ನವದೆಹಲಿ: ಉತ್ತರಾಖಂಡದ ಪಶ್ಚಿಮ ಕುಮಾನ್ ಪ್ರದೇಶದ ಮೌಂಟ್ ತ್ರಿಶೂಲ್‌ನಲ್ಲಿ ಹಿಮಪಾತ ಸಂಭವಿಸಿದ್ದು, ನೌಕಾಪಡೆಯ ಪರ್ವತಾರೋಹಿ ಕಾರ್ಯಾಚರಣೆ ತಂಡದ ಐವರು ಸಿಬ್ಬಂದಿ ಶುಕ್ರವಾರ ನಾಪತ್ತೆಯಾಗಿದ್ದಾರೆ.
ನಾಪತ್ತೆಯಾದ ಸಿಬ್ಬಂದಿಗಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಲು ರಕ್ಷಣಾ ತಂಡ ನಿಯೋಜಿಸಲಾಗಿದೆ ಎಂದು ನೌಕಾಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.
20 ಸದಸ್ಯರ ಪರ್ವತಾರೋಹಿಗಳ ಪಯಣಕ್ಕೆ ಸೆ.3ರಂದು ಮುಂಬೈನಲ್ಲಿ ಹಸಿರು ನಿಶಾನೆ ತೋರಲಾಗಿತ್ತು. 10 ಮಂದಿ ಪರ್ವತಾರೋಹಿಗಳು ಶುಕ್ರವಾರ ಬೆಳಿಗ್ಗೆ ಶಿಖರದತ್ತ ತಮ್ಮ ಅಂತಿಮ ಪಯಣ ಆರಂಭಿಸಿದ್ದರು. ಆದರೆ, ಇವರು ಹಿಮಪಾತದಲ್ಲಿ ಸಿಲುಕಿಕೊಂಡರು ಎಂದು ಅಧಿಕಾರಿಗಳು ಹೇಳಿದರು.
'10 ಪರ್ವತಾರೋಹಿಗಳಲ್ಲಿ ಐವರು ಸುರಕ್ಷಿತವಾಗಿದ್ದರೆ, ಉಳಿದ ಐದು ಸಿಬ್ಬಂದಿ ನಾಪತ್ತೆಯಾಗಿದ್ದು, ಭಾರತೀಯ ಸೇನೆ, ಭಾರತೀಯ ವಾಯುಪಡೆ ಮತ್ತು ಎಸ್‌ಡಿಆರ್‌ಎಫ್ ಸಹಯೋಗದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ಪ್ರಗತಿಯಲ್ಲಿವೆ' ಎಂದು ನೌಕಾಪಡೆಯ ವಕ್ತಾರ ಕಮಾಂಡರ್ ವಿವೇಕ್ ಮಧ್ವಲ್ ಹೇಳಿದರು.