ಪೆರ್ಲ: ಕೋರೋನ ಕಾಲಘಟ್ಟವಾಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ರಜವಾಗಿದ್ದರೂ,ಕರಿಕ್ಕುಲಂ ಯೋಜನೆಗನುಗುಣವಾಗಿ ಪೆರ್ಲ ಶಾಲಾ ಶಿಕ್ಷಕರ ತಂಡ ಮಕ್ಕಳ ಪಠ್ಯೇತರ ಚಟುವಟಿಕೆಗಾಗಿ ಆನ್ ಲೈನ್ ಮೂಲಕ ನಡೆಸಿದ "ವೀಕೆಂಡ್ ಕ್ವಿಜ್" ಎಂಬ ವಿಶೇಷ ಕಾರ್ಯಕ್ರಮ ಗಮನಾರ್ಹವಾಗಿದೆ.
ಇಲ್ಲಿನ ಎಸ್ ಎನ್ ಎ ಎಲ್ ಪಿ ಶಾಲಾ ಶಿಕ್ಷಕ,ಖ್ಯಾತ ಮಕ್ಕಳ ರಂಗ ನಿರ್ದೇಶಕ ಉದಯ ಸಾರಂಗ್ ಸಂಯೋಜಿಸಿದ ಈ ಅಭೂತಪೂರ್ವ ಕಾರ್ಯಕ್ರಮಕ್ಕೆ ಶಾಲಾ ರಕ್ಷಕರಿಂದ ಉತ್ತಮ ಶ್ಲಾಘನೆ ಮೂಡಿ ಬಂದಿದೆ.
2018ರಲ್ಲಿ ಆರಂಭಿಸಿದ ಈ ಕಾರ್ಯಕ್ರಮ ಪ್ರಸ್ತುತ 4ನೇ ವರ್ಷವನ್ನು ಪೂರೈಸುತ್ತಿದೆ. ಪ್ರಸ್ತುತ 199 ಮಕ್ಕಳ ಸಂಖ್ಯೆಯನ್ನು ಹೊಂದಿರುವ ಶಾಲೆಯ ಸರಾಸರಿ 170 ಮಂದಿ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.
ಎಳವೆಯಲ್ಲಿಯೇ ಮಕ್ಕಳಿಗೆ ಸಾಮಾನ್ಯ ಜ್ಞಾನದ ಜತೆಗೆ ಪುಸ್ತಕ, ನ್ಯೂಸ್ ಪೇಪರ್ ಟಿವಿ ನೋಡುವ ಆಸಕ್ತಿ ಹಾಗೂ ಹೊಸತನ್ನು ತಿಳಿಯುವ ಹವ್ಯಾಸ ಮೂಡಿಸುವಲ್ಲಿ ವೀಕೆಂಡ್ ಕ್ವಿಜ್ ಸಫಲವಾಗಿದ್ದು ಮಾತ್ರವಲ್ಲ ಇದರಿಂದಾಗಿ ಮುಂದೆ ಐಎಎಸ್.ಐಪಿಎಸ್ ಇನ್ನಿತರ ಸ್ಮರ್ಧಾತ್ಮಕ ಪರೀಕ್ಷೆ ಎದುರಿಸಬಲ್ಲಂತಹ ಧೈರ್ಯ ತುಂಬುವುದರೊಂದಿಗೆ ಭವಿಷ್ಯದ ಸಾಧಕರಾಗುತ್ತಾರೆ ಎಂದು ಕ್ವಿಜ್ ಸಂಯೋಜಕರಾದ ಉದಯ ಸಾರಂಗ್ ತಿಳಿಸಿದರು.
ಸ್ಪರ್ಧಾ ರೀತಿ ರಿವಾಜು: ದಿನವೊಂದಕ್ಕೆ ಗೂಗಲ್ ಮೀಟ್ ಮೂಲಕ ಐದು ಪ್ರಶ್ನೆಗಳನ್ನು ಕೇಳಲಾಗುತ್ತದೆ.ವಾರಂತ್ಯದಲ್ಲಿ 25 ಪ್ರಶ್ನೆಗಳ ಸ್ಪರ್ಧೆ ಹಾಗೂ ಪುಸ್ತಕ ಬಹುಮಾನ ನೀಡಲಾಗುತ್ತದೆ. ಹೀಗೆ ನಾಲ್ಕು ವಾರ ಪೂರ್ತಿಗೊಂಡಾಗ "ಮೇಘ ಕ್ವಿಜ್" ಸ್ಪರ್ಧೆ ನಡೆಸಿ ವಿಜೇತರಿಗೆ ವಿಶೇಷ ಬಹುಮಾನ ನೀಡಲಾಗಿತ್ತು.ಕೊನೆಗೆ ಸಾವಿರ ಪ್ರಶ್ನೆಗಳ "ಗ್ರಾಂಡ್ ಫಿನಾಲೆ" ಯನ್ನು ಮುಂದೆ ಆಯೋಜಿಸಲಾಗುತ್ತದೆ. ಒಂದು ಶೈಕ್ಷಣಿಕ ವರ್ಷದ ಕೊನೆಗೆ ಸುಮಾರು ಎರಡುವರೆ ಸಾವಿರದಷ್ಟು ರಸಪ್ರಶ್ನೆಗಳ ಮೂಲಕ ಮಕ್ಕಳು ಜ್ಞಾನಿಗಳಾಗಿ ಬೆಳೆಯುತ್ತಾರೆ.ಇದೀಗ ಮೇಘ ಕ್ವಿಜ್ ನ ಅಂತಿಮ ಸುತ್ತಿನಲ್ಲಿ ವಿಜೇತರಾದವರಿಗೆ ಶಿಕ್ಷಕ-ರಕ್ಷಕರ ಉಪಸ್ಥಿತಿಯಲ್ಲಿ ಇಂದು ಬುಧವಾರ ಬೆಳಿಗ್ಗೆ ಬಹುಮಾನ ವಿತರಿಸಲಾಯಿತು.
ಶಾಲಾ ಸಭಾಂಗಣದಲ್ಲಿ ನಡೆದ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಪ್ರಥಮ ಆದಿತ್ಯ ಅಮೆಕ್ಕಳ (2ನೇ ತರಗತಿ), ದ್ವಿತೀಯ ಭವಿಷ್ ಅರೆಕ್ಕಾಡಿ ಕಾಟುಕುಕ್ಕೆ(4ನೇ ತರಗತಿ),ತೃತೀಯ ವೈಷ್ಣವಿ ಸರ್ಪಮಲೆ(4ನೇ ತರಗತಿ) ಬಹುಮಾನ ಪಡೆದುಕೊಂಡರು.
ಶಾಲಾ ಮುಖ್ಯೋಪಾಧ್ಯಾಯ ಮಹಾಲಿಂಗೇಶ್ವರ ಎನ್ ಪ್ರಮಾಣ ಪತ್ರ ಹಾಗೂ ಸುಶೀಲ ಟೀಚರ್ ನಗದು ಬಹುಮಾನ ವಿತರಿಸಿದರು.ಕೋಟೆ ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು. ಶಿಕ್ಷಕ ಶ್ಯಾಮ್ ರಂಜಿತ್ ಸ್ವಾಗತಿಸಿ ಸಂಧ್ಯಾ ಟೀಚರ್ ವಂದಿಸಿದರು.