HEALTH TIPS

ಒಪ್ಪಂದ ಆಗುವವರೆಗೂ ಚೀನಾದೊಂದಿಗೆ ಗಡಿ ವಿವಾದ ಮುಂದುವರಿಯುತ್ತದೆ: ಎಂ.ಎಂ. ನರವಣೆ

               ನವದೆಹಲಿ: ಭಾರತ ಮತ್ತು ಚೀನಾ ಗಡಿಯಲ್ಲಿ ವರದಿಯಾಗುತ್ತಿರುವ ಘಟನೆಗಳು, ಎರಡೂ ದೇಶಗಳ ನಡುವೆ ಗಡಿ ಒಪ್ಪಂದ ಆಗುವವರೆಗೂ ನಡೆಯುತ್ತಲೇ ಇರುತ್ತವೆ ಎಂದು ಸೇನಾಪಡೆ ಮುಖ್ಯಸ್ಥ ಎಂ.ಎಂ. ನರವಣೆ ಗುರುವಾರ ಹೇಳಿದ್ದಾರೆ.

            ಉತ್ತರಾಖಂಡದ ಬಾರ್‌ಹೋತಿ ಸೆಕ್ಟರ್ ಬಳಿ ಚೀನಾದ 'ಪೀಪಲ್ಸ್ ಲಿಬರೇಷನ್ ಆರ್ಮಿಯು (ಪಿಎಲ್‌ಎ)' ಕಳೆದ ತಿಂಗಳು ವಾಸ್ತವಿಕ ನಿಯಂತ್ರಣ ರೇಖೆಯನ್ನು (ಎಲ್‌ಎಸಿ) ಉಲ್ಲಂಘಿಸಿ ಭಾರತದ ಪ್ರದೇಶದೊಳಗೆ ಪ್ರವೇಶಿಸಿದೆ ಎಂದು ವರದಿಯಾಗಿದೆ.

                ವಾಣಿಜ್ಯ ಮತ್ತು ಉದ್ಯಮ ಪಿಎಚ್‌ಡಿ ಛೇಂಬರ್‌ನ ವಾರ್ಷಿಕ ಸಭೆಯಲ್ಲಿ ಚೀನಾ ಕುರಿತು ಮಾತನಾಡಿದ ನರವಣೆ, ʼನಾವು ಪ್ರಮುಖ ಗಡಿ ವಿವಾದ ಹೊಂದಿದ್ದೇವೆ. ಈ ಹಿಂದಿನಂತೆ ಸಂಭವಿಸಬಹುದಾದ ಯಾವುದೇ ದುಷ್ಕೃತ್ಯವನ್ನು ಎದುರಿಸಲು ನಾವು ಅತ್ಯುತ್ತಮವಾಗಿ ತಯಾರಿ ಮಾಡಿಕೊಂಡಿದ್ದೇವೆʼ ಎಂದು ಹೇಳಿದ್ದಾರೆ.

           ʼದೀರ್ಘಾವಧಿಯ ಪರಿಹಾರವನ್ನು ಕಂಡುಕೊಳ್ಳುವವರೆಗೂ ಇಂತಹ ಘಟನೆಗಳು (ಗಡಿ ಸಂಘರ್ಷ) ನಡೆಯುತ್ತಲೇ ಇರುತ್ತವೆ. ಗಡಿ ಒಪ್ಪಂದ ಆಗಬೇಕು. ಅದು ನಮ್ಮ ಪ್ರಯತ್ನಗಳಿಗೆ ಉತ್ತೇಜನ ನೀಡುವಂತಿರಬೇಕು. ಇದರಿಂದ ಉತ್ತರ (ಚೀನಾ) ಗಡಿಯಲ್ಲಿ ಶಾಶ್ವತವಾಗಿ ಶಾಂತಿ ನೆಲೆಸಲು ಸಾಧ್ಯʼ ಎಂದು ತಿಳಿಸಿದ್ದಾರೆ.

             ಇದೇ ವೇಳೆ ಅಫ್ಗಾನಿಸ್ತಾನದ ಸನ್ನಿವೇಶವನ್ನು ಉಲ್ಲೇಖಿಸಿ, ಭಾರತೀಯ ಸೇನೆ ಅಥವಾ ರಕ್ಷಣಾ ಪಡೆಗಳು ಭಯೋತ್ಪಾದನೆ ಬೆದರಿಕೆ ಬಗ್ಗೆ ನಿಗಾ ವಹಿಸಲಿವೆ. ಅದಕ್ಕೆ ಅನುಗುಣವಾಗಿ ಅಗತ್ಯ ಕಾರ್ಯತಂತ್ರಗಳನ್ನು ರೂಪಿಸಲಾಗುವುದು. ಇದು ನಿರಂತರವಾದ ಪ್ರಕ್ರಿಯೆಯಾಗಿದ್ದು, ಎಂದಿಗೂ ನಿಲ್ಲುವುದಿಲ್ಲ ಎಂದು ತಿಳಿಸಿದ್ದಾರೆ.

               ತಾಲಿಬಾನ್‌ ಸಂಘಟನೆ ಆಗಸ್ಟ್‌ 15 ರಂದು ಅಫ್ಗಾನಿಸ್ತಾನದ ಆಡಳಿತವನ್ನು ವಶಕ್ಕೆ ಪಡೆದಿತ್ತು. ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ನರವಣೆ, ಭಾರತೀಯ ಸೇನೆಯು ಎಲ್ಲ ರೀತಿಯ ಸವಾಲುಗಳನ್ನು ಎದುರಿಸಲು ಸಜ್ಜಾಗಿದೆ ಎಂದಿದ್ದಾರೆ.

             ʼನಾವು ಜಮ್ಮು ಮತ್ತು ಕಾಶ್ಮೀರಲ್ಲಿ ಅತ್ಯಂತ ಪ್ರಬಲ ಉಗ್ರ ನಿಗ್ರಹ ಜಾಲವನ್ನು ಹೊಂದಿದ್ದೇವೆ. ಭಾರತದಲ್ಲಿ ಉಗ್ರ ಚಟುವಟಿಕೆಗಳನ್ನು ಹೆಚ್ಚಿಸುವ ಉದ್ದೇಶ ಹೊಂದಿರುವ ನಮ್ಮ ಪಶ್ಚಿಮ ನೆರೆ ರಾಷ್ಟ್ರದ (ಪಾಕಿಸ್ತಾನದ) ಪ್ರಯತ್ನಗಳಿಗೆ ಪ್ರತಿಯಾಗಿ ಕಾರ್ಯತಂತ್ರ ರೂಪಿಸಲಾಗಿದೆʼ ಎಂದು ಹೇಳಿದ್ದಾರೆ.

               ಪಾಂಗಾಂಗ್‌ ಸರೋವರ ಪ್ರದೇಶದಲ್ಲಿ ಕಳೆದ ವರ್ಷ ಮೇ ತಿಂಗಳಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯ ಬಳಿಕ ಭಾರತ-ಚೀನಾ ಗಡಿ ವಿವಾದ ಉಲ್ಬಣಿಸಿದೆ. ಅದಾದ ಬಳಿಕ ಉಭಯ ಬಣಗಳು ಗಡಿಯಲ್ಲಿ ಸೈನಿಕರು ಮತ್ತು ಶಸ್ತ್ರಾಸ್ತ್ರ ಜಮಾವಣೆಯನ್ನು ಹೆಚ್ಚಿಸಿವೆ.

              ಜುಲೈನಲ್ಲಿ ಸಂಭವಿಸಿದ ಗಾಲ್ವನ್‌ ಕಣಿವೆ ಸಂಘರ್ಷದ ನಂತರ ಬಿಕ್ಕಟ್ಟು ಮತ್ತಷ್ಟು ಉಲ್ಬಣಿಸಿದೆ.‌ ಈ ಸಂಘರ್ಷದಲ್ಲಿ ಭಾರತದ ಇಪ್ಪತ್ತಕ್ಕೂ ಹೆಚ್ಚು ಸೈನಿಕರು ಮೃತಪಟ್ಟಿದ್ದರು. ಇದೇ ವೇಳೆ ತಮ್ಮ ಸೇನೆಯ ಐವರು ಯೋಧರಷ್ಟೇ ಮೃತಪಟ್ಟಿದ್ದಾರೆ ಎಂದು ಚೀನಾ ಹೇಳಿಕೆ ನೀಡಿತ್ತು. ಆದರೆ, ಚೀನಾ ಪಡೆಯಲ್ಲಿ ಅದಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಸಾವು ಸಂಭವಿಸಿದೆ ಎನ್ನಲಾಗಿದೆ.

              ಎರಡೂ ಪಡೆಗಳು ಸದ್ಯ ಸುಮಾರು 50,000 ರಿಂದ 60,000 ಸಾವಿರ ಸೈನಿಕರನ್ನು ಎಲ್‌ಎಸಿಯುದ್ದಕ್ಕೂ ನಿಯೋಜಿಸಿವೆ.

              2017ರಲ್ಲಿ ದೋಕ್ಲಮ್‌ ಪ್ರದೇಶದಲ್ಲಿ ಭಾರತ ಮತ್ತು ಚೀನಾ ಸೇನೆಗಳು 73 ದಿನಗಳ ಕಾಲ ಜಮಾವಣೆಗೊಂಡಿದ್ದವು. ಉಭಯ ಬಣಗಳು ಪರಮಾಣು ಶಸ್ತ್ರಾಸ್ತ್ರ ಹೊಂದಿರುವುದರಿಂದ ಯುದ್ಧದ ಭೀತಿ ಆವರಿಸಿತ್ತು.

            ಭಾರತ ಮತ್ತು ಚೀನಾ ಗಡಿವಿವಾದ ಸುಮಾರು 3,488 ಉದ್ದದ ವಾಸ್ತವಿಕ ನಿಯಂತ್ರಣ ರೇಖೆಯನ್ನು ಒಳಗೊಂಡಿದೆ. ಅರುಣಾಚಲ ಪ್ರದೇಶವು ದಕ್ಷಿಣ ಟಿಬೆಟ್‌ಗೆ ಸೇರಿದ್ದಾಗಿದೆ ಎಂದು ಚೀನಾ ವಾದಿಸುತ್ತಿದೆ. ಭಾರತ ತಿರುಗೇಟು ನೀಡುತ್ತಾ ಬಂದಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries