ಶ್ರೀನಗರ: ನನ್ನನ್ನೂ ಕೊಂದರೂ ಕಾಶ್ಮೀರ ಭಾರತದಲ್ಲಿರುತ್ತದೆಯೇ ಹೊರತು ಎಂದಿಗೂ ಪಾಕಿಸ್ತಾನ ಸೇರುವುದಿಲ್ಲ ಎಂದು ನ್ಯಾಷನಲ್ ಕಾನ್ಪರೆನ್ಸ್ ಅಧ್ಯಕ್ಷ ಫಾರೂಖ್ ಅಬ್ದುಲ್ಲಾ ಹೇಳಿದ್ದಾರೆ.
ಅಕ್ಟೋಬರ್ 7 ರಂದು ಇಲ್ಲಿನ ಗುರುದ್ವಾರದಲ್ಲಿ ಉಗ್ರರ ಗುಂಡಿಗೆ ಬಲಿಯಾದ ಈದ್ಗಾದಲ್ಲಿರುವ ಸರ್ಕಾರಿ ಶಾಲೆಯ ಪ್ರಾಂಶುಪಾಲ ಸುಪಿಂದರ್ ಕೌರ್ ಅವರ ಸಂತಾಪ ಸಭೆಯಲ್ಲಿ ಮಾತನಾಡಿದ ಅಬ್ದುಲ್ಲಾ, ಕಾಶ್ಮೀರದ ಜನರು ಧೈರ್ಯದಿಂದ ಇರಬೇಕು ಮತ್ತು ಒಗ್ಗಟ್ಟಾಗಿ ಕೊಲೆಗಾರರ ವಿರುದ್ಧ ಹೋರಾಡಬೇಕು ಎಂದು ಕರೆ ನೀಡಿದರು.
ನಾವು ಈ ಮೃಗಗಳ ವಿರುದ್ಧ ಹೋರಾಡಬೇಕು, ಏನೇ ಬಂದರೂ ನಾವು ಭಾರತದ ಭಾಗವಾಗಿರಬೇಕು, ಅವರು ನನ್ನನ್ನು ಶೂಟ್ ಮಾಡಿ ಕೊಂದರೂ ಈ ನಿರ್ಧಾರ ಬದಲಾಗಬಾರದು ಎಂದು ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.
ಕೌರ್ ಹತ್ಯೆಗೆ ದುಃಖ ವ್ಯಕ್ತಪಡಿಸಿದ ಅವರು 1990ರಲ್ಲಿ ಭಯದಿಂದ ಎಲ್ಲರಬ ಕಣಿವೆ ರಾಜ್ಯವನ್ನು ತೊರೆದರು ಆದರೆ ಸಿಖ್ ಸಮುದಾಯ ಮಾತ್ರ ಕಾಶ್ಮೀರ ತೊರೆಯಲಿಲ್ಲ, ನಿಮ್ಮ ಬಗ್ಗೆ ನಮಗೆ ಹೆಮ್ಮೆಯಿದೆ, ಏನೇ ಬಂದರು ನಾವು ನಿಮ್ಮ ಜೊತೆಗಿರುತ್ತೇವೆ ಎಂದು ವಿಶ್ವಾಸ ಮಾತುಗಳನ್ನಾಡಿದ್ದಾರೆ.