ನವದೆಹಲಿ: ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರ ಭೇಟಿಯ ವಿರುದ್ಧ ನಡೆದ ರೈತರ ಪ್ರತಿಭಟನೆ ಸಂದರ್ಭದಲ್ಲಿನ ಹಿಂಸಾಚಾರದಲ್ಲಿ ಎಂಟು ಮಂದಿ ಮೃತಪಟ್ಟಿರುವ ಲಖಿಂಪುರ–ಖೇರಿಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಭೇಟಿ ನೀಡುವ ಸಂದರ್ಭದಲ್ಲಿ ಹರಗಾಂವ್ ನಲ್ಲಿ ಅವರನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಶ್ರೀನಿವಾಸ್ ಬಿವಿ ಅವರು ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಬಿಜೆಪಿಯಿಂದ ಏನನ್ನು ನಿರೀಕ್ಷಿಸಲಾಗುತ್ತಿತ್ತೋ, ಅದು ಕೊನೆಗೂ ಆಯಿತು. 'ಮಹಾತ್ಮಗಾಂಧಿ'ಯವರ ಪ್ರಜಾಪ್ರಭುತ್ವ ರಾಷ್ಟ್ರವಾದಲ್ಲಿ ಅನ್ನದಾತನನ್ನು ಭೇಟಿ ಮಾಡಲು ಸಾಕಷ್ಟು ಹೋರಾಟ ಮಾಡಿದ ನಮ್ಮ ನಾಯಕಿ ಪ್ರಿಯಂಕಗಾಂಧಿ ಜೀಯವರನ್ನು 'ಗೋಡ್ಸೆ'ಯ ಆರಾಧಕರು ಹರ್ಗಾಂವ್ ನಲ್ಲಿ ಬಂಧನಕ್ಕೊಳಪಡಿಸಿದ್ದಾರೆ. ಇದು ಹೋರಾಟದ ಆರಂಭವಷ್ಟೇ !! ಕಿಸಾನ್ ಏಕತಾ ಜಿಂದಾಬಾದ್ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರ ಭೇಟಿಯ ವಿರುದ್ಧ ಲಖಿಂಪುರದಲ್ಲಿ ಹಿಂಸಾಚಾರ ಸಂಭವಿಸಿದ್ದು, ಘಟನೆಯಲ್ಲಿ ನಾಲ್ವರು ರೈತರು ಸೇರಿ 8 ಮಂದಿ ಸಾವನ್ನಪ್ಪಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಮೃತರ ಕುಟುಂಬಸ್ಥರನ್ನು ಭೇಟಿ ಮಾಡುವ ಸಲುವಾಗಿ ಪ್ರಿಯಾಂಕಾ ಮತ್ತು ಪಕ್ಷದ ನಾಯಕ ದೀಪಿಂದರ್ ಸಿಂಗ್ ಹೂಡಾ ಭಾನುವಾರ ರಾತ್ರಿ ಲಖನೌಗೆ ತೆರಳಿದ್ದರು.
ಪ್ರಿಯಾಂಕಾ ಜಿ ಅವರು ರೈತರ ಪ್ರತಿಭಟನೆ ನಡೆದ ವೇಳೆ ಹಿಂಸಾಚಾರ ಭುಗಿಲೆದ್ದ ಲಖಿಂಪುರ-ಖೇರಿಗೆ ಹೊರಟಿದ್ದಾರೆ' ಎಂದು ಕಾಂಗ್ರೆಸ್ ವಕ್ತಾರ ಅಶೋಕ್ ಸಿಂಗ್ ಹೇಳಿದ್ದರು.
ಲಖಿಪುರಂಗೆ ಭೇಟಿ ನೀಡುವ ಸಂದರ್ಭದಲ್ಲಿ ವಿಡಿಯೋವೊಂದರಲ್ಲಿ ಮಾತನಾಡಿದ್ದ ಪ್ರಿಯಾಂಕಾ ಗಾಂಧಿಯವರು, 'ಸರ್ಕಾರ ತನ್ನ ವಿರುದ್ಧ ಬಲವನ್ನು ಬಳಸಿದರೆ, ಅವರು ನೈತಿಕತೆಯನ್ನು ಕಳೆದುಕೊಂಡಿದ್ದಾರೆ ಎಂಬುದನ್ನು ಅದು ತೋರಿಸುತ್ತದೆ. ನಾನು ಯಾವುದೇ ಅಪರಾಧ ಮಾಡಲು ನನ್ನ ಮನೆಯಿಂದ ಹೊರಗೆ ಬಂದಿಲ್ಲ. ನೊಂದ ಕುಟುಂಬಗಳನ್ನು ಭೇಟಿ ಮಾಡಲು ಮತ್ತು ಅವರ ಕಣ್ಣೀರು ಒರೆಸಲು ಮಾತ್ರ ಹೋಗುತ್ತಿದ್ದೇನೆ' ಎಂದು ಅವರು ಹೇಳಿದರು.
'ನೀವು ನನ್ನನ್ನು ಈ ವಾಹನದಲ್ಲಿ ತಡೆದು ನಿಲ್ಲಿಸುತ್ತಿದ್ದೀರಿ. ನೀವೇಕೆ ಅದನ್ನು ನಿಲ್ಲಿಸುತ್ತಿದ್ದೀರಿ? ನಾನು ಸಿಒಗೆ ಕರೆ ಮಾಡಿದರೆ ಅವರು ಅಡಗಿಕೊಳ್ಳುತ್ತಾರೆ. ಅವರು ಮಾಡುತ್ತಿರುವುದು ಸರಿ ಎನ್ನುವುದಾದರೆ ಅವರೇಕೆ ಅಡಗಿಕೊಳ್ಳುತ್ತಾರೆ. ಇಂದಿನ ಘಟನೆಯು ಸರ್ಕಾರವು ರೈತರನ್ನು ಹತ್ತಿಕ್ಕುವ ರಾಜಕಾರಣವನ್ನು ಮಾಡುತ್ತಿದೆ ಎಂಬುದನ್ನು ಸಾಬೀತುಪಡಿಸುತ್ತದೆ. ಇದು ರೈತರ ದೇಶವಾಗಿದೆ ಮತ್ತು ಇದು ಬಿಜೆಪಿಯ ಅಧಿಕಾರ ಕ್ಷೇತ್ರವಲ್ಲ. ಈ ಭೂಮಿಗೆ ರೈತರು ನೀರುಣಿಸುತ್ತಿದ್ದಾರೆ ಎಂದು ತಿಳಿಸಿದರು.