ಬದಿಯಡ್ಕ: ಕಾಸರಗೋಡು ಜಿಲ್ಲೆಯಾದ್ಯಂತ ಪುಷ್ಪ ವ್ಯಾಪಾರ ಬಹಳಷ್ಟು ಬೇಡಿಕೆಯ ಕಾಲವೊಂದಿತ್ತು. ಕಾಸರಗೋಡು ನಗರ, ಕುಂಬಳೆ, ಉಪ್ಪಳ, ಹೊಸಂಗಡಿ, ಬದಿಯಡ್ಕ, ಮುಳ್ಳೇರಿಯ, ಕಾಞಂಗಾಡ್ ಪೇಟೆಗಳ ಬೀದಿ ಬೀದಿಗಳಲ್ಲಿ ಸ್ಥಳೀಯರು ಹಾಗೂ ವಿಶೇಷ ಋತುಗಳಲ್ಲಿ ಕರ್ನಾಟಕದ ಹಾಸನ, ಚಿಕ್ಕಮಗಳೂರು ಮೊದಲಾದೆಡೆಗಳಿಂದಲೂ ವ್ಯಾಪಾರಿಗಳು ಆಗಮಿಸಿ ಭರಪೂರ ಭರ್ಜರಿಯ ವ್ಯಾಪಾರ ನಡೆಸುತ್ತಿದ್ದರು. ಜಿಲ್ಲೆಯ ಸ್ಥಳೀಯ ಸುಮಾರು 300 ಜನರು ಅಲ್ಲಲ್ಲಿ ಹೂಗಳನ್ನು ಮಾರಿ ಜೀವನ ಸಾಗಿಸುತ್ತಾರೆ ಎಂದೂ ಅಂದಾಜು. ಬಳಿಕ ಕಳೆದ ಒಂದೂವರೆ ವರ್ಷಗಳಿಂದ ಕೋವಿಡ್ ನಿರ್ಬಂಧಗಳು ಹೂವಿನ ವ್ಯಾಪಾರದ ಮೇಲೆ ಗಮನಾರ್ಹ ಪರಿಣಾಮ ಬೀರಿತು.
ಇದೀಗ ಕೋವಿಡ್ ನಿಯಂತ್ರಣಗಳು ಒಂದು ಹಂತದ ವರೆಗೆ ಹಿಂತೆಗೆಯಲ್ಪಟ್ಟ ಬೆನ್ನಿಗೇ ಹಬ್ಬ ಹರಿದಿನಗಳು ಮತ್ತು ಮದುವೆ ಸೀಸನ್ ಗಳು ಹೆಚ್ಚು ಕ್ರಿಯಾಶೀಲವಾಗತೊಡಗಿವೆ. ಹೂವಿನ ವ್ಯಾಪಾರವು ಮತ್ತೆ ಹಿಂದಿನ ಸ್ಥಿತಿಗೆ ಬರುವ ಸ|ಊಚನೆಗಳೂ ವ್ಯಕ್ತವಾಯಿತು. ಆದರೆ ಇದೀಗ ಕೋವಿಡ್ ನಿರ್ಬಂಧಗಳನ್ನು ಹಿಂಪಡೆದು ನವರಾತ್ರಿಯ ಆಗಮನದ ಹೊರತಾಗಿಯೂ, ಭಾರೀ ಮಳೆಯು ಹೂಗಾರರಿಗೆ ತಟ್ಟಿದೆ.
ಕಾಸರಗೋಡಿಗೆ ಹೆಚ್ಚಿನ ಪ್ರಮಾಣದಲ್ಲಿ ಕರ್ನಾಟಕ ಮತ್ತು ತಮಿಳುನಾಡು ಮಾರುಕಟ್ಟೆಗಳಿಂದ ಹೂಗಳು ಆಗಮಿಸುತ್ತದೆ. ಆದರೆ ಮತ್ತೆ ಮಳೆ ಬಿರುಸುಗೊಂಡಿರುವುದರಿಂದ ಪುಷ್ಪೋಧ್ಯಮ ಹಳ್ಳಹಿಡಿದಿದೆ.
ತಮಿಳುನಾಡು, ಮಂಗಳೂರು ಮಾರುಕಟ್ಟೆಯಿಂದ ಮಲ್ಲಿಗೆ, ಸೇವಂತಿಗೆ, ಗುಲಾಬಿಗಳು, ಟ್ಯೂಬರೋಸ್ ಮತ್ತು ಮಲ್ಬೆರಿ ಮುಂತಾದ ಎಲ್ಲಾ ರೀತಿಯ ಹೂವುಗಳನ್ನು ಮಲಬಾರ್ ಪ್ರದೇಶ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಗೆ ರಫ್ತು ಮಾಡಲಾಗುತ್ತದೆ.
ತಮಿಳುನಾಡು ಮಾರುಕಟ್ಟೆಯ ಬೆಲೆ ಮತ್ತು ಹೂವಿನ ಗುಣಮಟ್ಟದಿಂದ ದೈನಂದಿನ ದರವನ್ನು ನಿರ್ಧರಿಸಲಾಗುತ್ತದೆ. ಬದಿಯಡ್ಕದಲ್ಲಿ ದೀರ್ಘ ಕಾಲಗಳಿಂದ ಹೂವಿನ ಸಗಟು ವ್ಯಾಪಾರಿಯಾದ ಹರಿ ಮಾನ್ಯ ಅವರು ಹೇಳುವಂತೆ ಮಳೆಯ ಕಾರಣ ಹೂವುಗಳು ಹದಗೆಟ್ಟರೆ ಹೆಚ್ಚಿನ ಬೆಲೆಗೆ ಕಾರಣವಾಗುತ್ತದೆ ಎಂದು ಹೇಳುತ್ತಾರೆ.
ಗಡಿಗಳನ್ನು ಮುಚ್ಚಿರುವುದು ಮತ್ತು ಮಳೆಯ ಕಾರಣ ಈ ವರ್ಷ ಹೂವಿನ ಸರಬರಾಜಿನಲ್ಲಿ ಭಾರೀ ಕುಸಿತ ಉಂಟಾಗಿದೆ. ಇದರಿಂದ ಬೇಡಿಕೆ ಅನುಸಾರ ಪೂರೈಕೆ ಅಸಾಧ್ಯವಾಗಿದ್ದು, ಬೆಲೆ ಏರಲು ಮುಖ್ಯ ಕಾರಣ ಎಂದು ಹರಿ ಮಾನ್ಯ ತಿಳಿಸಿದ್ದಾರೆ. ಒಂದು ಮೊಳ ಸೇವಂತಿಗೆಗೆ ಬುಧವಾರ 40 ರೂ. ಮಾರಾಟ ಬೆಲೆ ಮಾರುಕಟ್ಟೆಯಲ್ಲಿತ್ತು. ಕೆಲವೆಡೆ 45 ರೂ.ಗಳೂ ಇತ್ತು. ನವರಾತ್ರಿಯ ಆ|ಯುಧ ಪೂಜೆಯ ಕಾರಣ ಬೇಡಿಕೆ ಹೆಚ್ಚಿದ್ದು, ಪೂರೈಕೆಯ ಕೊರತೆ ಬೆಲೆ ಏರಿಕೆಗೆ ಕಾರಣವಾಗಿದೆ. ಜೊತೆಗೆ ಕೋವಿಡ್ ಪರಿಣಾಮದ ಆರ್ಥಿಕ ಕುಸಿತ ಮಾರುಕಟ್ಟೆಯನ್ನು ಬಾಧಿಸಿದ್ದು, ಜನರಲ್ಲಿ ಹಣದ ಕೊರತೆಯ ಕಾರಣ ಗ್ರಹಿಸಿದಷ್ಟು ವ್ಯಾಪಾರ ನಡೆಯದಿರುವುದು ಹೂವಿನ ಮಾರಾಟಗಾರರಿಗೆ ಕಳವಳ ಮೂಡಿಸಿದೆ.