ಮಂಗಳೂರು: ಮಂಗಳೂರಿನ ಲೇಡಿಗೋಷನ್ ಹೆರಿಗೆ ಆಸ್ಪತ್ರೆ ಯಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮಹಿಳೆ ಸೆಪ್ಟೆಂಬರ್ 28ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮನೆಗೆ ಭಾಗ್ಯಲಕ್ಷ್ಮಿ ಬರುವ ಸಂಭ್ರಮ ಮನೆಯವರಲಿತ್ತು. ಆದರೆ ಮಗುವಿಗೆ ಆರೋಗ್ಯ ಸಮಸ್ಯೆ ಇದ್ದಿದ್ದರಿಂದ ಮಗುವನ್ನು ಎನ್.ಐ.ಸಿ ನಲ್ಲಿ ಇರಿಸಬೇಕೆಂದು ವೈದ್ಯರು ತಿಳಿಸಿದ್ದರು.
ಸತತ 18 ದಿನಗಳ ಕಾಲ ಎನ್.ಐ.ಸಿ ನಲ್ಲಿ ಮಗು ಕೂಡಾ ಇತ್ತು. ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಾಣದ ಹಿನ್ನಲೆಯಲ್ಲಿ ಗಾಬರಿಗೊಂಡ ಪೋಷಕರು, ಮಗುವನ್ನು ಬೇರೆ ಆಸ್ಪತ್ರೆಗೆ ಸೇರಿಸಲು ನಿರ್ಧಾರ ಮಾಡಿದ್ದಾರೆ. ಹೀಗಾಗಿ ಮಗುವನ್ನು ಬೇರೆ ಆಸ್ಪತ್ರೆ ಗೆ ರವಾನಿಸಿದಾಗ ತಾಯಿಗೆ ಆಸ್ಪತ್ರೆ ಸಿಬ್ಬಂದಿ ಹೆಣ್ಣು ಮಗುವಿನ ಬದಲು ಗಂಡುಮಗವನ್ನು ನೀಡಿರೋದು ಬೆಳಕಿಗೆ ಬಂದಿದೆ. ಹೀಗಾಗಿ ಆಸ್ಪತ್ರೆಯವರ ವಿರುದ್ಧ ಮಗುವಿನ ಪೋಷಕರು ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಮಂಗಳೂರಿನ ಸರ್ಕಾರಿ ಲೇಡಿಗೋಶನ್ ಹೆರಿಗೆ ಆಸ್ಪತ್ರೆ ಬಹಳಷ್ಟು ಪ್ರಸಿದ್ದಿ ಪಡೆದ ಆಸ್ಪತ್ರೆ. ಕೇವಲ ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲದೇ ಉಡುಪಿ, ಉತ್ತರಕನ್ನಡ, ಕೊಡಗು, ಚಿಕ್ಕಮಗಳೂರು ಜಿಲ್ಲೆಯ ಜನ ಸಹ ಈ ಆಸ್ಪತ್ರೆಗೆ ಬರ್ತಾರೆ. ಆದರೆ ಇದೀಗ ಈ ಆಸ್ಪತ್ರೆಯಲ್ಲಿ ನವಜಾತ ಶಿಶು ಬದಲಿಸಿದ ಗಂಭೀರ ಆರೋಪ ಕೇಳಿಬಂದಿದೆ.
ಏನಿದು ಘಟನೆ?; ಉಡುಪಿ ಜಿಲ್ಲೆಯ ಕುಂದಾಪುರ ಮೂಲದ ಅಮ್ರೀನಾ ಸೆಪ್ಟೆಂಬರ್ 28ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿ ಸಹ ಹೆಣ್ಣು ಮಗುವೆಂದು ಹೇಳಿದ್ದರು. ಆದರೆ ಶಿಶುವಿಗೆ ಆರೋಗ್ಯ ಸಮಸ್ಯೆ ಇದ್ದುದರಿಂದ ಎನ್.ಐ.ಸಿ.ಯುನಲ್ಲಿ 18 ದಿನಗಳ ಚಿಕಿತ್ಸೆ ನೀಡಲಾಗುತಿತ್ತು. ಆದರೆ ಮಗು ಗುಣಮುಖವಾಗದ ಹಿನ್ನಲೆಯಲ್ಲಿ, ಗಾಬರಿಗೊಂಡ ಮಗುವಿನ ಪೋಷಕರು ಮಗುವನ್ನು ಲೇಡಿಗೋಷನ್ ಆಸ್ಪತ್ರೆಯಿಂದ ಬ್ರಹ್ಮಾವರದ ಆಸ್ಪತ್ರೆಗೆ ರವಾನಿಸುವ ನಿರ್ಧಾರ ಮಾಡಿದ್ದಾರೆ.
