ರೋಮ್ : ಜಿ-20 ಶೃಂಗಸಭೆಗಾಗಿ ರೋಮ್ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಶನಿವಾರ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿಯಾದರು. ಪೋಪ್ ಫ್ರಾನ್ಸಿಸ್ ಅವರೊಂದಿಗೆ ಪ್ರಧಾನಿ ಮೋದಿಯವರ ಮೊದಲ ಭೇಟಿ ಇದಾಗಿದೆ. ಪೋಪ್ ಫ್ರಾನ್ಸಿಸ್ ಭೇಟಿ ವೇಳೆ ಹವಾಮಾನ ಬದಲಾವಣೆಯ ವಿರುದ್ಧ ಹೋರಾಡುವುದು ಮತ್ತು ಬಡತನವನ್ನು ತೊಡೆದುಹಾಕುವುದು ಸೇರಿದಂತೆ ಗ್ರಹವನ್ನು ಉತ್ತಮಗೊಳಿಸುವ ಗುರಿಯನ್ನು ಹೊಂದಿರುವ ವಿಷಯಗಳ ಕುರಿತು ಪಿಎಂ ಮೋದಿ ಮತ್ತು ಪೋಪ್ ಚರ್ಚಿಸಿದರು. ಜೊತೆಗೆ ಪೋಪ್ ಫ್ರಾನ್ಸಿಸ್ ಅವರನ್ನು ಭಾರತಕ್ಕೆ ಭೇಟಿ ನೀಡುವಂತೆ ಪ್ರಧಾನಿ ಆಹ್ವಾನ ನೀಡಿದ್ದಾರೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಡಾ ಎಸ್ ಜೈಶಂಕರ್ ಅವರು ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡಲು ಪ್ರಧಾನಿ ಮೋದಿ ಜೊತೆಗಿದ್ದರು. ಮೂಲಗಳ ಪ್ರಕಾರ ಕೇವಲ ಇಪ್ಪತ್ತು ನಿಮಿಷಗಳ ಕಾಲ ನಿಗದಿಯಾಗಿದ್ದ ಸಭೆ ಒಂದು ಗಂಟೆ ಕಾಲ ನಡೆಯಿತು.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಜಪಾನ್‌ನ ಪಿಎಂ ಫುಮಿಯೊ ಕಿಶಿಡಾ, ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಮತ್ತು ಮೆಕ್ಸಿಕನ್ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಸೇರಿದಂತೆ ಹಲವು ನಾಯಕರು ಈ ಶೃಂಗಸಭೆಗೆ ಗೈರಾಗಲಿದ್ದಾರೆ ಎನ್ನಲಾಗಿದೆ.
ಅನಿವಾಸಿ ಭಾರತೀಯ ಸಮುದಾಯದ ಸದಸ್ಯರೊಂದಿಗೆ ಸಂವಾದ 1999 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಪೋಪ್ ಜಾನ್ ಪಾಲ್ II ಭಾರತಕ್ಕೆ ಬಂದಿದ್ದ ಕೊನೆಯ ಭೇಟಿಯನ್ನು ಇಲ್ಲಿ ಸ್ಮರಿಸಬಹುದು. ಈಗ, ಪ್ರಧಾನಿ ಮೋದಿಯವರ ಅವಧಿಯಲ್ಲಿ ಪೋಪ್ ಅವರನ್ನು ದೇಶಕ್ಕೆ ಭೇಟಿ ನೀಡುವಂತೆ ಆಹ್ವಾನಿಸಲಾಗಿದೆ. ಪ್ರಧಾನಿ ಮೋದಿ ಅವರು ಶುಕ್ರವಾರ ಸಂಜೆ ರೋಮ್‌ನಲ್ಲಿ ಅನಿವಾಸಿ ಭಾರತೀಯ ಸಮುದಾಯದ ಸದಸ್ಯರೊಂದಿಗೆ ಸಂವಾದ ನಡೆಸಿದರು.
ರೋಮ್ ಮತ್ತು ವ್ಯಾಟಿಕನ್ ನಗರಕ್ಕೆ ಭೇಟಿ ಇಟಲಿ ಪ್ರಧಾನಿ ಮಾರಿಯೋ ಡ್ರಾಘಿ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಅಕ್ಟೋಬರ್ 29 ರಿಂದ 31 ರವರೆಗೆ ವ್ಯಾಟಿಕನ್ ಸಿಟಿಗೆ ಭೇಟಿ ನೀಡುತ್ತಿದ್ದಾರೆ. ಗುರುವಾರದ ನಿರ್ಗಮನ ಹೇಳಿಕೆಯಲ್ಲಿ ಮೋದಿ ಅವರು ಅಕ್ಟೋಬರ್ 29-31 ರವರೆಗೆ ರೋಮ್ ಮತ್ತು ವ್ಯಾಟಿಕನ್ ನಗರಕ್ಕೆ ಭೇಟಿ ನೀಡಲಿದ್ದಾರೆ ಎಂದು ಹೇಳಿದರು. "ನನ್ನ ಇಟಲಿಗೆ ಭೇಟಿಯ ಸಮಯದಲ್ಲಿ, ನಾನು ವ್ಯಾಟಿಕನ್ ನಗರಕ್ಕೆ ಭೇಟಿ ನೀಡುತ್ತೇನೆ, ಅಲ್ಲಿ ಪವಿತ್ರ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡುತ್ತೇನೆ ಮತ್ತು ವಿದೇಶಾಂಗ ಕಾರ್ಯದರ್ಶಿ ಹಿಸ್ ಎಮಿನೆನ್ಸ್ ಕಾರ್ಡಿನಲ್ ಪಿಯೆಟ್ರೋ ಪರೋಲಿನ್ ಅವರನ್ನು ಭೇಟಿ ಮಾಡುತ್ತೇನೆ" ಎಂದು ಮೋದಿ ಹೇಳಿದರು.
16ನೇ ಜಿ20 ನಾಯಕರ ಶೃಂಗಸಭೆ ಇಟಲಿ ಪ್ರಧಾನಿ ಮಾರಿಯೋ ಡ್ರಾಘಿ ಅವರ ಆಹ್ವಾನದ ಮೇರೆಗೆ ರೋಮ್‌ನಲ್ಲಿ ನಡೆಯಲಿರುವ 16ನೇ ಜಿ20 ರಾಷ್ಟ್ರಗಳ ನಾಯಕರ ಶೃಂಗಸಭೆಯಲ್ಲಿ ಪ್ರಧಾನಿ ಪಾಲ್ಗೊಳ್ಳಲಿದ್ದಾರೆ. ಈ ವೇಳೆ ಅವರು ರೋಮ್‌ನಲ್ಲಿರುವ ವ್ಯಾಟಿಕನ್ ಸಿಟಿಗೂ ಭೇಟಿ, ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡಿದ್ದಾರೆ. ರೋಮ್‌ನಲ್ಲಿ ನಡೆಯಲಿರುವ 16ನೇ ಜಿ20 ನಾಯಕರ ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದೇನೆ. ಈ ಸಂದರ್ಭದಲ್ಲಿ ಸುಸ್ಥಿರ ಅಭಿವೃದ್ಧಿ ಮತ್ತು ಹವಾಮಾನ ಬದಲಾವಣೆಯಿಂದ ಜಾಗತಿಕ ಆರ್ಥಿಕ ಮತ್ತು ಆರೋಗ್ಯ ಚೇತರಿಕೆ ಬಗ್ಗೆ ಚರ್ಚೆ ನಡೆಸಲಿದ್ದೇನೆ ಎಂದು ತಿಳಿಸಿದ್ದಾರೆ.