HEALTH TIPS

ಕೊರೊನಾ ಸೋಂಕಿತ ತಾಯಂದಿರಿಗೆ ಜನಿಸಿದ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ; ಅಧ್ಯಯನ

                ನವದೆಹಲಿ: ಕೊರೊನಾ ಸೋಂಕಿಗೆ ತುತ್ತಾದ ಮಹಿಳೆಯರಿಗೆ ಜನಿಸಿದ ನವಜಾತ ಶಿಶುಗಳಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇರುವುದಾಗಿ ಮೆಟರ್ನ್ ಫೀಟರ್ ಅಂಡ್ ನಿಯೋನೇಟಲ್ ಮೆಡಿಸಿನ್ ಜರ್ನಲ್‌ನಲ್ಲಿ ಪ್ರಕಟಿಸಲಾದ ಹೊಸ ಅಧ್ಯಯನ ತಿಳಿಸಿದೆ.

            ಇಸ್ರೇಲ್‌ನ ಮಯನೀ ಹಯೇಷು ಮೆಡಿಕಲ್ ಸೆಂಟರ್‌ನಲ್ಲಿ ಅಧ್ಯಯನ ನಡೆಸಲಾಗಿದ್ದು, 2471 ಮಹಿಳೆಯರಲ್ಲಿ ತಮ್ಮ ಗರ್ಭಾವಸ್ಥೆಯ ಮೂರನೇ ತ್ರೈಮಾಸಿಕದಲ್ಲಿ, ಕೊರೊನಾ ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ ಮಗುವಿನ ಆರೋಗ್ಯದಲ್ಲಿ ಕೆಲವು ಪ್ರಮುಖ ಆರೋಗ್ಯ ಬದಲಾವಣೆಗಳು ಕಂಡುಬರುವುದಾಗಿ ಸಂಶೋಧಕರು ತಿಳಿಸಿದ್ದಾರೆ.

           ಹೆರಿಗೆ ಸಮಯದಲ್ಲಿ ಅತಿಯಾದ ರಕ್ತಸ್ರಾವ, ನವಜಾತ ಶಿಶುವಿನಲ್ಲಿ ಮಧುಮೇಹ, ಬಿಳಿ ರಕ್ತಕಣಗಳ ಕೊರತೆ, ಶ್ವಾಸಕೋಶದ ಸಮಸ್ಯೆಗಳು ಕಂಡುಬರುತ್ತವೆ ಎಂದು ತಿಳಿಸಿದ್ದಾರೆ.

          ಗರ್ಭಾವಸ್ಥೆಯ ಮೂರನೇ ತ್ರೈಮಾಸಿಕದಲ್ಲಿ ಕಾಣಿಸಿಕೊಳ್ಳುವ ಕೊರೊನಾ ಸೋಂಕು ಕೆಲವು ವೈದ್ಯಕೀಯ ಪರಿಣಾಮಗಳನ್ನು ಬೀರುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಗರ್ಭಾವಸ್ಥೆ ಸಮಯದಲ್ಲಿ ಕೊರೊನಾ ಕಾಣಿಸಿಕೊಂಡ ಮಹಿಳೆಯರಲ್ಲಿ ಸಿಜೇರಿಯನ್ ಪ್ರಮಾಣ ಹೆಚ್ಚುತ್ತದೆ ಎಂಬ ಅಂಶ ನಮ್ಮ ವಿಶ್ಲೇಷಣೆಯಲ್ಲಿ ಕಂಡುಬಂದಿಲ್ಲ. ಆರೋಗ್ಯವಂತ, ಲಕ್ಷಣರಹಿತ ಕೊರೊನಾ ಸೋಂಕಿತೆ, ರೋಗಲಕ್ಷಣ ಹೊಂದಿರುವ ಕೊರೊನಾ ಸೋಂಕಿತೆ- ಈ ಮೂರು ಗುಂಪುಗಳಲ್ಲಿ ಅವಧಿಗೆ ಮುನ್ನವೇ ಹೆರಿಗೆಯಾಗುವ ಸನ್ನಿವೇಶ ಕಂಡುಬಂದಿಲ್ಲ ಎಂದು ಸಂಶೋಧಕ ಡಾ. ಎಲಿಯಾರ್ ಎಲಿಯಾಸಿ ತಿಳಿಸಿದ್ದಾರೆ.

          ಗರ್ಭಾವಸ್ಥೆಯ ಯಾವುದೇ ಹಂತದಲ್ಲಿಯೂ ಗರ್ಭಿಣಿಯರು ಕೊರೊನಾ ಸೋಂಕಿನ ವಿರುದ್ಧ ಲಸಿಕೆ ಪಡೆಯಲೇಬೇಕಾದ ಅಗತ್ಯವನ್ನು ಈ ಅಧ್ಯಯನ ಒತ್ತಿ ಹೇಳುತ್ತಿದೆ ಎಂದು ಎಲಿಯಾರ್ ಹೇಳಿದ್ದಾರೆ.

