾಂಕ್ರೀಟ್ ಕಂಬಗಳ ಮೇಲೆ ನಿರ್ಮಿಸಲಾದ ಮನೆಗಳು ಪ್ರವಾಹದ ಯಾವುದೇ ಹಾನಿಗೆ ಜಗ್ಗದೆ ಸುಸ್ಥಿತಿಯಲ್ಲಿದೆ. ಈ ಮನೆಗಳನ್ನು ತೋರಿಸಿ ಎಡರಂಗ ಬೇಳೆ ಬೇಯಿಸಲೆತ್ನಿಸುವುದು ಹೇಯಕರವೆಂದು ಸಾಮಾಜಿಕ ಮಾಧ್ಯಮ ಗೇಲಿಮಾಡಿದೆ.