ಲಕ್ನೋ: ಲಖಿಮಪುರ ಖೇರಿ ಹಿಂಸಾಚಾರದ ಕುರಿತು ಕೇಂದ್ರ ಸಚಿವ ಅಜಯ್ ಮಿಶ್ರಾ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಘಟನೆ ನಡೆದ ವೇಳೆ ನನ್ನ ಪುತ್ರ ಆಶೀಶ್ ಮಿಶ್ರಾ (Union Minister of State (MoS) for Home Ajay Mishra's son) ಅಲ್ಲಿ ಇರಲೇ ಇಲ್ಲ. ಪ್ರತಿಭಟನಾಕಾರ ಗುಂಪಿನಲ್ಲಿ ಕೆಲ ಸಮಾಜ ವಿರೋಧಿಗಳು ಶಾಮೀಲು ಆಗಿದ್ದರು. ಪ್ರತಿಭಟನಾಕಾರು ಕಲ್ಲು ತೂರಾಟ ನಡೆಸಿ ವಾಹನಗಳನ್ನು ಪಲ್ಟಿ ಮಾಡಿದರು. ಈ ವೇಳೆ ವಾಹನಗಳ ಕೆಳಗೆ ಸಿಲುಕಿ ರೈತರಿಬ್ಬರು ಸಿಲುಕಿ ಸಾವನ್ನಪ್ಪಿದ್ದಾರೆ. ಇಡೀ ಘಟನೆ ಪಕ್ಕಾ ಪೂರ್ವನಿಯೋಜಿತವಾಗಿತ್ತು. ಗಲಾಟೆ ಸೃಷ್ಟಿಸುವ ಉದ್ದೇಶದಿಂದಲೇ ಕೆಲವರು ಗುಂಪಿನಲ್ಲಿ ಸೇರಿಕೊಂಡಿದ್ದರು ಎಂದು ಅಜಯ್ ಮಿಶ್ರಾ ಆರೋಪಿಸಿದ್ದಾರೆ. ಆರಂಭದಲ್ಲಿ ಸಚಿವರ ಪುತ್ರನ ಹೆಸರು ಅಭಿಷೇಕ್ ಎಂದು ಹೇಳಲಾಗಿತ್ತು. ಇದೀಗ ಸಚಿವರು ಅಭಿಷೇಕ್ ಅಲ್ಲ ಆಶೀಶ್ ಎಂದು ದೃಢಪಡಿಸಿದ್ದಾರೆ.
ಲಖಿಮಪುರ ಖೇರಿಯ ಹಿಂಸಾಚಾರದಲ್ಲಿ ನಮ್ಮ ಚಾಲಕ ಸೇರಿದಂತೆ ಮೂವರು ಬಿಜೆಪಿ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ. ನಮ್ಮ ಚಾಲಕನೇ ವಾಹನ ಚಲಾಯಿಸುತ್ತಿದ್ದರು. ಇದೊಂದು ಪೂರ್ವಯೋಜಿತ ಘಟನೆ ಎಂದು ಆರೋಪಿಸಿದ್ದಾರೆ. ಪುತ್ರ ಆಶೀಶ್ ಪೊಲೀಸರ ತನಿಖೆಗೆ ಸ್ಪಂದಿಸುತ್ತಿದ್ದಾರೆ. ಹಿಂಸಾಚಾರದ ಬಳಿಕ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಿಗದಿಯಾಗಿದ್ದ ತಮ್ಮ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಲಕ್ನೋಗೆ ಹಿಂದಿರುಗುತ್ತಿದ್ದಾರೆ. ನಗರಕ್ಕೆ ಆಗಮಿಸುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ. ಈ ಘಟನೆಯಲ್ಲಿ ಸಾವನ್ನಪ್ಪಿದವರ ಒಟ್ಟ ಸಂಖ್ಯೆ ಎಂಟು ಇದೆ. ಇವರಲ್ಲಿ ನಾಲ್ವರು ರೈತರಾಗಿದ್ದರೆ, ಇನ್ನೂ ನಾಲ್ವರು ಕಾರಿನಲ್ಲಿದ್ದವರು ಎನ್ನಲಾಗಿದೆ. ಕಾರಿನಲ್ಲಿದ್ದ ಡ್ರೈವರ್ ಹಾಗೂ ಮೂವರು ಬಿಜೆಪಿ ಕಾರ್ಯಕರ್ತರನ್ನ ಉದ್ರಿಕ್ತ ಜನರು ಕೊಂದು ಹಾಕಿದರು ಎಂದು ಕೇಂದ್ರ ಸಚಿವ ಮಿಶ್ರಾ ಆರೋಪಿಸಿದ್ಧಾರೆ.
