ನವದೆಹಲಿ: ಯಾರಾದರೂ ಕಾಂಗ್ರೆಸ್ ಪಕ್ಷದ ಸದಸ್ಯತ್ವ ಸ್ವೀಕರಿಸಲು ಬಯಸುತ್ತಿದ್ದರೆ ಅಂತಹವರಿಗೆ ಕಾಂಗ್ರೆಸ್ ಪಕ್ಷ ಹೊಸ ನಿಯಮಗಳನ್ನು ವಿಧಿಸಿದೆ.
ಮುಂದೆ ಕಾಂಗ್ರೆಸ್ ಸದಸ್ಯತ್ವ ಸ್ವೀಕರಿಸುವವರು ಮದ್ಯ ಸೇವನೆ, ಡ್ರಗ್ಸ್ ಸೇವನೆಯಿಂದ ದೂರವಿರುವುದಾಗಿ ಘೋಷಿಸಿಕೊಳ್ಳಬೇಕಾಗಿದೆ, ಅಷ್ಟೇ ಅಲ್ಲದೇ ಸಾರ್ವಜನಿಕ ವೇದಿಕೆಗಳಲ್ಲಿ ಪಕ್ಷದ ನಿಯಮಗಳನ್ನು ಟೀಕೆ ಮಾಡುವುದಿಲ್ಲ ಎಂಬ ಲಿಖಿತ ಭರವಸೆಯನ್ನೂ ನೀಡಬೇಕಾಗಿದೆ.
ಅತ್ಯಂತ ಪುರಾತನ ಪಕ್ಷದ ಸದಸ್ಯತ್ವದ ಅರ್ಜಿಯಲ್ಲಿ ಈ ನಿಬಂಧನೆಗಳನ್ನು ಸದಸ್ಯತ್ವ ಸ್ವೀಕರಿಸುತ್ತಿರುವವರು ಪೂರ್ಣಗೊಳಿಸಬೇಕಿದೆ. ಇವೆಲ್ಲದರ ಜೊತೆಗೆ ಕಾನೂನನ್ನು ಮೀರಿ ಆಸ್ತಿ ಮಾಡುವುದಿಲ್ಲ. ಪಕ್ಷ ಹೇಳಿದ ಕೆಲಸಗಳನ್ನು ತಪ್ಪದೇ ಪಾಲಿಸುವ ಭರವಸೆಗಳನ್ನು ಲಿಖಿತವಾಗಿ ನೀಡಬೇಕಿದೆ.
ಇದು ಅತ್ಯಂತ ಪುರಾತನ ಪಕ್ಷವಾಗಿದ್ದು, ನಮ್ಮ ಪಕ್ಷದ ಸಂವಿಧಾನದ ಭಾಗಗಳು ಇವುಗಳಾಗಿವೆ. "ಎಲ್ಲಾ ಕಾಂಗ್ರೆಸ್ ಸದಸ್ಯರು ಹಾಗೂ ಹೊಸ ಸದಸ್ಯರು ಈ ನಿಬಂಧನೆಗಳಿಗೆ ಪೂರಕವಾಗಿ ನಡೆದುಕೊಳ್ಳುವುದನ್ನು ನಿರೀಕ್ಷಿಸುತ್ತೇವೆ" ಎಂದು ಪಕ್ಷದ ಕೇಂದ್ರ ಚುನಾವಣಾ ವಿಭಾಗದ ಅಧ್ಯಕ್ಷರಾದ ಮಧುಸೂಧನ್ ಮಿಸ್ತ್ರಿ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ನವೆಂಬರ್ 1 ರಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಿದ್ದು 2022 ರ ಮಾರ್ಚ್ 31 ವರೆಗೂ ಈ ಅಭಿಯಾನ ನಡೆಯಲಿದೆ. ಈ ಬಳಿಕ ಮುಂದಿನ ವರ್ಷ ಆಗಸ್ಟ್ 21 ರಿಂದ ಸೆ.20 ರ ನಡುವೆ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಲಿದೆ.