ಕೊರೊನಾ ವಿರುದ್ಧ ಹೋರಾಡುವ ಬಹುನಿರೀಕ್ಷಿತ ನಾಸಲ್ ಸ್ಪ್ರೇ ಲಸಿಕೆಯ ಕುರಿತು ವಿವಿಧ ಕಂಪೆನಿಗಳಲ್ಲಿ ಪ್ರಯೋಗದ ಹಂತದಲ್ಲಿರುವುದು ಎಲ್ಲರಿಗೂ ತಿಳಿದೇ ಇದೆ. ಈ ಮಧ್ಯೆ ಸ್ವಲ್ಪ ನಿಟ್ಟುಸಿರು ಬಿಡುವಂತಹ ಸುದ್ದಿಯೊಂದು ನಡೆದಿದೆ. ಅದೇ ನಮ್ಮ ದೇಶದಲ್ಲಿ ನಾಸಲ್ ಸ್ಪ್ರೇ ಲಸಿಕೆಯ ಮಾನವ ಪ್ರಯೋಗ ನಡೆಸಲು ಅನುಮತಿ ದೊರೆತಿದೆ. ಹಾಗಾದ್ರೆ ಬನ್ನಿ, ಈ ನಾಸಲ್ ಸ್ಪ್ರೇ ಲಸಿಕೆ ತಯಾರಿಕೆ ಯಾವ ಹಂತದಲ್ಲಿ ಇದೆ ಅನ್ನೋದನ್ನ ನೋಡ್ಕೊಂಡು ಬರೋಣ.
ವಿವಿಧ ದೇಶಗಳಲ್ಲಿ ನಾಸಲ್ ಸ್ಪ್ರೇ ಲಸಿಕೆ ಕುರಿತು ಆಗುತ್ತಿರುವ ಅಭಿವೃದ್ಧಿಯ ಕುರಿತ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ: ಸದ್ಯ ನಮ್ಮ ದೇಶದಲ್ಲಿ ಕೊರೊನಾ ವಿರುದ್ಧ ಇರುವ ನಾಸಲ್ ಸ್ಪ್ರೇಯ ಮಾನವ ಪ್ರಯೋಗಗಳನ್ನು ಮಾಡಲು ಮಹಾರಾಷ್ಟ್ರದ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ (ಜಿಎಂಸಿಎಚ್) ಔಷಧ ವಿಭಾಗಕ್ಕೆ ಅನುಮೋದನೆ ಸಿಕ್ಕಿದೆ. ಈ ಮೂಲಕ ಬಹುನಿರೀಕ್ಷಿತ ನೈಟ್ರಿಕ್ ಆಕ್ಸೈಡ್ ನಾಸಲ್ ಸ್ಪ್ರೇ ಭಾರತದಲ್ಲಿ ಪ್ರಯೋಗ ಆರಂಭಿಸಲಿದೆ. ಏನಿದು ನಾಸಲ್ ಸ್ಪ್ರೇ ಲಸಿಕೆ: ಗ್ಲೆನ್ಮಾರ್ಕ್ ಫಾರ್ಮಾಸ್ಯುಟಿಕಲ್ಸ್ ಮತ್ತು ಕೆನಡಿಯನ್ ಬಯೋಟೆಕ್ ಸಂಸ್ಥೆ ಸ್ಯಾನೋಟೈಜ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಕಾರ್ಪೊರೇಷನ್ ಸಂಸ್ಥೆ ಈ ನಾಸಲ್ ಸ್ಪ್ರೇಯನ್ನು ಅಭಿವೃದ್ಧಿಪಡಿಸಿದ್ದು, ಈ ಸ್ಪ್ರೇ ಸೌಮ್ಯವಾದ ಕೋವಿಡ್ ಸೋಂಕನ್ನು ಮಧ್ಯಮ/ತೀವ್ರ ರೋಗಕ್ಕೆ ಹೋಗುವುದನ್ನು ತಡೆಯುತ್ತದೆ ಎಂದು ಸಂಸ್ಥೆ ತಿಳಿಸಿದೆ. ಆರ್‌ಟಿ-ಪಿಸಿಆರ್ ಟೆಸ್ಟ್‌ನಲ್ಲಿ ಪಾಸಿಟಿವ್ ಬಂದ 48 ಗಂಟೆಗಳ ನಂತರ, ಈ ಸ್ಪ್ರೇ ಅನ್ನು ದಿನಕ್ಕೆ ಆರು ಬಾರಿ( ಎರಡು ಗಂಟೆಯ ಅಂತರದಂತೆ) ಮೂರು ದಿನಗಳವರೆಗೆ ಬಳಸುವುದರಿಂದ ತಮ್ಮನ್ನು ತಾವು ಗುಣಪಡಿಸಿಕೊಳ್ಳಬಹುದು ಎಂದು ತಯಾರಿಕಾ ಸಂಸ್ಥೆ ಹೇಳಿದೆ. ಸದ್ಯ ಈ ಪ್ರಯೋಗಕ್ಕೆ 90 ಕೋವಿಡ್ ರೋಗಿಗಳನ್ನು ಒಳಪಡಿಸುತ್ತಿದ್ದು, ಅವರಲ್ಲಿ 45 ಜನರಿಗೆ ಮೂಗಿನ ಸ್ಪ್ರೇ ಚಿಕಿತ್ಸೆಯನ್ನು ನೀಡಲಾಗುತ್ತದೆ. ಸ್ಪ್ರೇ ನೀಡಿದ ರೋಗಿಗಳಿಗೆ ಪ್ರತಿದಿನ ಆರ್‌ಟಿ-ಪಿಸಿಆರ್ ಟೆಸ್ಟ್‌ನಡೆಸಲಾಗುತ್ತದೆ, ಜೊತೆಗೆ ಚಿಕಿತ್ಸೆಯ ಎಂಟನೇ ದಿನ ಸೋಂಕಿನ ಪ್ರಮಾಣವನ್ನು ಅರಿಯಲು ಆರ್‌ಟಿ-ಪಿಸಿಆರ್ ಟೆಸ್ಟ್ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2022ರಲ್ಲಿ ಜಪಾನ್‌ನ ನಾಸಲ್ ಸ್ಪ್ರೇಯ ಕ್ಲಿನಿಕಲ್ ಪ್ರಯೋಗ: ಇದರ ನಡುವೆ ಜಪಾನ್‌ನ ಲಸಿಕಾ ತಯಾರಿಕಾ ಸಂಸ್ಥೆ ಶಿಯೋನೋಗಿಯು ತನ್ನ ನಾಸಲ್ ಸ್ಪ್ರೇ ಲಸಿಕೆಯ ಕ್ಲಿನಿಕಲ್ ಪ್ರಯೋಗನವನ್ನು 2022ರಲ್ಲಿ ನಡೆಸಲಿದೆ ಎಂದು ಹೇಳಿಕೊಂಡಿದೆ. ಇದು ಯಾವುದೇ ಲಕ್ಷಣಗಳಿಲ್ಲದ ಅಥವಾ ಸೌಮ್ಯ ಲಕ್ಷಣಗಳಿರುವ ವ್ಯಕ್ತಿಗೆ ಪಾಲಿಸ್ಯಾಕರೈಡ್ ವಸ್ತುವನ್ನು ಬಳಸಿ, ಲಸಿಕೆಯನ್ನು ಮೂಗಿನ ಮೂಲಕ ತಲುಪಿಸಿ, ಉಸಿರಾಟದ ವ್ಯವಸ್ಥೆಯಲ್ಲಿ ರೋಗನಿರೋಧಕ ಶಕ್ತಿಯನ್ನು ಉಂಟುಮಾಡುತ್ತದೆ. ಇದರ ಜೊತೆಗೆ ಪ್ರತ್ಯೇಕವಾಗಿ ಇಂಜೆಕ್ಷನ್ ರೀತಿ ನೀಡುವ ಲಸಿಕೆಯ ಕ್ಲಿನಿಕಲ್ ಪ್ರಯೋಗಕ್ಕೂ ತಯಾರಿ ನಡೆಸುತ್ತಿದೆ ಎಂದು ಕಂಪನಿ ಹೇಳಿಕೊಂಡಿದೆ.ಕ್ಲಿನಿಕಲ್ ಪ್ರಯೋಗದಲ್ಲಿದೆ ಎಂಟು ನಾಸಲ್ ಸ್ಪ್ರೇಗಳು: ಈ ಮಧ್ಯೆ ಕೋವಿಡ್ ತಡೆಗಟ್ಟಿ, ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಹಾಗೂ ಕೊರೊನಾದಿಂದ ಗುಣಮುಖರಾಗುವಂತೆ ಮಾಡುವ ಎಂಟು ಮೂಗಿನ ಸ್ಪ್ರೇ ಲಸಿಕೆಗಳ ಕ್ಲಿನಿಕಲ್ ಪ್ರಯೋಗ ನಡೆಯುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಚೀನಾದ ಕ್ಸಿಯಾಮೆನ್ ವಿಶ್ವವಿದ್ಯಾಲಯ, ಹಾಂಗ್ ಕಾಂಗ್ ವಿಶ್ವವಿದ್ಯಾಲಯ ಮತ್ತು ಬೀಜಿಂಗ್ ವಂಟೈ ಬಯೋಲಾಜಿಕಲ್ ಫಾರ್ಮಸಿ ಈವರೆಗಿನ ಅತ್ಯಾಧುನಿಕ ಪ್ರಯತ್ನವು ಹಂತ -2ರ ಪ್ರಯೋಗಗಳನ್ನು ಪೂರ್ಣಗೊಳಿಸಿದೆ ಎಂದು ಡಬ್ಲ್ಯೂಎಚ್ಒ ತಿಳಿಸಿದೆ. ಕೊರೊನಾ ಸಾಮಾನ್ಯವಾಗಿ ಮೂಗಿನ ಮೂಲಕವೇ ದೇಹ ಪ್ರವೇಶಿಸುವುದರಿಂದ, ಮೂಗಿನ ಸ್ಪ್ರೇ ಹೆಚ್ಚು ಪರಿಣಾಮಕಾರಿಯಾಗಲಿದೆ ಎಂಬುದು ಈ ಲಸಿಕೆಗಳ ಹಿಂದಿರುವ ಉದ್ದೇಶವಾಗಿದೆ.
ನಾಸಲ್ ಸ್ಪ್ರೇ ಲಸಿಕೆಗೆ ಉತ್ತಮ ಭವಿಷ್ಯ: ಮುಂಬರುವ ದಿನಗಳಲ್ಲಿ ಕೊರೊನಾ ವಿರುದ್ಧ ಹೋರಾಡಲು, ನಾಸಲ್ ಸ್ಪ್ರೇ ಲಸಿಕೆಯು ಉತ್ತಮವಾಗಿ ಕಾರ್ಯನಿರ್ವಹಿಸಲಿದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ. ಹೆಚ್ಚಿನ ಮೂಗಿನ ಸ್ಪ್ರೇ ಲಸಿಕೆಗಳು ಪ್ರಯೋಗಗಳಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಕೊರೊನಾ ವಿರುದ್ಧ ಸಮರ್ಥವಾಗಿ ಹೋರಾಡಲು ಈ ಸ್ಪ್ರೇ ಲಸಿಕೆಗಳು ಸಹಾಯವಾಗಲಿವೆ ಎಂಬುದು ಹೆಚ್ಚಿನವರ ಅಭಿಪ್ರಾಯವಾಗಿದೆ. ಜೊತೆಗೆ ಇದಕ್ಕೆ ಸೂಜಿಯ ಅಗತ್ಯವಿಲ್ಲದಿರುವುದರಿಂದ, ಅಡ್ಡಪರಿಣಾಮಗಳು ಸಹ ಕಡಿಮೆ, ಜೊತೆಗೆ ಬೆಲೆಯಲ್ಲೂ ಅಗ್ಗವಾಗಿರುವುದರಿಂದ ಎಲ್ಲರಿಗೂ ಕೈಗೆಟುಕಬಹುದು.