ವಾಷಿಂಗ್ಟನ್: ಹಂದಿಯ ಮೂತ್ರಪಿಂಡವನ್ನು ಮನುಷ್ಯನಿಗೆ ತಾತ್ಕಾಲಿಕವಾಗಿ ಜೋಡಿಸುವ ಶಸ್ತ್ರಚಿಕಿತ್ಸೆಯಲ್ಲಿ ಅಮೇರಿಕದ ವೈದ್ಯರ ತಂಡ ಯಶಸ್ವಿಯಾಗಿದ್ದು, ಈ ಕಿಡ್ನಿ ಕಸಿ ಸಂಭಾವ್ಯ ಪವಾಡವಾಗಲಿದೆ ಎಂದು ಶಸ್ತ್ರಚಿಕಿತ್ಸೆ ನೆರವೇರಿಸಿದ ಸರ್ಜನ್ ಹೇಳಿದ್ದಾರೆ.
ಸೆಪ್ಟೆಂಬರ್ 25ರಂದು ಈ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದ್ದು, ಕುಲಾಂತರಿ ದಾನಿ ಪ್ರಾಣಿ ಮತ್ತು ವೆಂಟಿಲೇಟರ್ ಬೆಂಬಲದಲ್ಲಿದ್ದ ಮೆದುಳು ನಿಷ್ಕ್ರಿಯಗೊಂಡ ರೋಗಿಯ ಮೇಲೆ ಈ ಪರೀಕ್ಷೆ ಮಾಡಲಾಗಿತ್ತು. ರೋಗಿಯ ಕುಟುಂಬದವರು ವಿಜ್ಞಾನದ ಮುನ್ನಡೆಯ ದೃಷ್ಟಿಯಿಂದ ಈ ಎರಡು ದಿನಗಳ ಪರೀಕ್ಷೆಗೆ ಒಪ್ಪಿಗೆ ಸೂಚಿಸಿದ್ದರು.
"ಅದು ಏನು ಮಾಡಬೇಕೋ ಅದನ್ನು ಮಾಡಿದೆ. ಕಸಿ ಮಾಡಲ್ಪಟ್ಟ ಮೂತ್ರಪಿಂಡ ತ್ಯಾಜ್ಯವನ್ನು ಹೊರತೆಗೆದು ಮೂತ್ರ ಉತ್ಪತ್ತಿ ಮಾಡುತ್ತಿದೆ" ಎಂದು ನ್ಯೂಯಾರ್ಕ್ ವಿಶ್ವವಿದ್ಯಾನಿಲಯದ ಕಸಿ ಸಂಸ್ಥೆಯ ನಿರ್ದೇಶಕ ರಾಬರ್ಟ್ ಮೋಂಟ್ ಗೊಮೆರಿ ಎಎಫ್‌ಪಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಪ್ರಮುಖ ಅಂಶವೆಂದರೆ ಈ ಮೂತ್ರಪಿಂಡ, ಕಿಡ್ನಿ ಆರೋಗ್ಯದ ಸೂಚಕ ಎನ್ನಲಾಗುವ ಕ್ರಿಯಾ ಟಿನೈನ್ ಕಣಗಳ ಮಟ್ಟವನ್ನು ತಗ್ಗಿಸುವಲ್ಲಿ ಯಶಸ್ವಿಯಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸುಮಾರು ಎರಡು ಗಂಟೆಗಳ ಕಾಲ ಯಶಸ್ವಿ ಶಸ್ತ್ರಚಿಕಿತ್ಸೆಯನ್ನು ಮೋಂಟ್ ಗೊಮೆರಿ ಮತ್ತು ಅವರ ತಂಡ ನೆರವೇರಿಸಿತು.
ಇವರು ಮೂತ್ರಪಿಂಡವನ್ನು ರೋಗಿಯ ಕಾಲಿನ ರಕ್ತನಾಳಗಳಿಗೆ ಜೋಡಿಸಿದ್ದು, ಇದರಿಂದಾಗಿ ತಪಾಸಣೆ ಮತ್ತು ಬಯಾಪ್ಸಿ ಮಾದರಿ ಪಡೆಯಲು ಸುಲಭವಾಗಲಿದೆ.
ಈ ರೋಗಿ ಅಂಗಾಂಗ ದಾನಿಯಾಗಲು ಬಯಸಿದ್ದರು; ಆದರೆ ಅವರ ಅಂಗಾಂಗ ಹೊಂದಾಣಿಕೆಯಾಗುವುದಿಲ್ಲ ಎಂಬ ಕಾರಣಕ್ಕೆ ಕುಟುಂಬಕ್ಕೆ ನಿರಾಶೆಯಾಗಿತ್ತು ಎಂದು ವಿವರಿಸಿದ್ದಾರೆ.
ಆದರೆ ಅಂಗಾಂಗ ದಾನಕ್ಕೆ ಒದಗಿ ಬಂದ ಮತ್ತೊಂದು ಅವಕಾಶದಿಂದ ಅವರು ನಿರಾಳ ಆದರು. 54 ಗಂಟೆಗಳ ಪರೀಕ್ಷೆ ಬಳಿಕ ರೋಗಿಯ ವೆಂಟಿಲೇಟರ್ ತೆರವುಗೊಳಿಸಲಾಗಿದ್ದು ರೋಗಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಈ ಮುನ್ನ ಹಂದಿ ಕಿಡ್ನಿ ಇತರ ಪ್ರಾಣಿಗಳಿಗೆ ಯೋಗ್ಯ ಎಂದು ಸಾಬೀತಾಗಿತ್ತು. ಆದರೆ ಮನುಷ್ಯನ ಮೇಲೆ ಮೊದಲ ಬಾರಿಗೆ ಈ ಪ್ರಯೋಗ ನಡೆದಿದೆ.