ಅಲಪ್ಪುಳಾ: 'ಸಂಸಾರ ಸಾಗರ'ಕ್ಕೆ ಧುಮುಕಲು ಸಜ್ಜಾಗಿದ್ದ ಜೋಡಿಯೊಂದು ಭಾರಿ ಮಳೆಯಿಂದ ಉಂಟಾಗಿದ್ದ ಪ್ರವಾಹವನ್ನು ದೊಡ್ಡ ಪಾತ್ರೆಯ ನೆರವಿನಿಂದ ದಾಟಿ ಕಲ್ಯಾಣಮಂಟಪ ತಲುಪುವ ಮೂಲಕ ಮದುವೆಯಾಗಿದ್ದಾರೆ. ಈ ಬೆಳವಣಿಗೆ ದೇವರನಾಡಿನಲ್ಲಿ ನಡೆದಿದೆ.
ಕೆಲವು ದಿನಗಳಿಂದ ಕೇರಳದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಹಾಗೂ ಭೂಕುಸಿತದಿಂದ ಹಲವರ ಬದುಕು ವ್ಯಸ್ತವಾಗಿದೆ. ಪ್ರವಾಹ ಪರಿಸ್ಥಿತಿ ಇದ್ದು, ಪರಿಸ್ಥಿತಿ ತಿಳಿಯಾಗುತ್ತಿರುವಂತೆಯೇ ಅಲ್ಲೊಂದು, ಇಲ್ಲೊಂದು ಕಳೇಬರಗಳು ಪತ್ತೆಯಾಗುತ್ತಿವೆ. ಅದರ ನಡುವೆ, ಈ ಆಶಾದಾಯಕ ಘಟನೆಯೂ ನಡೆದಿದೆ.
ಮಳೆಯಿಂದಾಗಿ ಇಲ್ಲಿನ ತಲವಾಡಿಯ ದೇವಸ್ಥಾನಕ್ಕೆ ಹೊಂದಿಕೊಂಡ ಕಲ್ಯಾಣಮಂಟಪವೂ ಜಲಾವೃತವಾಗಿತ್ತು. ಇಲ್ಲಿಯೇ ಆಕಾಶ್ ಮತ್ತು ಐಶ್ವರ್ಯ ಹೊಸಬದುಕಿಗೆ ಹೆಜ್ಜೆ ಇಡಬೇಕಾಗಿತ್ತು. ಆದರೆ, ಮಳೆಯಿಂದ ಮೂಡಿದ್ದ ಪ್ರವಾಹಸ್ಥಿತಿ ಇವರು ಕಲ್ಯಾಣ ಮಂಟಪ ತಲುಪಲೂ ಅಡ್ಡಿಯಾಗಿತ್ತು.
ಸೀಮಿತ ಸಂಖ್ಯೆಯ ಬಂಧುಗಳ ಜೊತೆಗೆ ದೇವಸ್ಥಾನಕ್ಕೆ ಬಂದಿದ್ದ ನವಜೋಡಿ ಕಲ್ಯಾಣ ಮಂಟಪ ತಲುಪಲು ದೊಡ್ಡ ಪಾತ್ರೆಯನ್ನು ಅವಲಂಬಿಸಿದರು. ಮಳೆಯಿಂದಾಗಿ ಮೂಡಿದ್ದ ಪ್ರವಾಹದಲ್ಲಿ ತೇಲುತ್ತಾ, ಕಲ್ಯಾಣ ಮಂಟಪ ತಲುಪಿ ನಿಗದಿತ ಶುಭಮುಹೂರ್ತದಲ್ಲಿಯೇ ಹೊಸಬದುಕಿಗೆ ಹೆಜ್ಜೆ ಇಟ್ಟರು.
ಈ ಇಬ್ಬರು ಚೆಂಗನೂರುವಿನಲ್ಲಿ ಆರೋಗ್ಯ ಸೇವೆ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.