ಗುರುವಾರ ಮಗುವನ್ನು ಲೇಡಿಗೋಷನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿ ಉಡುಪಿಯ ಬ್ರಹ್ಮಾವರದ ಆಸ್ಪತ್ರೆಗೆ ಅಂಬುಲೆನ್ಸ್ ನಲ್ಲೇ ತೆಗದುಕೊಂಡು ಹೋಗಲಾಗಿದೆ. ಆದರೆ ಆಸ್ಪತ್ರೆಯಲ್ಲಿ ಪರಿಶೀಲನೆ ಮಾಡುವ ವೇಳೆ ಹೆಣ್ಣು ಮಗುವಿನ ಬದಲಿಗೆ ಗಂಡು ಮಗು ನೀಡಿರೋದು ಬೆಳಕಿಗೆ ಬಂದಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಮಗುವಿನ ತಂದೆ ಮುಸ್ತಾಫಾ, "ಸೆ.27ರಂದು ಬ್ರಹ್ಮಾವರದ ಆಸ್ಪತ್ರೆಗೆ ಪತ್ನಿ ಅಮ್ರೀನಾಳನ್ನು ಹೆರಿಗಾಗಿ ದಾಖಲು ಮಾಡಿದ್ದೆವು. ಆದರೆ ಆಸ್ಪತ್ರೆ ಸಿಬ್ಬಂದಿ ಮಂಗಳೂರಿಗೆ ಕರೆದುಕೊಂಡು ಹೋಗಲು ಹೇಳಿದ ಕಾರಣ ಸೆ.28ರಂದು ಲೇಡಿಗೋಷನ್ ಆಸ್ಪತ್ರೆಗೆ ದಾಖಲು ಮಾಡಿದ್ದೆವು. ಏಳು ತಿಂಗಳಿನಲ್ಲೇ ಹೆರಿಗೆಯಾದ ಕಾರಣ, ಮಗುವಿನ ಆರೋಗ್ಯ, ಮತ್ತು ತೂಕ ವ್ಯತ್ಯಾಸವಿದ್ದ ಕಾರಣ ಮಗುವನ್ನು ಎನ್.ಐ.ಸಿ ಯಲ್ಲಿ ಇಡಲು ವೈದ್ಯರು ಸೂಚಿಸಿದ್ದರು" ಎಂದರು.
"ಮಗು ಎನ್.ಐ.ಸಿ ಯಲ್ಲಿ 18 ದಿನ ಇದ್ದರೂ ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಾಣದ ಹಿನ್ನಲೆಯಲ್ಲಿ ಮಗುವನ್ನು ಬ್ರಹ್ಮಾವರದ ಆಸ್ಪತ್ರೆ ಗೆ ಕರೆತಂದಿದ್ದೇವೆ. ಬ್ರಹ್ಮಾವರದ ಆಸ್ಪತ್ರೆಯಲ್ಲಿ ನೋಡಿದಾಗ ಹೆಣ್ಣು ಮಗುವಿನ ಬದಲಾಗಿ ಗಂಡು ಮಗುವನ್ನು ನೀಡಿರೋದು ಗೊತ್ತಾಗಿದೆ. ತಕ್ಷಣ ಗುರುವಾರ ಗಂಡು ಮಗುವನ್ನು ಕರೆದುಕೊಂಡು ಬಂದ ಮಗುವಿನ ತಂದೆ-ತಾಯಿ ಆ ಮಗುವನ್ನು ಆಸ್ಪತ್ರೆಗೆ ಕೊಟ್ಟು ನಮ್ಮ ಮಗು ಕೊಡಿ ಅಂತಾ ಕೇಳಿದ್ದಾರೆ. ಮಾತ್ರವಲ್ಲದೇ ಬಂದರು ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ. ನಮ್ಮ ಹೆಣ್ಣು ಮಗುವನ್ನು ಕೊಡದೆ ಆರೋಗ್ಯ ಸರಿ ಇಲ್ಲದ ಗಂಡು ಮಗು ಕೊಟ್ಟಿದ್ದಾರೆ. ಆಸ್ಪತ್ರೆ ಕೊಟ್ಟ ದಾಖಲೆಗಳಲ್ಲಿ ಹೆಣ್ಣು ಮಗು ಅಂತಾ ಇದೆ ಎಂದು" ಮುಸ್ತಾಫಾ ಹೇಳಿದ್ದಾರೆ.