2020ರ ಮಾರ್ಚ್ 26ರಿಂದ ಸೆಪ್ಟೆಂಬರ್ 30ರವರೆಗೆ ಆಸ್ಪತ್ರೆಗಳಲ್ಲಿ ಜನಿಸಿದ ಶಿಶುಗಳ ಆರೋಗ್ಯವನ್ನು ಗಮನಿಸಲಾಗಿದೆ. ಹೆರಿಗೆ ವಾರ್ಡ್‌ಗೆ ದಾಖಲಾದ 93% ಮಹಿಳೆಯರು ಕೊರೊನಾ ಸೋಂಕನ್ನು ಹೊಂದಿರಲಿಲ್ಲ. ಆದರೆ ಕೊರೊನಾ ಸೋಂಕು ಹೊಂದಿದ್ದ 67% ಮಹಿಳೆಯರಿಗೆ ಸೋಂಕು  ಲಕ್ಷಣರಹಿತವಾಗಿತ್ತು.

                 ರೋಗಲಕ್ಷಣವಿಲ್ಲದ ಕೊರೊನಾ ಸೋಂಕಿತ ಮಹಿಳೆಯರಲ್ಲಿ ಸಂಭವನೀಯ ಪ್ರತಿಕೂಲ ಪರಿಣಾಮಗಳ ಅಪಾಯವು 13.8% ಹೆಚ್ಚಿದ್ದು, ರೋಗಲಕ್ಷಣವಿರುವ ಕೊರೊನಾ ಸೋಂಕಿತರಲ್ಲಿ ಈ ಪ್ರಮಾಣ 19.6% ಇದೆ ಎಂದು ಅಧ್ಯಯನ ತಿಳಿಸಿದೆ.

           ಗರ್ಭಾವಸ್ಥೆಯಲ್ಲಿ ಮಗುವಿನ ಮೇಲೆ ಕೊರೊನಾ ಪರಿಣಾಮಗಳ ಕುರಿತು ಇನ್ನಷ್ಟು ಹೆಚ್ಚಿನ ದತ್ತಾಂಶದ ಅವಶ್ಯಕತೆಯಿದೆ. ರೋಗಲಕ್ಷಣವಿರುವ, ಸೋಂಕಿಲ್ಲದ ಗರ್ಭಿಣಿಯರ ನವಜಾತ ಶಿಶುಗಳ ಆರೋಗ್ಯದಲ್ಲಿನ ವ್ಯತ್ಯಾಸವನ್ನು ಕಂಡುಕೊಳ್ಳುವ ಅವಶ್ಯಕತೆಯಿದೆ ಎಂದು ಹೇಳಿದ್ದಾರೆ.

ಗರ್ಭಿಣಿಯರಿಗೆ ಕೊರೊನಾ ಸೋಂಕು ತಗುಲುವ ಸಾಧ್ಯತೆ ಹೆಚ್ಚಾಗಿದೆ ಹಾಗೂ ಅವರಲ್ಲಿ ಮಧ್ಯಮದಿಂದ ತೀವ್ರತರ ಸೋಂಕಿನ ಪರಿಣಾಮ ಕಂಡುಬರಬಹುದು ಎಂದು ಈಚೆಗಷ್ಟೆ ಐಸಿಎಂಆರ್ ಅಧ್ಯಯನ ತಿಳಿಸಿತ್ತು. ಹೀಗಾಗಿ ಗರ್ಭಿಣಿಯರಿಗೆ ವೈದ್ಯಕೀಯ ಆರೈಕೆ ಹೆಚ್ಚು ಅವಶ್ಯಕವಾಗಿರುವುದಾಗಿ ಹೇಳಿತ್ತು.

           'ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್‌'ನಲ್ಲಿ ಪ್ರಕಟವಾದ ಈ ಅಧ್ಯಯನ, ಗರ್ಭಿಣಿಯರಲ್ಲಿ ಕೊರೊನಾ ಸೋಂಕು ತೀವ್ರತರವಾಗಿ ಪರಿಣಾಮ ಬೀರಿದರೆ ಅವಧಿಗೆ ಮುನ್ನವೇ ಹೆರಿಗೆ ಅಥವಾ ಅಧಿಕ ರಕ್ತದೊತ್ತಡದ ಸಮಸ್ಯೆ ಕಾಣಿಸಿಕೊಳ್ಳಬಹುದಾಗಿದೆ ಎಂದು ಉಲ್ಲೇಖಿಸಿತ್ತು.

ಗರ್ಭಿಣಿಯರಿಗೆ ಸೋಂಕು ತಗುಲುವ ಅಪಾಯದ ಹಿನ್ನೆಲೆಯಲ್ಲಿ ಅವರಿಗೆ ಕೊರೊನಾ ಲಸಿಕೆಯನ್ನು ದೇಶದಲ್ಲಿ ಆದ್ಯತೆಯಲ್ಲಿ ನೀಡಲಾಗುತ್ತಿದೆ. ಗರ್ಭಿಣಿಯರಿಗೆ, ಹಾಲುಣಿಸುವ ತಾಯಂದಿರಿಗೆ ಕಡ್ಡಾಯವಾಗಿ ಲಸಿಕೆ ತೆಗೆದುಕೊಳ್ಳಲು ಸೂಚಿಸಲಾಗಿದೆ. ಪ್ರತಿಯೊಬ್ಬ ಗರ್ಭಿಣಿಯೂ ಕಡ್ಡಾಯವಾಗಿ ಕೊರೊನಾ ಲಸಿಕೆಯನ್ನು ಹಾಕಿಸಿಕೊಳ್ಳಬೇಕು ಎಂದು ದಿ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಬೋರ್ಡ್ (ಸಿಡಿಸಿ) ಸೂಚನೆ ನೀಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries