ಕಾಸರಗೋಡು: ಚೆಮ್ನಾಡ್ ಜಮಾಅತ್ ಹೈಯರ್ ಸೆಕೆಂಡರಿ ಶಾಲೆಯ ಬಡ ವಿದ್ಯಾರ್ಥಿಯೊಬ್ಬನ ಕುಟುಂಬಕ್ಕೆ ಶಾಲಾ ಸಮಿತಿ ಹಾಗೂ ಚೂರಿ ಐಕ್ಯವೇದಿ ವತಿಯಿಂದ ನಿರ್ಮಿಸಿಕೊಟ್ಟ ಮನೆಯ ಕೀಲಿಕೈಯನ್ನು ಸ್ಥಳೀಯಾಡಳಿತ ಖಾತೆ ಸಚಿವ ಎಂ.ವಿ ಗೋವಿಂದನ್ ಫಲಾನುಭವಿಗಳಿಗೆ ಹಸ್ತಾಂತರಿಸಿದರು.
'ನೆನಪಿನ ಮನೆ'ಹೆಸರಿನ ಯೋಜನೆಯನ್ವಯ ಕುಟುಂಬಕ್ಕೆ ಮನೆ ನಿರ್ಮಿಸಿಕೊಡಲಾಗಿತ್ತು. ಸಂದಿಗ್ಧ ಪರಿಸ್ಥಿತಿಯೊಂದರಲ್ಲಿ ಸಮಾಜ ಯಾವ ರೀತಿ ಸ್ಪಂದಿಸಬೇಕು ಎಂಬುದನ್ನು ಶಾಲಾ ಸಮಿತಿ ಹಾಗೂ ಐಕ್ಯವೇದಿ ಸಂಘಟನೆ ಬಡ ಕುಟುಂಬಕ್ಕೆ ಮನೆ ನಿರ್ಮಿಸಿಕೊಡುವ ಮೂಲಕ ತೋರಿಸಿಕೊಟ್ಟಿರುವುದಾಗಿ ಸಚಿವರು ತಿಳಿಸಿದರು. ಶಾಲಾ ಪ್ರಬಂಧಕ, ಮಾಜಿ ಸಚಿವ ಸಿ.ಟಿ ಅಹಮ್ಮದಾಲಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಸಿ.ಎಚ್. ಕುಞಂಬು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಚೆಮ್ನಾಡ್ ಗ್ರಾಪಂ ಉಪಾಧ್ಯಕ್ಷ ಮನ್ಸೂರ್ ಕುರಿಕ್ಕಳ್, ಬ್ಲಾಕ್ ಪಂಚಾಯಿತಿ ಸದಸ್ಯಬದರುಲ್ ಮುನೀರ್, ಜಿಲ್ಲಾ ಶಿಕ್ಷಣಾಧಿಕಾರಿ ನಂದಿಕೇಶ್, ಪಿಟಿಎ ಅಧ್ಯಕ್ಷ ಬಿ.ಎಚ್. ಅಬ್ದುಲ್ ಖಾದರ್, ಪ್ರಾಂಶುಪಾಲ ಡಾ. ಸುಕುಮಾರನ್ ನಾಯರ್ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಕೆ.ಓ ರಾಜೀವನ್ ಸ್ವಾಗತಿಸಿದರು. ಸಿ.ಎಂ. ಮುಸ್ತಫಾ ವಂದಿಸಿದರು.