ಈ ಪ್ರಕರಣದ ಬಗ್ಗೆ ಲೇಡಿಗೋಷನ್ ಆಸ್ಪತ್ರೆ ಅಧೀಕ್ಷಕ ಡಾ. ದುರ್ಗಾಪ್ರಸಾದ್ ಸ್ಪಷ್ಟನೆ ನೀಡಿದ್ದಾರೆ, "ಮಗು ಅದಲು-ಬದಲು ಆರೋಪ ಸತ್ಯಕ್ಕೆ ದೂರವಾದ ವಿಷಯ. ಆಸ್ಪತ್ರೆ ಸಿಬ್ಬಂದಿ ಅಚಾತುರ್ಯದಿಂದ ದಾಖಲೆಗಳಲ್ಲಿ ಬರೆಯುವಾಗ ತಪ್ಪಾಗಿದೆ. ಅವಸರದಲ್ಲಿ ಗಂಡು ಮಗು ಅನ್ನೋದರ ಬದಲು ಹೆಣ್ಣು ಮಗು ಅಂತ ಉಲ್ಲೇಖಿಸಿದ್ದಾರೆ. ಆಸ್ಪತ್ರೆ ಸಿಬ್ಬಂದಿ ತಪ್ಪನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಅದು ಅವರದ್ದೇ ಮಗು, ನಮ್ಮಲ್ಲಿ ಮಗು ಬದಲಾವಣೆ ಆಗಿಲ್ಲ. ಅಧಿಕ ರಕ್ತದೊತ್ತಡ ಇದ್ದಾಗ ಆ ತಾಯಿ ನಮ್ಮಲ್ಲಿ ದಾಖಲಾಗಿದ್ದಾರೆ. ಪರಿಸ್ಥಿತಿ ಗಂಭೀರ ಇದ್ದಾಗ ನಾವು ಶಸ್ತ್ರಚಿಕಿತ್ಸೆ ಮಾಡಿ ತಾಯಿ, ಮಗುವನ್ನ ಬದುಕಿಸಿದ್ದೇವೆ" ಎಂದರು.
"ಮಗುವಿನ ತೂಕ ಮತ್ತು ಆರೋಗ್ಯದಲ್ಲಿ ಸಮಸ್ಯೆ ಇತ್ತು. ಹೀಗಾಗಿ ತುರ್ತು ಸಂದರ್ಭದಲ್ಲಿ ತಕ್ಷಣ ನಾವು ಮಗುವನ್ನು ಎನ್ ಐಸಿಯುಗೆ ದಾಖಲಿಸಿದ್ದೇವೆ. ಮಕ್ಕಳ ತಜ್ಞರು ಮಗುವನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ. ಈ ವೇಳೆ ತುರ್ತು ಸಂದರ್ಭದಲ್ಲಿ ದಾಖಲೆ ಬರೆಯುವಾಗ ತಪ್ಪಾಗಿದೆ. ಮಗುವನ್ನು ಹುಟ್ಟಿದ ಮೇಲೆ ಸಂಬಂಧಿಕರಿಗೆ ತೋರಿಸಲು ಕೂಡ ನಮಗೆ ಅವಕಾಶ ಸಿಗಲಿಲ್ಲ. ಆದರೆ ದಾಖಲೆ ಬರೆಯುವ ಸಮಯದಲ್ಲಿ ತಪ್ಪಿ ಹೆಣ್ಣು ಮಗು ಅಂತ ಉಲ್ಲೇಖಿಸಲಾಗಿದೆ. ಈ ಬಗ್ಗೆ ತಪ್ಪು ಮಾಡಿದ ಸಿಬ್ಬಂದಿ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ಕೊಡುತ್ತೇವೆ" ಎಂದು ತಿಳಿಸಿದ್ದಾರೆ.
"ದಾಖಲೆಯಲ್ಲಿ ತಪ್ಪು ಮಾಡಿದ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಲಾಗುವುದು. ಆದರೆ ಅವರಿಗೆ ಹೆರಿಗೆಯಾಗಿದ್ದು ಗಂಡು ಮಗು, ಅದಕ್ಕೆ ನಮ್ಮಲ್ಲಿ ಸಾಕ್ಷ್ಯ ಇದೆ. ನಮ್ಮ ಸಿಬ್ಬಂದಿಯಿಂದ ದಾಖಲೆ ಬರೆಯುವಾಗ ತಪ್ಪಾಗಿದ್ದು ಬಿಟ್ಟೆರೆ ಬೇರೇನೂ ಆಗಿಲ್ಲ. ಮಾನವ ಸಹಜ ತಪ್ಪಿನಿಂದ ಈ ಒಂದು ಗೊಂದಲ ಆಗಿದೆ ಅಷ್ಟೇ. ಮಗು ಗಂಡೇ ಎನ್ನುವ ದಾಖಲೆಗಳನ್ನು ನಾವು ಅಗತ್ಯ ಬಿದ್ದರೆ ಹಾಜರುಪಡಿಸುತ್ತೇವೆ" ಎಂದು ಹೇಳಿದ್ದಾರೆ.
ಸದ್ಯ ಈ ಬಗ್ಗೆ ಜಿಲ್ಲಾಧಿಕಾರಿಗಳು ವರದಿ ಕೇಳಿದ್ದಾರೆ. ಇನ್ನು ಆಸ್ಪತ್ರೆಯವರೇ ಹೇಳುವ ರೀತಿ ಸಿಬ್ಬಂದಿ ನಿರ್ಲಕ್ಷ ಅನ್ನೋದು ನಿಜವೇ ಆಗಿದ್ದರೆ ಪೋಷಕರಿಗೆ ನ್ಯಾಯ ಒದಗಿಸಬೇಕಾಗಿದೆ.