ನವದೆಹಲಿ: ದೇಶದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸಲು ಅಮೆರಿಕದ ಟೆಸ್ಲಾ ಕಂಪನಿಗೆ ಮನವಿ ಮಾಡಲಾಗಿದೆ. ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆಯನ್ನೂ ನೀಡಲಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
'ಇಂಡಿಯಾ ಟುಡೆ ಕಾನ್‌ಕ್ಲೇವ್ 2021'ನಲ್ಲಿ ಮಾತನಾಡಿದ ಅವರು, ಟಾಟಾ ಮೋಟರ್ಸ್‌ನವರು ತಯಾರಿಸುತ್ತಿರುವ ಎಲೆಕ್ಟ್ರಿಕ್ ಕಾರುಗಳು ಟೆಸ್ಲಾಗಿಂತ ಕಡಿಮೆಯೇನಿಲ್ಲ ಎಂದು ಹೇಳಿದ್ದಾರೆ.
'ನಿಮ್ಮ ಕಂಪನಿಯು ಚೀನಾದಲ್ಲಿ ತಯಾರಿಸಿದ ಎಲೆಕ್ಟ್ರಿಕ್ ಕಾರುಗಳನ್ನು ಭಾರತದಲ್ಲಿ ಮಾರಾಟ ಮಾಡಬೇಡಿ. ಭಾರತದಲ್ಲೇ ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸಿ ಮತ್ತು ರಫ್ತು ಮಾಡಿ. ಏನೆಲ್ಲ ನೆರವು ಬೇಕೋ ಅದೆಲ್ಲವನ್ನೂ ಸರ್ಕಾರ ಒದಗಿಸಿಕೊಡಲಿದೆ ಎಂದು ಟೆಸ್ಲಾಗೆ ತಿಳಿಸಿದ್ದೇನೆ' ಎಂದು ಗಡ್ಕರಿ ಹೇಳಿದ್ದಾರೆ.
ಎಲೆಕ್ಟ್ರಿಕ್ ಕಾರುಗಳ ಆಮದು ಸುಂಕ ಕಡಿಮೆ ಮಾಡುವಂತೆ ಟೆಸ್ಲಾ ಭಾರತಕ್ಕೆ ಮನವಿ ಮಾಡಿತ್ತು.
ತೆರಿಗೆ ವಿನಾಯಿತಿ ಬೇಡಿಕೆ ವಿಚಾರವಾಗಿ ಟೆಸ್ಲಾ ಕಂಪನಿ ಜತೆ ಮಾತುಕತೆ ನಡೆಯುತ್ತಿದೆ ಎಂದೂ ಸಚಿವರು ತಿಳಿಸಿದ್ದಾರೆ.
ತೆರಿಗೆ ವಿನಾಯಿತಿಯನ್ನು ಪರಿಗಣಿಸುವುದಕ್ಕೂ ಮೊದಲು ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ತಯಾರಿ ಆರಂಭಿಸಿ ಎಂದು ಬೃಹತ್ ಕೈಗಾರಿಕಾ ಸಚಿವಾಲಯ ಕಳೆದ ತಿಂಗಳು ಟೆಸ್ಲಾಗೆ ಸೂಚಿಸಿತ್ತು.