ನವದೆಹಲಿ: ಸಾರಿಗೆ ಕ್ಷೇತ್ರದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ ಉದ್ದೇಶದ, ₹ 100 ಲಕ್ಷ ಕೋಟಿ ವೆಚ್ಚದ 'ಪ್ರಧಾನ ಮಂತ್ರಿ ಗತಿ ಶಕ್ತಿ ರಾಷ್ಟ್ರೀಯ ಯೋಜನೆ'ಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಚಾಲನೆ ನೀಡಿದರು.
'ಸಾರಿಗೆ ವೆಚ್ಚವನ್ನು ತಗ್ಗಿಸುವುದು, ಸರಕು ಸಾಗಣೆ ನಿರ್ವಹಣೆ ಸಾಮರ್ಥ್ಯ ಹೆಚ್ಚಿಸಿ ಆ ಮೂಲಕ ದೇಶದ ಆರ್ಥಿಕತೆಯನ್ನು ವೃದ್ಧಿಸುವುದೇ ಈ ಯೋಜನೆಯ ಗುರಿ' ಎಂದು ಪ್ರಧಾನಿ ಹೇಳಿದರು.
'ವಿವಿಧ ಇಲಾಖೆಗಳ ಕಾರ್ಯಗಳನ್ನು ಒಂದೇ ವೇದಿಕೆಯಡಿ ತರಲು ಈ ಯೋಜನೆ ಒತ್ತು ನೀಡಲಿದ್ದು, ಈ ಕಾರ್ಯಕ್ಕೆ ವೇಗ ನೀಡಲಾಗುವುದು. ವಿವಿಧ ಸಚಿವಾಲಯಗಳು ಹಾಗೂ ರಾಜ್ಯಗಳಲ್ಲಿನ ಮೂಲಸೌಕರ್ಯಗಳ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳನ್ನು ಸಮಾನ ಉದ್ದೇಶವಿರುವಂತೆ ವಿನ್ಯಾಸಗೊಳಿಸಿ, ಅನುಷ್ಠಾನಗೊಳಿಸಲಾಗುವುದು' ಎಂದರು.
'ಗುಣಮಟ್ಟದ ಮೂಲಸೌಕರ್ಯಗಳಿಲ್ಲದೇ ಅಭಿವೃದ್ಧಿ ಸಾಧ್ಯ ಇಲ್ಲ. ಇದಕ್ಕೆ ಹಿಂದಿನ ಸರ್ಕಾರಗಳು ಒತ್ತು ನೀಡಿರಲಿಲ್ಲ. ಹೀಗಾಗಿ, ಸಮಗ್ರ ದೃಷ್ಟಿಕೋನದೊಂದಿಗೆ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಮುಂದಾಗಿದೆ' ಎಂದರು.