ಪೆರ್ಲ: ಎಣ್ಮಕಜೆ ಪಂಚಾಯಿತಿಯ ಪರ್ತಾಜೆ ನಿವಾಸಿ ಬಾಲಕೃಷ್ಣ ಅವರ ಕುಟುಂಬಕ್ಕೆ ಸೇವಾ ಭಾರತಿಯ ವತಿಯಿಂದ ಸೂರೊಂದನ್ನು ನಿರ್ಮಿಸಿಕೊಡಲಾಗಿದ್ದು, ಹಲವು ವರ್ಷಗಳ ಮುರುಕಲು ಮನೆಯ ವಾಸ್ತವ್ಯಕ್ಕೆ ತೆರೆಬಿದ್ದಿದೆ. ಪತ್ನಿ ಹಾಗೂ ಎಳೆಯ ಪುತ್ರಿಯೊಂದಿಗೆ ದೀರ್ಘ ಕಾಲದಿಂದ ಜೋಪಡಿಯಲ್ಲಿ ವಾಸಿಸುತ್ತಿದ್ದ ಇವರ ಯಾತನೆ ಬದುಕಿನ ಬಗ್ಗೆ ಗ್ರಾಮ ಪಂಚಾಯಿತಿ ಸದಸ್ಯೆ ಇಂದಿರಾ ಅವರು ಸೇವಾ ಭಾರತಿ ಕಾರ್ಯಕರ್ತರಿಗೆ ಮನವರಿಕೆ ಮಾಡಿದ್ದು, ದಾನಿಗಳ ನೆರವಿನಿಂದ ಅಲ್ಪಾವಧಿಯಲ್ಲಿ ಸುಸಜ್ಜಿತ ಮನೆಯನ್ನು ನಿರ್ಮಿಸಿಕೊಟ್ಟಿದ್ದಾರೆ. ಯಾವುದೇ ಕ್ಷಣದಲ್ಲೂ ಮುರುಕಲು ಮನೆ ಧರಾಶಾಯಿಯಾಗುವುದನ್ನು ಮನಗಂಡ ಸೇವಾಭಾರತಿ ಕಾರ್ಯಕರ್ತರು ತಕ್ಷಣದಿಂದ ಮನೆ ಕೆಲಸಕ್ಕೆ ಚಾಲನೆ ನೀಡಿದ್ದರು. ರಾತ್ರಿ ಹಗಲೆನ್ನದೆ ಶ್ರಮದಾನದಲ್ಲಿ ತೊಡಗಿಸಿಕೊಂಡ ಅಸಂಖ್ಯಾತ ಕಾರ್ಯಕರ್ತರು ಮನೆ ನಿರ್ಮಾಣ ಕಾರ್ಯದPಲ್ಲಿ ಕೂಜೋಡಿಸಿದ್ದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡರ ಉಪಸ್ಥಿತಿಯಲ್ಲಿ ಇತ್ತೀಚೆಗೆ ಗೃಹಪ್ರವೇಶ ಸಮಾರಂಭ ನಡೆಸಲಾಯಿತು. ಆರೆಸ್ಸೆಸ್ ಅಖಿಲ ಭಾರತ ಕಾರ್ಯಕಾರಿ ಸಮಿತಿ ಸದಸ್ಯ ಕಜಂಪಾಡಿ ಸಉಬ್ರಹ್ಮಣ್ಯ ಭಟ್ ಭಾರತ ಮಾತಾ ಪೂಜನ ಕಾರ್ಯಕ್ರಮ ನಡೆಸಿಕೊಟ್ಟರು. ಆರೆಸ್ಸೆಸ್ ಮಂಗಳೂರು ವಿಭಾಗ ಸಂಘ ಚಾಲಕ್ ಗೋಪಾಲ ಚೆಟ್ಟಿಯಾರ್ ಪೆರ್ಲ, ಎಣ್ಮಕಜೆ ಗ್ರಾಪಂ ಅಧ್ಯಕ್ಷ ಸೋಮಶೇಖರ ಜೆ.ಎಸ್, ಮಂಜೇಶ್ವರ ಬ್ಲಾಕ್ ಪಂಚಾಯಿತಿ ಸದಸ್ಯರಾದ ಬಟ್ಟುಶೆಟ್ಟಿ ಕಾಟುಕುಕ್ಕೆ, ಕೆ.ಪಿ ಅನಿಲ್ ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯೆ ಇಂದಿರಾ ಉಪಸ್ಥಿತರಿದ್ದರು. ಟಿ. ಪ್ರಸಾದ್ ಸ್ವಾಗತಿಸಿ, ಪ್ರಶಾಂತ್ ವಂದಿಸಿದರು.