ಮಧೂರು: ಮಧೂರು ಗ್ರಾ.ಪಂ.ವ್ಯಾಪ್ತಿಯ ಸಿರಿಬಾಗಿಲು ಗ್ರಾಮದ ಪುಳ್ಕೂರು ಎಂಬಲ್ಲಿ ಸುಮಾರು 150ಕ್ಕೂ ಹೆಚ್ಚು ವರ್ಷಗಳಿಂದ ಇಲ್ಲಿಯ ಭೂ ಮಾಲಿಕರೊಬ್ಬರು 4 ಎಕ್ರೆಯಷ್ಟು ಭೂಮಿಯನ್ನು ಕೊರಗ ಸಮುದಾಯದ ಜನರಿಗೆ ವಾಸಿಸಲು ಬಾಯಿಮಾತಿನಲ್ಲಿ ನೀಡಿದ್ದರು. ಇಲ್ಲಿ ತಲೆತಲಾಂತರಗಳಿಂದ ವಾಸಿಸುತ್ತಿರುವ ಸುಮಾರು 24ರಷ್ಟು ಕುಟುಂಬಗಳಿವೆ. ಆದರೆ ಇವರ ಭೂ ಒಡೆತನಕ್ಕೆ ಸಂಬಂಧಿಸಿ ಯಾವುದೇ ದಾಖಲೆಗಳಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.
ಈ ಕಾಲನಿಯಲ್ಲಿ ವಾಸಿಸುವ 80ಕ್ಕಿಂತಲೂ ಮಿಕ್ಕಿದ ಜನರು ಕುಟುಂಬ ನಿರ್ವಹಣೆಗಾಗಿ ಕೂಲಿ-ನಾಲಿ ಮಾಡಿಸುವ ಸಾಮಾನ್ಯ ಜನರಾಗಿದ್ದಾರೆ. ಹಿರಿಯ ತಲೆಮಾರಿನ ಜನರು ಪಾರಂಪರಿಕ ವೃತ್ತಿಯಾದ ಬುಟ್ಟಿ-ಚಾಪೆ ಹಣೆಯುವ ಕಾಯಕದಲ್ಲಿ ನಿರತರಾಗಿದ್ದು, ಕಚ್ಚಾವಸ್ತುಗಳ ಲಭದ್ಯತೆಯ ಕೊರತೆ ಭೀತಿಗೊಳಪಡಿಸಿದೆ. ಭೂ ಹಕ್ಕು ಪತ್ರಗಳಿಲ್ಲದಿರುವುದರಿಂದ ಗ್ರಾ.ಪಂ. ಮೂಲಕ ಲಭಿಸಬೇಕಾದ ವಿವಿಧ ಸರ್ಕಾರಿ ಸವಲತ್ತುಗಳು ಲಭ್ಯವಾಗುತ್ತಿಲ್ಲ. ಹೊಸ ತಲೆಮಾರಿನ ಜನರಿಗೆ ವಿದ್ಯಾಭ್ಯಾಸದ ಕೊರತೆಯೂ ಇದೆ.
ಕಾಲನಿ ನಿವಾಸಿಗಳ ಸಂಕಷ್ಟ ಸ್ಥಿತಿಯನ್ನು ಗಮನಿಸಿ ಕಾಲನಿ ನಿವಾಸಿಗಳಿಗೆ ಭೂ ಹಕ್ಕುಪತ್ರಗಳನ್ನು ಒದಗಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ಸಂಜೀವ ಪುಳ್ಕೂರು ಅವರು ರಾಜ್ಯ ಕಂದಾಯ ಸಚಿವರಿಗೆ, ಪ.ವರ್ಗ ಕಲ್ಯಾಣ ಸಚಿವರಿಗೆ, ಜಿಲ್ಲಾಧಿಕಾರಿ ಹಾಗೂ ಲ್ಯಾಂಡ್ ಟ್ರಿಬ್ಯೂನಲ್ ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.