ಜೈಪುರ: ಪ್ರತಿ ಜಿಲ್ಲೆಯಲ್ಲಿಯೂ ಒಂದು ವೈದ್ಯಕೀಯ ಕಾಲೇಜು ಅಥವಾ ವೈದ್ಯ ಶಿಕ್ಷಣದಲ್ಲಿ ಸ್ನಾತಕೋತ್ತರ ಶಿಕ್ಷಣ ನೀಡುವ ಸಂಸ್ಥೆ ಇರುವಂತೆ ಪ್ರಯತ್ನ ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಭರವಸೆ ನೀಡಿದ್ದಾರೆ.
ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸೇವೆಗಳ ಲಭ್ಯತೆಯಲ್ಲಿ ಈಗ ಇರುವ ಅಂತರವನ್ನು ತುಂಬಲು ಯತ್ನಿಸಲಾಗುವುದು. ರೋಗ ತಡೆ ಆರೋಗ್ಯ ವ್ಯವಸ್ಥೆ ಸ್ಥಾಪನೆಗೆ ಸರ್ಕಾರ ಒತ್ತು ಕೊಡಲಿದೆ. ಹಾಗೆಯೇ ಆಯುರ್ವೇದ ಮತ್ತು ಯೋಗಕ್ಕೆ ಉತ್ತೇಜನವನ್ನೂ ನೀಡಲಾಗುವುದು ಎಂದು ಮೋದಿ ಹೇಳಿದ್ದಾರೆ.
ಆರು ವರ್ಷಗಳಲ್ಲಿ 170ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳ ಕೆಲಸ ಪೂರ್ಣಗೊಳಿಸಲಾಗಿದೆ. 100ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜು ಸ್ಥಾಪನೆ ಕೆಲಸ ಭರದಿಂದ ಸಾಗುತ್ತಿದೆ ಎಂದು ರಾಜಸ್ಥಾನದಲ್ಲಿ ನಾಲ್ಕು ವೈದ್ಯಕೀಯ ಕಾಲೇಜುಗಳ ಶಂಕುಸ್ಥಾಪನೆಯ ವರ್ಚುವಲ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಹೇಳಿದರು.
20 ವರ್ಷಗಳ ಹಿಂದೆ ತಾವು ಗುಜರಾತ್ ಮುಖ್ಯಮಂತ್ರಿಯಾದಾಗ
ವೈದ್ಯಕೀಯ ಮೂಲಸೌಕರ್ಯ, ವೈದ್ಯಕೀಯ ಶಿಕ್ಷಣ ಮತ್ತು ಚಿಕಿತ್ಸಾ ಸೌಲಭ್ಯ ಹೆಚ್ಚಳಕ್ಕೆ ಸಂಬಂಧಿಸಿ ಹಲವು ಸವಾಲುಗಳಿದ್ದವು. ಈ ಎಲ್ಲ ಸವಾಲುಗಳನ್ನು ಸ್ವೀಕರಿಸಿ ಸಾಮೂಹಿಕ ಪ್ರಯತ್ನದ ಮೂಲಕ ಬದಲಾವಣೆ ತರಲಾಯಿತು ಎಂಬುದನ್ನು ಮೋದಿ ನೆನಪಿಸಿಕೊಂಡರು.
ಮುಖ್ಯಮಂತ್ರಿಯಾಗಿದ್ದಾಗ ಆರೋಗ್ಯ ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದ ಸಮಸ್ಯೆಗಳಿಗೆ ಪ್ರಧಾನಿಯಾದ ಬಳಿಕ ಪರಿಹಾರ ಕಂಡುಕೊಳ್ಳಲಾಗಿದೆ. ಆರೋಗ್ಯ ಕ್ಷೇತ್ರದ ಪರಿವರ್ತನೆಗೆ ರಾಷ್ಟ್ರೀಯ ಧೋರಣೆ ಮತ್ತು ಹೊಸ ರಾಷ್ಟ್ರೀಯ ನೀತಿ ರೂಪಿಸುವ ದಿಸೆಯಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಹೇಳಿದರು.
'ಆರೋಗ್ಯವು ರಾಜ್ಯದ ವ್ಯಾಪ್ತಿಯ ಲ್ಲಿರುವ ವಿಚಾರ. ಆದರೆ, ಅಲ್ಲಿ ಏನೇನು ಕಷ್ಟಗಳಿವೆ ಎಂಬುದು ನನಗೆ ಗೊತ್ತು. ಏಕೆಂದರೆ ನಾನು ಮುಖ್ಯಮಂತ್ರಿಯಾಗಿ ಇದ್ದವನು. ಸಮಸ್ಯೆಗಳಿಗೆ ಸಂಬಂಧಿಸಿ ನಾವು ಕೆಲಸ ಮಾಡಿದ್ದೇವೆ. ದೊಡ್ಡ ಸಮಸ್ಯೆ ಏನೆಂದರೆ ಆರೋಗ್ಯ ವ್ಯವಸ್ಥೆಯು ವಿಭಜಿತವಾಗಿದೆ. ಪರಸ್ಪರ ಸಂಪರ್ಕದ ಕೊರತೆ ಇದೆ. ರಾಷ್ಟ್ರೀಯ ಮಟ್ಟದಲ್ಲಿ ಸಾಮೂಹಿಕ ಧೋರಣೆಯ ಕೊರತೆ ಇದೆ' ಎಂದು ಮೋದಿ ವಿವರಿಸಿದರು.
ಪ್ರಯತ್ನ ಹಲವು
ಸ್ವಚ್ಚ ಭಾರತ, ಆಯುಷ್ಮಾನ್ ಭಾರತ ಅಭಿಯಾನದಿಂದ ಈಗ ಆಯುಷ್ಮಾನ್ ಭಾರತ ಡಿಜಿಟಲ್ ಮಿಷನ್ ವರೆಗೆ ಹಲವುಪ್ರಯತ್ನಗಳನ್ನು ಸರ್ಕಾರ ನಡೆಸಿದೆ ಎಂದು ಮೋದಿ ಹೇಳಿದರು.
ಆರೋಗ್ಯ ಸೇವಾ ಸಂಸ್ಥೆಗಳ ಜಾಲ ವಿಸ್ತರಣೆಗೊಳ್ಳುವುದು ಬಹಳ ಅಗತ್ಯ ಎಂದು ಅವರು ಪ್ರತಿಪಾದಿಸಿದರು. ಅಖಿಲ ಭಾರತ ವೈದ್ಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ಆಗಿರಲಿ, ವೈದ್ಯಕೀಯ ಕಾಲೇಜುಗಳು ಆಗಿರಲಿ ಅವು ದೇಶದ ಮೂಲೆ ಮೂಲೆಗೂ ತಲುಪುಬೇಕು ಎಂದರು.
ಆರು ಏಮ್ಸ್‌ಗಳಿಂದ ಈಗ 22 ಏಮ್ಸ್‌ಗಳ ಬಲವಾದ ಜಾಲವನ್ನು ಹೊಂದಿದ್ದೇವೆ ಎಂದು ಮೋದಿ ಹೆಮ್ಮೆ ಪಟ್ಟರು. 2014ರಲ್ಲಿ ದೇಶದಲ್ಲಿ ಲಭ್ಯವಿದ್ದ ವೈದ್ಯಕೀಯ ಪದವಿ ಮತ್ತು ಸ್ನಾತಕೋತ್ತರ ಪದವಿ ಸೀಟುಗಳ ಸಂಖ್ಯೆ ಸುಮಾರು 82 ಸಾವಿರ. ಈಗ ಅದು 1.40 ಲಕ್ಷಕ್ಕೆ ಏರಿಕೆಯಾಗಿದೆ ಎಂದರು.
ವೈದ್ಯರಾಗಲು ಇಂಗ್ಲಿಷ್ ಬೇಕಿಲ್ಲ
ವೈದ್ಯಕೀಯ ಶಿಕ್ಷಣ ಪಡೆದುಕೊಳ್ಳಲು ಹಲವರಿಗೆ ಇಂಗ್ಲಿಷ್ ಭಾಷೆಯು ದೊಡ್ಡ ತೊಡಕಾಗಿ ಪರಿಣಮಿಸಿದೆ. ಆದರೆ, ಹೊಸ ಶಿಕ್ಷಣ ನೀತಿಯಿಂದಾಗಿ ಭಾರತೀಯ ಭಾಷೆಗಳಲ್ಲಿಯೂ ಶಿಕ್ಷಣ ಪಡೆಯಲು ಸಾಧ್ಯವಿದೆ. ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಪಡೆಯಲು
ಅವಕಾಶ ದೊರೆಯದವರೂ ವೈದ್ಯರಾಗಿ ಸಮುದಾಯದ ಸೇವೆ ಮಾಡಬಹುದು ಎಂದು ಮೋದಿ ಹೇಳಿದರು.
ಸಮಾಜದ ಎಲ್ಲ ವರ್ಗಗಳಿಗೂ ಅವಕಾಶ ದೊರಕಬೇಕು. ಅದಕ್ಕಾಗಿಯೇ ಇತರ ಹಿಂದುಳಿದ ವರ್ಗಗಳು (ಒಬಿಸಿ) ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ (ಇಡಬ್ಲ್ಯುಎಸ್) ವೈದ್ಯಕೀಯ ಕಾಲೇಜುಗಳಲ್ಲಿ ಮೀಸಲಾತಿ ಕಲ್ಪಿಸಲಾಗಿದೆ ಎಂದು ಹೇಳಿದರು.