ನವದೆಹಲಿ: 'ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ವೇಳೆ ನಗರವನ್ನು ಸುತ್ತುವರೆದು ತಟಸ್ಥರಾಗಿರುವಂತೆ ಮಾಡಿದಿರಿ. ಈಗ ನಗರ ಮಿತಿಯಲ್ಲೇ ಪ್ರತಿಭಟನೆ ನಡೆಸಲು ಅನುಮತಿ ಕೇಳುತ್ತಿದ್ದೀರಿ. ಈ ಕುರಿತು ಸಮತೋಲನದ ನಿರ್ಧಾರ ಅಗತ್ಯ' ಎಂದು ಸುಪ್ರೀಂ ಕೋರ್ಟ್ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳಿಗೆ ತಿಳಿಸಿದೆ.
ರೈತ ಸಂಘಟನೆಗಳ ಒಕ್ಕೂಟವು 'ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಅವಕಾಶ ಕಲ್ಪಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ನ್ಯಾಯಪೀಠ ಈ ಮಾತು ಹೇಳಿತು.
ನ್ಯಾಯಮೂರ್ತಿಗಳಾದ ಎ.ಎಂ.ಖಾನ್ ವಿಲ್ಕರ್ ಮತ್ತು ಸಿ.ಟಿ.ರವಿಕುಮಾರ್ ಅವರ ಪೀಠ, 'ಕೃಷಿ ಕಾಯ್ದೆಗಳ ವಿಚಾರಕ್ಕೆ ಸಂಬಂಧಿಸಿದಂತೆ ರೈತ ಸಂಘಟನೆಗಳು ಒಮ್ಮೆ ನ್ಯಾಯಾಲಯವನ್ನು ಸಂಪರ್ಕಿಸಿದ ಮೇಲೆ, ವಿಷಯ ಇತ್ಯರ್ಥವಾಗುವವರೆಗೂ ನ್ಯಾಯಾಂಗದ ಮೇಲೆ ವಿಶ್ವಾಸವಿಡಬೇಕು' ಎಂದು ರೈತ ಸಂಘಟನೆಗಳ ಪರ ನ್ಯಾಯಾಲಯಕ್ಕೆ ಹಾಜರಾಗಿದ್ದ ವಕೀಲರಿಗೆ ತಿಳಿಸಿತು.
'ರೈತರಿಗೆ ಪ್ರತಿಭಟನೆ ನಡೆಸಲು ಇರುವ ಹಕ್ಕುಗಳಂತೆ, ನಾಗರಿಕರಿಗೂ ತಮ್ಮ ಆಸ್ತಿಪಾಸ್ತಿಗಳು ಹಾನಿಯಾಗದಂತೆ ರಕ್ಷಿಸಿಕೊಳ್ಳುವ ಮತ್ತು ಮುಕ್ತ ಹಾಗೂ ಭಯರಹಿತವಾಗಿ ಸಂಚಾರ ಮಾಡುವ ಸಮಾನ ಹಕ್ಕು ಹೊಂದಿದ್ದಾರೆ' ಎಂದು ಪೀಠ ಅಭಿಪ್ರಾಯಪಟ್ಟಿತು.
'ಇಂಥ ವಿಚಾರಗಳಲ್ಲಿ ಸಮತೋಲನದ ವಿಧಾನವನ್ನು ಅನುಸರಿಸಬೇಕು' ಎಂದು ನ್ಯಾಯಾಲಯ ಹೇಳಿತು.
ಅರ್ಜಿ ವಿಚಾರಣೆಯನ್ನು ಅ.4ಕ್ಕೆ ಮುಂದೂಡಿದ ನ್ಯಾಯಪೀಠ, 'ಅರ್ಜಿದಾರರು, ದೆಹಲಿಯ ಗಡಿಭಾಗಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ತಡೆದು ನಡೆಸುತ್ತಿರುವ ಪ್ರತಿಭಟನೆಯ ಭಾಗವಾಗಿಲ್ಲ ಎಂದು ಅಫಿಡವಿಟ್ ಸಲ್ಲಿಸುವಂತೆಯೂ ಅರ್ಜಿದಾರರನ್ನು ಕೇಳಿತು.