ಮಂಗಳೂರು: ವಿಮರ್ಶೆಯ ನೆರವು ಇಲ್ಲದಿದ್ದರೆ ಸಾಹಿತ್ಯ ಬೆಳೆಯುವುದಿಲ್ಲ, ಅದು ನಿಂತ ನೀರಾಗಿ ಬಿಡುತ್ತದೆ. ಸಾಹಿತ್ಯ ರಚನೆ ಮತ್ತು ವಿಮರ್ಶೆ ಜೊತೆಜೊತೆಗೆ ಸಾಗಬೇಕಾಗಿರುವ ಅಂತರ್ ಶಿಸ್ತಿನ ವಿಷಯಗಳು ಎಂದು ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಸೋಮಣ್ಣ ಹೊಂಗಳ್ಳಿ ಹೇಳಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು, ಮಂಗಳೂರು ತಾಲೂಕು ಸಮಿತಿ ನಗರದ ಶಾರದಾ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಹೃದಯ ಸಹೃದಯ ಕವಿ ಕಾವ್ಯ ವಿಮರ್ಶೆ ಕಾರ್ಯಕ್ರಮದ ಅಧ್ಯಕ್ಷ ಸ್ಥಾನದಿಂದ ಅವರು ಮಾತಾಡುತ್ತಿದ್ದರು.
ಈಗ ವಿಮರ್ಶೆಯಿಂದ ನಾವು ದೂರವಾಗಿದ್ದೇವೆ. ತಪ್ಪುಗಳನ್ನು ತಿದ್ದಿ ಸರಿದಾರಿಯಲ್ಲಿ ಸಾಗುವ ವಿಮರ್ಶೆ ಇಲ್ಲದಿದ್ದರೆ ಬೆಳವಣಿಗೆ ಆಗುವುದಿಲ್ಲ ಎಂದು ಅವರು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತಾಡಿದ ಚಾರ್ಟರ್ಡ್ ಅಕೌಂಟೆಂಟ್ ಎಸ್. ಎಸ್. ನಾಯಕ್ ಅವರು ರಾಷ್ಟ್ರೀಯ ದೃಷ್ಟಿಕೋನ ಮತ್ತು ಸಮನ್ವಯ ಭಾವದಿಂದ ಸಾಹಿತ್ಯಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ವಿಷಯ ಪ್ರವೇಶ ಮಾಡಿ ಮಾತಾಡಿದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಮಂಗಳೂರು ತಾಲೂಕು ಸಮಿತಿ ಅಧ್ಯಕ್ಷ ಡಾ. ವಸಂತಕುಮಾರ ಪೆರ್ಲ ಅವರು, ಕಾವ್ಯವು ಹೃದಯದಿಂದ ಹುಟ್ಟುವುದರಿಂದ ಅದು ತಾಜಾ ಆಗಿರುತ್ತದೆ. ಪ್ರತಿಯೊಂದು ಕವಿತೆಯೂ ಒಂದು ಹೊಸ ಅನುಭವದ ಅನಾವರಣ. ತಮ್ಮ ತಮ್ಮ ವಿಶಿಷ್ಟ ಅನುಭವಗಳನ್ನು ರೂಪಕಾತ್ಮಕವಾಗಿ ಹೇಳಬೇಕೆಂಬ ತುಡಿತ ಎಲ್ಲರಲ್ಲಿಯೂ ಇರುತ್ತದೆ. ಹಾಗಾಗಿಯೇ ಇವತ್ತು ಅಧಿಕ ಸಂಖ್ಯೆಯಲ್ಲಿ ಕವಿಗಳು ಕಾವ್ಯ ರಚಿಸುತ್ತಿರುವುದನ್ನು ಕಾಣಬಹುದಾಗಿದೆ. ಹೃದಯದಿಂದ ಸ್ಫುರಿಸುವ ಈ ಕಾವ್ಯವು ಭಾಷೆಯ ಚೌಕಟ್ಟಿನಲ್ಲಿ ಹೊಮ್ಮಬೇಕಾಗಿರುವುದರಿಂದ ಭಾಷೆಯ ಇತಿಮಿತಿ ಮತ್ತು ರಚನೆಯ ಇತಿಮಿತಿಗಳನ್ನು ತಿಳಿದುಕೊಳ್ಳುವುದು ತೀರ ಅಗತ್ಯ. ಅದಕ್ಕಾಗಿ ಈ ವಿಶಿಷ್ಟ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ಕವಿಗಳಾಗಿ ಪ್ರಮೀಳಾ ದೀಪಕ್ ಪೆರ್ಮುದೆ, ರಶ್ಮಿ ಸನಿಲ್, ಯೋಗೀಶ್ ಮಲ್ಲಿಗೆಮಾಡು, ಲಕ್ಷ್ಮೀ ವಿ. ಭಟ್, ವಿಜಯಲಕ್ಷ್ಮಿ ಕಟೀಲು, ಕೆ. ಶೈಲಾಕುಮಾರಿ, ನಿಶ್ಮಿತಾ ವಿ. ನಿಟ್ಟೆ, ವಾಣಿ ಲೋಕಯ್ಯ, ಶೈಲಜಾ ಪುದುಕ್ಕೋಳಿ, ಮತ್ತು ಹ. ಸು. ಒಡ್ಡಂಬೆಟ್ಟು ಭಾಗವಹಿಸಿದರು. ವಿಮರ್ಶಕರಾಗಿ ಡಾ. ಕರುಣಾಕರ ಬಳ್ಕೂರು, ಪ್ರಶಾಂತಿ ಶೆಟ್ಟಿ ಇರುವೈಲು, ಸಾವಿತ್ರಿ ಪೂರ್ಣಚಂದ್ರ, ದೀವಿತ್ ಪೆರಾಡಿ, ರಾಜೇಶ್ ಶೆಟ್ಟಿ ದೋಟ, ವಾಣಿ ಯು. ಎಸ್., ರೂಪಕಲಾ ಆಳ್ವ, ಪೇರೂರು ಜಾರು, ರಘು ಇಡ್ಕಿದು ಮತ್ತು ಸಾವಿತ್ರಿ ರಮೇಶ್ ಭಟ್ ಅವರು ಭಾಗವಹಿಸಿದರು.
ಲೇಖಕರಾದ ಡಾ. ಮಾಧವ ಮೂಡುಕೊಣಾಜೆ, ಗೋವಿಂದ ಭಟ್ ಕೊಳಚಪ್ಪೆ, ತಿಲಕ್ ಕಾಮತ್ ಕಾಸರಗೋಡು, ಸತ್ಯವತಿ ಕೊಳಚಪ್ಪು, ಉಪನ್ಯಾಸಕಿ ಯಶೋದಾ ಮೊದಲಾದವರು ಈ ವಿಶಿಷ್ಟ ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ನಿರೀಕ್ಷಾ ಯು. ಕೆ. ಪ್ರಾರ್ಥನೆ ಹಾಡಿದರು. ಅ. ಭಾ. ಸಾ. ಪ. ಸದಸ್ಯ ಯೋಗೀಶ್ ಮಲ್ಲಿಗೆಮಾಡು ಸ್ವಾಗತಿಸಿದರು. ನ್ಯಾಯವಾದಿಗಳ ಘಟಕದ ಅಧ್ಯಕ್ಷೆ ಪರಿಮಳಾ ರಾವ್ ಸುರತ್ಕಲ್ ನಿರೂಪಿಸಿದರು. ಜಿಲ್ಲಾ ಉಪಾಧ್ಯಕ್ಷೆ ವಾಣಿ ಟಿ. ಶೆಟ್ಟಿ ವಂದನಾರ್ಪಣೆ ಮಾಡಿದರು.