ಅಜಯ್ ಮಿಶ್ರಾ ಮತ್ತು ಡಿಸಿಎಂ ಕೇಶವ್ ಮೌರ್ಯ ಲಖಿಮಪುರಕ್ಕೆ ಆಗಮಿಸುತ್ತಿರುವ ವಿಷಯ ತಿಳಿದ ರೈತರು ಹೆಲಿಪ್ಯಾಡ್ ಗೆ ನುಗ್ಗಿ ಪ್ರತಿಭಟನೆ ನಡೆಸಿದ್ದರು. ಹೀಗಾಗಿ ಅಜಯ್ ಮಿಶ್ರಾ ಸೇರಿದಂತೆ ಇನ್ನಿತರರು ರಸ್ತೆ ಮಾರ್ಗವಾಗಿಯೇ ಲಖಿಮಪುರಕ್ಕೆ ತೆರಳಿದ್ದರು. ಕಾರ್ಯಕ್ರಮದ ನಂತರ ಹಿಂದಿರುಗುತ್ತಿದ್ದ ವೇಳೆ ರೈತರ ಗುಂಪು ಕಪ್ಪು ಬಾವುಟ ಪ್ರದರ್ಶಿಸಿ ಕೇಂದ್ರದ ವಿರುದ್ಧ ಘೋಷಣೆಗಳನ್ನು ಕೂಗಿದ್ದರು. ಈ ವೇಳೆ ಸಚಿವರ ಪುತ್ರ ರೈತರ ಮೇಲೆ ಕಾರ್ ಚಲಾಯಿಸಿದರು ಎಂಬ ಆರೋಪಗಳು ಕೇಳಿ ಬಂದಿದೆ. ಹಿಂಸಾಚಾರದಲ್ಲಿ ಪೊಲೀಸರು ಸಹ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.ಘಟನೆ ಬಳಿಕ ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಮುಗಿಬೀಳುತ್ತಿವೆ. ಸಮಾಜವಾದಿ ಪಾರ್ಟಿಯ ಮುಖ್ಯಸ್ಥ ಅಖಿಲೇಶ್ ಯಾದವ್, ಇದೊಂದು ಅಮಾನವೀಯ ಘಟನೆ ಎಂದು ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಮಾಜಿ ಅಧ್ಯಕ್ಷ, ಸಂಸದ ರಾಹುಲ್ ಗಾಂಧಿ, ರೈತರ ಬಲಿದಾನವನ್ನು ವ್ಯರ್ಥವಾಗಲು ಬಿಡಲ್ಲ ಎಂದು ಗುಡುಗಿದ್ದಾರೆ. ಇತ್ತ ರೈತರು ಪ್ರತಿಭಟನೆ ನಡೆಸುತ್ತಿರುವ ಎಲ್ಲ ಸ್ಥಳಗಳಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗುತ್ತಿದೆ.
ಇಂಟರ್ ನೆಟ್ ಬಂದ್:
ಹಿಂಸಾಚಾರ ನಡೆದ ಸ್ಥಳದಲ್ಲಿ ಬೂದಿ ಮುಚ್ಚಿದ ಕೆಂಡದ ವಾತಾವರಣ ನಿರ್ಮಾಣವಾಗಿದೆ. ಎಡಿಜಿ ಸೇರಿದಂತೆ ಹಿರಿಯ ಪೊಲೀಸರು ಸ್ಥಳದಲ್ಲಿ ಹಾಜರಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಘಟನಾ ಸ್ಥಳದ 20 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಇಂಟರ್ ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ.