ಕಾಸರಗೋಡು: ಕೋವಿಡ್ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಕೇರಳದಿಂದ ಕರ್ನಾಟಕ ಪ್ರವೇಶಿಸಲು ನಿಯಂತ್ರಣ ಹೇರಿರುವ ಕರ್ನಾಟಕ ಸರ್ಕಾರದ ಧೋರಣೆ ವಿರುದ್ಧ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ.
ಈಗಾಗಲೇ ಎರಡು ಡೋಸ್ ವ್ಯಾಕ್ಸಿನ್ ಪಡೆದವರೂ 72ತಾಸಿನೊಳಗಿನ ಆರ್‍ಟಿಪಿಸಿಆರ್ ತಪಾಸಣಾ ವರದಿ ಕಡ್ಡಾಯಗೊಳಿಸಿರುವ ನಿಬಂಧನೆ ರದ್ದುಗೊಳಿಸುವಂತೆ ಹಾಗೂ ಈ ನಿಯಂತ್ರಣಗಳಿಂದ ವಿದ್ಯಾರ್ಥಿಗಳಿಗೆ ರಿಯಾಯಿತಿ ಒದಗಿಸುವಂತೆಯೂ ಆಗ್ರಹಿಸಲಾಗಿದೆ. ಕರ್ನಾಟಕ ಸರ್ಕಾರ ಜಾರಿಗೊಳಿಸಿರುವ ನಿಯಂತ್ರಣ ಮಾನವ ಹಕ್ಕಿನ ಉಲ್ಲಂಘನೆಯಾಗಿದೆ. ಎರಡು ಡೋಸ್ ವ್ಯಾಕ್ಸಿನ್ ಪಡೆದವರಿಗೆ ಆರ್‍ಟಿಪಿಸಿಆರ್ ತಪಾಸಣೆ ಅಗತ್ಯವಿಲ್ಲ ಎಂಬ ಕೇಂದ್ರದ ಆದೇಶಕ್ಕೆ ವಿರುದ್ಧವಾಗಿ ಕರ್ನಾಟಕ ಸರ್ಕಾರ ನಡೆದುಕೊಳ್ಳುತ್ತಿರುವುದಾಗಿ ಅರ್ಜಿಯಲ್ಲಿ ತಿಳಿಸಿದ್ದಾರೆ.
ಇದೇ ವಿಷಯಕ್ಕೆ ಸಂಬಂಧಿಸಿ ಶಾಸಕ ಎ.ಕೆ.ಎಂ ಅಶ್ರಫ್ ಈ ಹಿಂದೆ ಕೇರಳ ಉಚ್ಛ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ಫೈಲ್‍ಗೆ ಸ್ವೀಕರಿಸಲು ಹೈಕೋರ್ಟು ನಿರಾಕರಿಸಿತ್ತು.